ಮೈಸೂರು,ಜು.27(ಆರ್‍ಕೆ)-ವಾರಕ್ಕೆ ನಾಲ್ಕು ದಿನದ ಬದಲಾಗಿ 6 ದಿನಗಳಿಗೆ ಸಂಚರಿಸಲು ವಿಸ್ತರಣೆಗೊಂಡಿರುವ ಮೈಸೂರು-ಬೆಂಗಳೂರು ಮೆಮು ರೈಲು ಸಂಚಾರಕ್ಕೆ ಸಂಸದ ಪ್ರತಾಪ್‍ಸಿಂಹ ಅವರು ಇಂದು ಮೈಸೂರಿನ ರೈಲು ನಿಲ್ದಾಣ ದಲ್ಲಿ ಹಸಿರು ನಿಶಾನೆ ತೋರಿದರು.
ಅತ್ಯಾಧುನಿಕ ಆಸನಗಳು, ಪ್ರಯಾಣಿಕ ಸ್ನೇಹಿ ಸೌಲಭ್ಯಗಳುಳ್ಳ 8 ಬೋಗಿಗಳ ಮೆಮು ರೈಲು ಸಂಚಾರವು ಜುಲೈ 29ರ ನಂತರ (ಸೋಮವಾರದಿಂದ ಶನಿವಾರ ದವರೆಗೆ) ಪ್ರತೀ ದಿನ ಮೈಸೂರು-ಬೆಂಗ ಳೂರು ನಡುವೆ ಸಂಚರಿಸಲಿದೆ.
ಮೈಸೂರು ರೈಲು ನಿಲ್ದಾಣದಲ್ಲಿ ಶನಿ ವಾರ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತ ನಾಡಿದ ಪ್ರತಾಪ್‍ಸಿಂಹ, ಕಾರ್ಯಕ್ಷಮತೆ ಇರುವ ಪ್ರಧಾನ ಮಂತ್ರಿ ಬಂದರೆ ಏನೆಲ್ಲಾ ಬದಲಾವಣೆ ತರಬಹುದೆಂಬುದಕ್ಕೆ ಮೈಸೂರಿನಿಂದ ಸರಣಿಯೋಪಾದಿಯಲ್ಲಿ ರೈಲುಗಳ ಸಂಚಾರಕ್ಕೆ ಚಾಲನೆ ದೊರೆಯುತ್ತಿರುವುದೇ ಸಾಕ್ಷಿ ಎಂದರು.
ಈ ಹಿಂದೆ ಒಂದು ಹೊಸ ರೈಲು ಬರಬೇಕೆಂದರೆ ಕೇಂದ್ರದ ರೈಲ್ವೆ ಬಜೆಟ್ ಅನ್ನೇ ಎದುರು ನೋಡಬೇಕಾಗಿತ್ತು. ತಪ್ಪಿ ದರೆ ಮುಂದಿನ ವರ್ಷದ ಬಜೆಟ್‍ವರೆಗೆ ಕಾಯುವ ಅನಿವಾರ್ಯತೆ ಇತ್ತು. ಆದರೆ ಈಗ ಕಾಲಮಿತಿ ಇಲ್ಲದೇ ಮೈಸೂರಿಗೆ ಹೊಸ ಹೊಸ ರೈಲುಗಳನ್ನು ನೀಡುತ್ತಿರು ವುದು ಸುಧಾರಣೆಯ ಸಂಕೇತವಾಗಿದೆ ಎಂದು ಅವರು ವಿಶ್ಲೇಷಿಸಿದರು.
ಮೈಸೂರಿನ ಹೆಬ್ಬಾಳಿನಲ್ಲಿ ಸಾಫ್ಟ್‍ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ, ನಾಗನಹಳ್ಳಿ ಬಳಿ ಸೆಟಲೈಟ್ ರೈಲ್ವೆ ಸ್ಟೇಷನ್, ಮೈಸೂರು-ಕುಶಾಲನಗರ ರೈಲು ಮಾರ್ಗ, ಮಂಡಕಳ್ಳಿ ವಿಮಾನ ನಿಲ್ದಾಣದ ರನ್‍ವೇ ವಿಸ್ತರಣೆ ಯೋಜನೆಗಳು ಮುಂದಿನ ದಿನಗಳಲ್ಲಿ ಸಾಕಾರಗೊಳ್ಳಲಿವೆ ಎಂದ ಪ್ರತಾಪ್ ಸಿಂಹ, ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಜಿ.ಟಿ.ದೇವೇ ಗೌಡರ ಸಹಕಾರವನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇ ಗೌಡರು ಮಾತನಾಡಿ, ಮೈಸೂರು-ಬೆಂಗ ಳೂರು ನಡುವೆ ಅತ್ಯಾಧುನಿಕ ಆಸನವುಳ್ಳ ಮೆಮು ರೈಲು ವಿಸ್ತರಣೆಯನ್ನು ಮಾಡಿ ರುವುದು ಸಾಮಾನ್ಯ ಜನರಿಗೆ ಅನುಕೂಲ ವಾಗಿದೆ. ಮಂಗಳವಾರ, ಗುರುವಾರ, ಶನಿ ವಾರ ಮಾತ್ರ ಸಂಚರಿಸುವ ವಾರಣಾಸಿ ರೈಲನ್ನು ವಾರದ 6 ದಿನಕ್ಕೂ ವಿಸ್ತರಿಸಿದರೆ ಅನುಕೂಲವಾಗುತ್ತದೆ ಎಂದರು.
ಬೆಂಗಳೂರು ಮೈಸೂರು ನಡುವಿನ ಸಂಚಾರಕ್ಕೆ ಮಧ್ಯಾಹ್ನ 3.30 ರಿಂದ ಸಂಜೆ 5.30ರ ನಡುವೆ ಒಂದು ರೈಲನ್ನು ಪರಿ ಚಯಿಸಬೇಕು. ಮೈಸೂರಿನಿಂದ ಬೆಂಗ ಳೂರಿಗೆ ಹೋಗುವ ರೈಲುಗಳು ಕೆಂಗೇರಿ ಬಳಿ ಬಹಳ ಹೊತ್ತು ನಿಲ್ಲುತ್ತಿರುವುದರಿಂದ ಸಮಯ ವ್ಯರ್ಥವಾಗುತ್ತಿದೆ. ಅದನ್ನು ತಪ್ಪಿಸಬೇಕು, ಪಾಲಹಳ್ಳಿ ಬಳಿ ಬೆಳಿಗ್ಗೆ ಮತ್ತು ಸಂಜೆ ವೇಳೆ ರೈಲು ನಿಲುಗಡೆ ಕೊಟ್ಟರೆ ಕೂಲಿ ಕಾರ್ಮಿಕರು, ಉದ್ಯೋಗಿ ಗಳಿಗೆ ಅನುಕೂಲವಾಗುತ್ತದೆ ಎಂದು ಮರಿತಿಬ್ಬೇಗೌಡರು ಗಮನ ಸೆಳೆದರು.
ಈ ಸಂಬಂಧ ಪಾಲಹಳ್ಳಿ ಭಾಗದ ಕೆಲವರು ಕಾರ್ಯಕ್ರಮ ವೇಳೆ ಹಾಜರಿದ್ದು, ಸಲ್ಲಿಸಿದ ಮನವಿಗೆ ಸ್ಪಂದಿಸಿದ ಸಂಸದ ಪ್ರತಾಪ್‍ಸಿಂಹ, ಪಾಲಹಳ್ಳಿ ಸ್ಟೇಷನ್‍ನಲ್ಲಿ ರೈಲು ನಿಲು ಗಡೆಗೆ ಅನುಮತಿ ದೊರಕಿಸಿಕೊಡಲು ತಾವು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಮೇಯರ್ ಪುಷ್ಪಲತಾ ಜಗನ್ನಾಥ್, ಶಾಸಕ ಎಲ್.ನಾಗೇಂದ್ರ, ರೈಲು ಪ್ರಯಾ ಣಿಕರ ಸಲಹಾ ಸಮಿತಿ ಸದಸ್ಯ ಗಿರಿಧರ್, ನೈರುತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕಿ ಅಪರ್ಣ ಗರ್ಗ್, ಎಡಿಆರ್‍ಎಂ ದೇವ ಸಹಾಯನ್ ಹಾಗೂ ಇತರರು ಈ ಸಂದರ್ಭ ಉಪಸ್ಥಿತರಿದ್ದರು.