ಮೆಕೂನ್ ಚಂಡಮಾರುತದ ಎಫೆಕ್ಟ್: ಮಂಜಿನ ನಗರಿಯಲ್ಲಿ ಮಳೆರಾಯನ ಕಾರುಬಾರು

ಮಡಿಕೇರಿ:  ದಕ್ಷಿಣ ಒಳನಾಡಿನ ಮೆಕೂನ್ ಚಂಡಮಾರುತದ ಎಫೆಕ್ಟ್ ಮಡಿಕೇರಿಗೂ ತಟ್ಟಿದ್ದು, ನಗರದಲ್ಲಿ ಮಳೆಯೊಂದಿಗೆ ಮಂಜು ಮಿಶ್ರಿತ ವಾತಾವರಣ ಕಂಡು ಬಂದಿದೆ. ಬೆಳಿಗ್ಗೆಯಿಂದಲೇ ಮಳೆ ಮೋಡ ಕಂಡು ಬಂದಿದ್ದು ಮಧ್ಯಾಹ್ನದ ನಂತರ ನಿರಂತರವಾಗಿ ಸುರಿದ ಮಳೆ ರಾತ್ರಿಯವರೆಗೆ ಮುಂದುವರಿಯಿತು. ಅದರೊಂದಿಗೆ ಚಳಿಯೂ ಕಂಡು ಬಂದಿದ್ದು, ಉಷ್ಣಾಂಶದಲ್ಲೂ ಕುಸಿತ ಕಂಡಿದೆ. ಮುಂಗಾರು ಪ್ರಾರಂಭಕ್ಕೂ ಮನ್ನವೆ ಮಡಿ ಕೇರಿ ಮಳೆ ಚಳಿಯಿಂದ ತರಗುಟ್ಟುತ್ತಿದೆ. ನಗರದಲ್ಲಿ ದಟ್ಟಮಂಜು ಕವಿದಿದ್ದ ಹಿನ್ನಲೆಯಲ್ಲಿ ವಾಹನ ಸವಾರರು ಹೆಡ್‍ಲೈಟ್ ಬಳಸಿಕೊಂಡೆ ವಾಹನ ಚಲಾಯಿಸುತ್ತಿದ್ದುದು ಕಂಡು ಬಂತು. ಇನ್ನು ಹೊರ ಊರುಗಳಿಂದ ಬಂದಿದ್ದ ಪ್ರವಾಸಿಗರು ಮಂಜಿನ ನಗರಿ ಮಡಿಕೇರಿಯ ವಾತಾವರಣಕ್ಕೆ ಮನಸೋತರಲ್ಲದೆ, ತುಂತುರು ಮಳೆಗೆ ನೆನೆದುಕೊಂಡೆ ನಗರದಲ್ಲಿ ಸಂಚರಿಸುತ್ತಿದ್ದರು. ಶಾಲೆ ಆರಂಭದ 2ನೇ ದಿನವಾದ ಮಂಗಳವಾರ ಬೆಳಿಗ್ಗೆ ಮನೆ ಯಿಂದ ಶಾಲೆಗೆ ಹೋದ ಮಕ್ಕಳು ಸಂಜೆಯ ವೇಳೆಗೆ ಮಳೆಯಲ್ಲಿ ನೆನೆದುಕೊಂಡೆ ಮನೆ ತಲುಪುವಂತಾಯಿತು. ಮಡಿಕೇರಿ ನಗರದಲ್ಲಿ ಈ ಹಿಂದೆ ಒಳ ಚರಂಡಿ ಕಾಮ ಗಾರಿಗಾಗಿ ರಸ್ತೆಗಳನ್ನು ಅಗೆದು ಮರು ಡಾಂಬರೀಕರಣ ಮಾಡದ ಹಿನ್ನಲೆಯಲ್ಲಿ ನಗರ ಬಡಾವಣೆಯ ನಿವಾಸಿಗಳು ಜಲಮಂಡಳಿಗೆ ಹಿಡಿ ಶಾಪ ಹಾಕಿದ್ದಾರೆ.

ಮಡಿಕೇರಿ ಗ್ರಾಮಾಂತರ ಪ್ರದೇಶಗಳಲ್ಲಿ ಕಳೆದೆರಡು ದಿನಗಳ ಹಿಂದೆ ಸುರಿದ ಗಾಳಿ ಮಳೆಗೆ ವಿದ್ಯುತ್ ತಂತಿಗಳ ಮೇಲೆ ಮರ ಮುರಿದು ಬಿದ್ದ ಪರಿಣಾಮ ವಿದ್ಯುತ್ ಪೂರೈಕೆ ಯಲ್ಲಿ ವ್ಯತ್ಯಯವಾಗಿದೆ. ಹೀಗಾಗಿ ಮದೆನಾಡು, ಮಕ್ಕಂದೂರು, ಮುಕ್ಕೋಡ್ಲು, ಸೂರ್ಲಬಿ ಮತ್ತಿತರ ಗ್ರಾಮೀಣ ಭಾಗಗಳು ಕತ್ತಲೆಯಲ್ಲಿ ಮುಳುಗುವಂತಾಗಿದೆ.