ವಿಷ ಸೇವಿಸಿ ತಾಯಿ, ಮಗಳು ಆತ್ಮಹತ್ಯೆ

ಮೈಸೂರು: ಖಿನ್ನತೆಗೆ ಒಳಗಾಗಿ ವಿಷ ಸೇವಿಸಿದ್ದ ತಾಯಿ ಮತ್ತು ಮಗಳು ಚಿಕಿತ್ಸೆ ಫಲಕಾರಿಯಾಗದೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಶನಿ ವಾರ ಸಂಜೆ ಮೃತಪಟ್ಟಿದ್ದಾರೆ.

ಪಿರಿಯಾಪಟ್ಟಣದ ಪರಿಸರನಗರದ ಸಣ್ಣನಾಯಕರ ಪತ್ನಿ ಸರಸ್ವತಿ (45) ಹಾಗೂ ಪುತ್ರಿ ಸುಮಾ (20) ಸಾವನ್ನಪ್ಪಿದವರು. ಹುಟ್ಟು ಅಂಗವೈಕಲ್ಯ ಹೊಂದಿದ್ದ ಪುತ್ರಿ ಸುಮಾ ಭವಿಷ್ಯದ ಬಗ್ಗೆ ತಾಯಿ ಸರಸ್ವತಿ ಚಿಂತೆಗೀಡಾಗಿದ್ದರು. ಅಂಗವಿಕಲ ಮಗಳನ್ನು ಯಾರು ತಾನೆ ಮದುವೆ ಆಗುತ್ತಾರೆ ಎಂಬ ಚಿಂತೆಯಲ್ಲಿ ಸರಸ್ವತಿ ಖಿನ್ನತೆಗೆ ಒಳಗಾದ ಹಿನ್ನೆಲೆಯಲ್ಲಿ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಶುಕ್ರವಾರ ರಾತ್ರಿ ತಾಯಿ ಮತ್ತು ಮಗಳು ಇಬ್ಬರು ವಿಷ ಸೇವನೆ ಮಾಡಿದ್ದು, ಕೂಡಲೇ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಶನಿವಾರ ಸಂಜೆ ಚಿಕಿತ್ಸೆಗೆ ಸ್ಪಂದಿಸದೇ ಇಬ್ಬರೂ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಮೃತದೇಹಗಳನ್ನು ಒಪ್ಪಿಸಿರುವ ಪಿರಿಯಾಪಟ್ಟಣ ಪೊಲೀಸರು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.