ಮಹಾರಾಣಿ ಕಾಮರ್ಸ್ ಕಾಲೇಜು ಆವರಣದಲ್ಲಿ ಭದ್ರತಾ ಸಿಬ್ಬಂದಿಗಾಗಿ ಮೊಬೈಲ್ ಟಾಯ್ಲೆಟ್

ಮೈಸೂರು: ಲೋಕಸಭಾ ಚುನಾವಣೆಯ ಇವಿಎಂಗಳನ್ನು ಕಾಯಲು ನೇಮಿಸಿರುವ ಪೊಲೀಸ್ ಸಿಬ್ಬಂದಿಗಳಿಗಾಗಿ ಮೈಸೂರಿನ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಆವರಣದಲ್ಲಿ ಮೊಬೈಲ್ ಟಾಯ್ಲೆಟ್‍ಗಳನ್ನು ನಿರ್ಮಿಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ತಿಳಿಸಿದ್ದಾರೆ.

ಸ್ಟ್ರಾಂಗ್ ರೂಂ ಭದ್ರತೆಗಾಗಿ ನಿಯೋಜಿಸಿರುವ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ ಸಿಬ್ಬಂದಿ ಗಳು ಮಹಾರಾಣಿ ಕಾಲೇಜಿನ ಕಟ್ಟಡ ಪ್ರವೇಶಿಸಲು ಅವಕಾಶ ನೀಡದಿರುವುದರಿಂದ ಶೌಚಾಲಯಕ್ಕೆ ಹೋಗಲು ತೀವ್ರ ತೊಂದರೆಯಾಗುತ್ತಿದೆ ಎಂದು ಸ್ಥಳೀಯ ಸಿವಿಲ್ ಪೊಲೀಸರು ತಮ್ಮ ಅಳಲು ತೋಡಿಕೊಂಡಿದ್ದರು. ಈ ಸಂಬಂಧ ಸಂಪರ್ಕಿಸಿದ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಕೆ.ಟಿ.ಬಾಲಕೃಷ್ಣ ಅವರು, ಕಾಲೇಜು ಆವರಣದಲ್ಲಿ ಬಂದೋಬಸ್ತ್ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳೀಯ ಸಿವಿಲ್ ಪೊಲೀಸರಿಗೆ ಕಾಲೇಜು ಕಟ್ಟಡ ಪ್ರವೇಶಿಸದಂತೆ ಭಾರತ ಚುನಾವಣಾ ಆಯೋಗವು ಕಟ್ಟುನಿಟ್ಟಿನ ಆದೇಶ ನೀಡಿರುವುದರಿಂದ ಅವರಿಗಾಗಿ ಹತ್ತಿರದ ವಿವಿ ಪುರಂ ಪೊಲೀಸ್ ಠಾಣೆ, ಜಯಲಕ್ಷ್ಮಿ ಪುರಂ ಪೊಲೀಸ್ ಠಾಣೆ ಅಥವಾ ಹುಣಸೂರು ರಸ್ತೆಯಲ್ಲಿರುವ ಜಲದರ್ಶಿನಿ ಅತಿಥಿ ಗೃಹದ ಶೌಚಾಲಯಕ್ಕೆ ಹೋಗಿ ಬರಲು ಪೊಲೀಸ್ ವಾಹನಗಳನ್ನು ವ್ಯವಸ್ಥೆ ಮಾಡಿದ್ದು, ಅವರನ್ನು ಕಳುಹಿಸಿ ಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆದರೂ ಶೌಚಾಲಯ ಸಮಸ್ಯೆ ಎದುರಾಗುತ್ತಿದೆ ಎಂಬ ವಿಷಯ ತಿಳಿಯುತ್ತಿದ್ದಂತೆಯೇ ಕಾಲೇಜಿನ ಮುಂಭಾಗ ಎರಡೂ ಬದಿಯ ಪ್ರವೇಶ ದ್ವಾರದಲ್ಲಿರುವ ಸೆಕ್ಯೂರಿಟಿ ಕೊಠಡಿಯಲ್ಲಿನ ಶೌಚಾಲಯ ಬಳಸಿಕೊಳ್ಳುವಂತೆ ತಿಳಿಸಲಾಗಿದೆ. ಅಲ್ಲದೆ, ಮೈಸೂರು ಮಹಾನಗರ ಪಾಲಿಕೆ ಕಮೀಷ್ನರ್ ಜೊತೆ ಮಾತನಾಡಿ ಕಾಲೇಜು ಆವರಣದಲ್ಲಿ ಭದ್ರತಾ ಸಿಬ್ಬಂದಿಗಳಿಗಾಗಿ ಕನಿಷ್ಠ ಎರಡು ಮೊಬೈಲ್ ಶೌಚಾಲಯಗಳನ್ನು ವ್ಯವಸ್ಥೆ ಮಾಡುವಂತೆ ಕೇಳಿಕೊಳ್ಳಲಾಗಿದ್ದು, ನಾಳೆ (ಏ.22) ಅವರು ಸೌಲಭ್ಯ ಒದಗಿಸಲಿದ್ದಾರೆ ಎಂದರು.