ಮೈಸೂರು, ಫೆ.16(ಪಿಎಂ)- ಚಾಮರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 1.10 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಭಾನುವಾರ ಗುದ್ದಲಿ ಪೂಜೆ ನೆರವೇರಿಸಿದರು.
ರಾಜ್ಯ ಹಣಕಾಸು ಆಯೋಗದ (ಎಸ್‍ಎಫ್‍ಸಿ) ಅನುದಾನ ದಲ್ಲಿ ಪಾಲಿಕೆ ವತಿಯಿಂದ ನಡೆಯುವ ವಿವಿಧ ಅಭಿವೃದ್ಧಿ ಕಾಮ ಗಾರಿಗೆ ಶಾಸಕರು ಗುದ್ದಲಿ ಪೂಜೆ ನೆರವೇರಿಸಿದರು. ಮೈಸೂರಿನ ಯಾದವಗಿರಿಯ ಆಕಾಶವಾಣಿ ವೃತ್ತದ ಬಳಿಯ ಚೆಲುವಾಂಬ ಉದ್ಯಾನವನದ ಸಮಗ್ರ ಅಭಿವೃದ್ಧಿಯ 50 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು.
ಬಳಿಕ ಯಾದವಗಿರಿಯ ಬಯಲು ರಂಗಮಂದಿರದ ಸಮಗ್ರ ಅಭಿವೃದ್ಧಿಯ 10 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಶಾಸಕರು ಭೂಮಿ ಪೂಜೆ ಮಾಡಿದರು. ನಂತರ ಮೇದರ್ ಬ್ಲಾಕ್‍ನ ರಾಮ ಮಂದಿರ ರಸ್ತೆಯಲ್ಲಿರುವ ರಾಜಕಾಲುವೆ ದುರಸ್ತಿಯ 50 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ನಗರಪಾಲಿಕೆ ಸದಸ್ಯರಾದ ಬಿ.ವಿ.ರವೀಂದ್ರ, ಪ್ರಮೀಳಾ ಭರತ್, ಬಿಜೆಪಿ ಮುಖಂಡರಾದ ಗುರುವಿನಾಯಕ್, ಕಿರಣ್ ಬೊಲಾರೆ, ಷಣ್ಮುಗಂ, ಪ್ರಸನ್ನ, ಸೋಮಶೇಖರ್‍ರಾಜು, ಚಿಕ್ಕ ವೆಂಕಟು, ಪಾಲಿಕೆ ವಲಯ ಕಚೇರಿ-4ರ ಅಭಿವೃದ್ಧಿ ಅಧಿಕಾರಿ ಸುನಿಲ್, ಇಂಜಿನಿಯರ್ ರಾಮಣ್ಣ ಮತ್ತಿತರರು ಹಾಜರಿದ್ದರು.