ಪ್ರತಾಪ್ ಸಿಂಹ ಪರ ಬೂತ್ ಮಟ್ಟದಲ್ಲಿ ಮತ ಯಾಚನೆಗೆ ಶಾಸಕ ರಾಮದಾಸ್ ಸೂಚನೆ

ಮೈಸೂರು: ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅವರ ಗೆಲು ವಿಗಾಗಿ ಕಾರ್ಯಕರ್ತರು ಮತದಾನದ ಬೂತ್ ಸಂಖ್ಯೆ ಹಾಗೂ ಕ್ರಮಸಂಖ್ಯೆ ಇರುವ ಮತದಾನದ ಚೀಟಿಯನ್ನು ನೀಡುವ ಮೂಲಕ ಪ್ರಚಾರ ನಡೆಸಬೇಕು ಎಂದು ಶಾಸಕ ಎಸ್.ಎ.ರಾಮದಾಸ್ ಸಲಹೆ ನೀಡಿದರು.

ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ರುವ ತಮ್ಮ ಕಚೇರಿಯಲ್ಲಿ ನಡೆದ ಕೆ.ಆರ್. ಕ್ಷೇತ್ರದ ನಗರಪಾಲಿಕೆ ಹಾಲಿ ಮತ್ತು ಮಾಜಿ ಸದಸ್ಯರು ಹಾಗೂ 270 ಬೂತ್ ಹಂತದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿಯೊಂದು ಬೂತ್‍ಗಳಿಂದ ಹೆಚ್ಚೆಚ್ಚು ಮತಗಳನ್ನು ಪಡೆಯುವ ನಿಟ್ಟಿ ನಲ್ಲಿ ಪ್ರಚಾರ ಕೈಗೊಳ್ಳಬೇಕು ಎಂದರು.
ಏ.8ರಂದು ನಡೆಯುವ ನರೇಂದ್ರ ಮೋದಿಯವರ ಸಮಾವೇಶದ ಹಿನ್ನೆಲೆ ಪ್ರತಿ ಮನೆಗೆ ಭೇಟಿ ನೀಡಿ, ಆಮಂತ್ರಣ ಪತ್ರವನ್ನು ಕಾರ್ಯಕರ್ತರು ನೀಡಬೇಕು. ಹಾಗೆಯೇ ಏ.10ರಂದು ಪ್ರತಾಪ್ ಸಿಂಹ ಅವರು ಕೆ.ಆರ್.ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದು, ಎಲ್ಲಾ ಕಾರ್ಯಕರ್ತರು ಅವರೊಂದಿಗೆ ಭಾಗವಹಿಸಬೇಕು ಎಂದು ಹೇಳಿದರು.

ಪ್ರಚಾರದ ವೇಳೆ 5 ವರ್ಷದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆ ಹಾಗೂ ಸಂಸದರಾಗಿ ಪ್ರತಾಪ್ ಅವರು ಮೈಸೂರು ಭಾಗಕ್ಕೆ ನೀಡಿದ ಕೊಡುಗೆಯನ್ನು ತಿಳಿಸುತ್ತಾ ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿಕೊಳ್ಳ ಬೇಕು ಎಂದರು.
ಮತದಾನ ನಡೆಯುವ ಮುನ್ನಾ ದಿನ ವಿರೋಧಿ ಪಕ್ಷಗಳು ನಡೆಸುವ ಕಾರ್ಯ ಚಟುವಟಿಕೆಗಳ ಮೇಲೆ ಗಮನವಿಡಬೇಕು. ಏಕೆಂದರೆ ನಾವು ಸಾಧನೆಗಳನ್ನು ತಿಳಿಸಿ ಮತ ನೀಡುವಂತೆ ಮನವಿ ಮಾಡಿದ್ದರೆ, ವಿರೋಧಿಗಳು ಹಣ, ಹೆಂಡ ಹಾಗೂ ದೇವರ ಹೆಸರಿನಲ್ಲಿ ಪ್ರಮಾಣ ಮಾಡಿಸಿ ಕೊಂಡು ಮೋಸ ಮಾಡುತ್ತಾರೆ. ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸ ಬೇಕು ಎಂದು ಸೂಚನೆ ನೀಡಿದರು.

ಪ್ರತಿಯೊಂದು ಕ್ಷೇತ್ರದಲ್ಲಿಯೂ ನರೇಂದ್ರ ಮೋದಿಯವರೇ ಸ್ಪರ್ಧಿಸಿದ್ದಾರೆ ಎಂಬ ಭಾವನೆಯಿಂದ ಕೆಲಸ ಮಾಡಿ. ನಮ್ಮೆಲ್ಲರ ಉದ್ದೇಶ ಮತ್ತೆ ಮೋದಿಯವರು ಪ್ರಧಾನಿ ಯಾಗಿಸುವುದಾಗಿದೆ. ಪ್ರತಾಪ್ ಸಿಂಹ ಅವರನ್ನು ಗೆಲ್ಲಿಸುವುದರಿಂದ ಮೋದಿಯ ರನ್ನು ಗೆಲ್ಲಿಸಿದಂತಾಗುತ್ತದೆ. ಅದಲ್ಲದೆ ಈಗಾಗಲೇ ಸಂಸದರಾಗಿ ಅಪಾರ ಕೊಡುಗೆ ಯನ್ನು ನೀಡಿರುವ ಪ್ರತಾಪ್ ಸಿಂಹರಿಂದ ಮತ್ತಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ನೋಡಬಹುದಾಗಿದೆ ಎಂದರು. ಇದೇ ವೇಳೆ ಬೂತ್ ಹಂತದ ಅಧ್ಯಕ್ಷರಿಂದ ನನ್ನ ಬೂತ್‍ನಿಂದಲೇ ಹೆಚ್ಚು ಮತಗಳು ಬರುವಂತೆ ಮಾಡುತ್ತೇನೆ ಎಂದು ರಾಮದಾಸ್ ಸಂಕಲ್ಪ ಮಾಡಿಸಿದರು. ಸಭೆಯಲ್ಲಿ ನಗರ ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್ ಉಪಸ್ಥಿತರಿದ್ದರು.