ಚಾಮರಾಜನಗರ ಜಿಲ್ಲೆಯಲ್ಲಿ ಹದಗೆಟ್ಟಿರುವ ನೀರು ಶುದ್ಧೀಕರಣ ಘಟಕಗಳ ಶೀಘ್ರ ದುರಸ್ತಿ ಸಂದೇಶರಿಗೆ ಸಚಿವ ಈಶ್ವರಪ್ಪ ಭರವಸೆ

ಚಾಮರಾಜನಗರ, ಮಾ.13-ಚಾಮರಾಜನಗರ ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶ ಗಳಲ್ಲಿ ಅಳವಡಿಸಿರುವ 24 ನೀರು ಶುದ್ಧೀಕರಣ ಘಟಕಗಳು ತಾತ್ಕಾಲಿಕ ದುರಸ್ತಿಯಲ್ಲಿದ್ದು, ಎನ್. ಆರ್.ಡಬ್ಲ್ಯು.ಎಸ್. ಟಾಸ್ಕ್‍ಫೋರ್ಸ್ ಹಾಗೂ ಇತರೆ ಏಜೆನ್ಸಿಗಳ ಮೂಲಕ ಅವುಗಳನ್ನು ಶೀಘ್ರವಾಗಿ ದುರಸ್ತಿಗೊಳಿಸಿ ಸುಸ್ಥಿತಿಯಲ್ಲಿಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಇಂದು ವಿಧಾನ ಪರಿಷತ್ತಿಗೆ ತಿಳಿಸಿದರು.

ಬೇಸಿಗೆ ಕಾಲಿಟ್ಟಿದ್ದು, ಚಾಮರಾಜನಗರ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಉಂಟಾಗಿರುವುದರಿಂದ ಗ್ರಾಮಗಳಲ್ಲಿ ಕೆಟ್ಟು ನಿಂತಿರುವ ನೀರು ಶುದ್ಧಿಕರಣ ಘಟಕಗಳನ್ನು ಕೂಡಲೇ ದುರಸ್ತಿಗೊಳಿಸುವ ಬಗ್ಗೆ ಸಂದೇಶ್ ನಾಗರಾಜ್ ಪ್ರಶ್ನೆಗೆ ಸಚಿವರು ಈ ಭರವಸೆ ನೀಡಿದರು. ಸ್ಥಾಪನೆಯ ಹಂತದಲ್ಲಿರುವ ನೀರಿನ ಘಟಕಗಳನ್ನು ಶೀಘ್ರ ಆರಂಭಿಸಬೇಕೆಂಬ ಸಂದೇಶ್ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಚಾಮರಾಜ ನಗರ ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ ಒಟ್ಟು 211 ನೀರು ಶುದ್ಧೀಕರಣ ಘಟಕಗಳು ಮಂಜೂರಾಗಿದ್ದು, ಈ ಪೈಕಿ 155 ಘಟಕಗಳು ಕಾರ್ಯಾರಂಭ ಮಾಡಿವೆ. 16 ಘಟಕಗಳು ಇನ್ನೂ ಸ್ಥಾಪನೆಯ ಹಂತದಲ್ಲಿದ್ದರೆ, 14ರ ಕಾರ್ಯ ಪ್ರಗತಿಯ ಹಂತದಲ್ಲಿದೆ ಎಂದು ತಿಳಿಸಿದರು.

ಬಸ್ ವ್ಯವಸ್ಥೆ: ಹನೂರು-ಚೆಂಗವಾಡಿ ಕ್ರಾಸ್-ನಾಗನಾಥ-ಭೈರನಾಥ-ತೋಮರ್ ಪಾಳ್ಯ ಮಾರ್ಗದಲ್ಲಿ ಬೆಳಿಗ್ಗೆ 8 ಘಂಟೆಗೆ ಮತ್ತು ಸಂಜೆ 4 ಘಂಟೆಗೆ ಎರಡು ಸುತ್ತುವಳಿಗಳ ಬಸ್ ಸೌಕರ್ಯವನ್ನು ಇದೇ ಏಪ್ರಿಲ್ 1ನೇ ತಾರೀಖಿನಿಂದ ಜಾರಿಗೆ ಬರುವಂತೆ ಕಾರ್ಯಾಚರಿಸಲಾಗುವುದು ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಸಂದೇಶರ ಮತ್ತೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಹನೂರಿನಿಂದ-ಗೂಳ್ಯ ಮತ್ತು ತೋಮರ್‍ಪಾಳ್ಯಕ್ಕೆ ಹೆಚ್ಚುವರಿ ಬಸ್‍ಸೌಲಭ್ಯ ಒದಗಿಸಿ ಗ್ರಾಮೀಣ ಜನರ ಸಂಚಾರಕ್ಕೆ ಅನುಕೂಲ ಮಾಡಿ ಕೊಡುವಂತೆ ಸಂದೇಶ್ ಅವರು ಸಚಿವರ ಗಮನ ಸೆಳೆದಿದ್ದರು. ಹನೂರಿನಿಂದ ಗೂಳ್ಯಕ್ಕೆ (ಬಿ.ಎಂ.ಹಳ್ಳಿ) ಕೊಳ್ಳೇಗಾಲ ಘಟಕದಿಂದ ಬೆಳಗ್ಗೆ 8 ಮತ್ತು ಸಂಜೆ 4 ಘಂಟೆಗೆ ಎರಡು ಸುತ್ತುವಳಿಗಳನ್ನು ಕಾರ್ಯಾಚರಣೆ ಮಾಡಲಾಗಿತ್ತು, ಆದರೆ ಪ್ರಯಾ ಣಿಕರ ಕೊರತೆಯಿಂದ ನಷ್ಟವಾಗಿದ್ದರಿಂದ ಅದನ್ನು ಕಡಿತಗೊಳಿಸಲಾಗಿದೆ ಎಂದು ಸಚಿವರು ವಿವರಿಸಿದರು. ಹನೂರು-ತೋಮರ್ ಪಾಳ್ಯ ಮಾರ್ಗದಲ್ಲಿ ಬೆಳಿಗ್ಗೆ 11.30, ಮಧ್ಯಾಹ್ನ 1.15, 1.45, 2.45, 3.15, ಸಂಜೆ 4.45, 6.15 ಮತ್ತು ರಾತ್ರಿ 8.00 ಘಂಟೆ ಸಮಯದಲ್ಲಿ ಸಾರಿಗೆ ಬಸ್‍ಗಳು ಕಾರ್ಯಾಚರಣೆ ಮಾಡುತ್ತಿವೆ ಎಂದು ಸಚಿವರು ಸಂದೇಶ್ ಅವರ ಇನ್ನೊಂದು ಪ್ರಶ್ನೆಗೆ ತಿಳಿಸಿದರು.