ಹಾಸನದಲ್ಲಿ ಶೀಘ್ರವೇ ಸುಸಜ್ಜಿತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ

ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಸಚಿವ ಹೆಚ್.ಡಿ.ರೇವಣ್ಣ ಘೋಷಣೆ
ಹಾಸನ,ಜು.1- ನಗರದಲ್ಲಿ ಶೀಘ್ರದಲ್ಲೇ ಸುಸಜ್ಜಿತ ಮಲ್ಟಿ ಸ್ಪೆಷಾ ಲಿಟಿ ಆಸ್ಪತ್ರೆ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಪ್ರಕಟಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ವೈದ್ಯರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಅವರು, ಜಿಲ್ಲೆಯಲ್ಲಿ ಶಿಕ್ಷಣ ಕ್ಷೇತ್ರದಂತೆ ವೈದ್ಯಕೀಯ ಕ್ಷೇತ್ರವೂ ಪ್ರಥಮ ಸ್ಥಾನಕ್ಕೇರಬೇಕು ಎಂಬುದು ನಮ್ಮ ನಿರೀಕ್ಷೆ. ಬೆಂಗಳೂರಿನ ವೈದ್ಯಕೀಯ ಕಾಲೇಜು ಮಾದರಿಯಲ್ಲಿ ಹೊಸ ವಿಷಯಗಳನ್ನು ಒಳಗೊಂಡ ಕಾಲೇಜು ಸದ್ಯದಲ್ಲೇ ಪ್ರಾರಂಭವಾಗಲಿದೆ. ಜಿಲ್ಲೆಯಲ್ಲಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ಅನುದಾನ ನೀಡಲಾಗಿದೆ ಆದರೆ ವೈದ್ಯರು ಹಾಗೂ ಸಹಾಯಕ ಸಿಬ್ಬಂದಿಗಳ ಸೇವಾ ಮನೋಭಾವ ವೃದ್ಧಿಯಾಗಬೇಕಿದೆ ಎಂದು ಹೇಳಿದರು.

ವೈದ್ಯರು ಹಾಗೂ ಶಿಕ್ಷಕರ ಸೇವೆ ಅತ್ಯಂತ ಮಹತ್ವದ್ದಾಗಿದ್ದು ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಎರಡೂ ಕ್ಷೇತ್ರಗಳ ಜವಾಬ್ದಾರಿ ದೊಡ್ಡದಿದೆ. ವೈದ್ಯರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ ಮಾತನಾಡಿ, ವೈದ್ಯ ವೃತ್ತಿ ಭಾರೀ ಜವಾ ಬ್ದಾರಿಯುತ ಕೆಲಸ. ಪ್ರಾಣ ಉಳಿಸುವ ಶಕ್ತಿ ಅದಕ್ಕಿದೆ. ಕೆಲವೊಮ್ಮೆ ವೈದ್ಯರ ವಿರುದ್ಧ ಬರುವ ದೂರು ಸತ್ಯವಾಗಿರುವುದಿಲ್ಲ. ಸರ್ಕಾರಿ ಆಸ್ಪತ್ರೆಗಳ ವೈದ್ಯರು ಖಾಸಗಿ ವೈದ್ಯರಿಗಿಂತ ಉತ್ತಮ ಚಿಕಿತ್ಸೆ ನೀಡುತ್ತಿರುವುದು ಪ್ರಶಂಸನೀಯ ಎಂದರು.

ಆಸ್ಪತ್ರೆಗಳಲ್ಲಿ ಸಮರ್ಪಕ ಮೂಲ ಸೌಕರ್ಯ ಒದಗಿಸಬೇಕು. ಬಡ ರೋಗಿಗಳಿಗೆ ನೆರವಾಗಲು ವೈದ್ಯರು ಸ್ಪಂದಿಸಬೇಕು. ವೈದ್ಯಕೀಯ ಕ್ಷೇತ್ರಕ್ಕೆ ಜಿಪಂನಿಂದ ಪೂರ್ಣ ಸಹಕಾರ ನೀಡಲಾಗುವುದು ಎಂದರು.

ಜಿಪಂ ಉಪಾಧ್ಯಕ್ಷ ಸ್ವರೂಪ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಕೃಷ್ಣಮೂರ್ತಿ, ಡಾ.ಸತೀಶ್, ಜಿಲ್ಲಾ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ.ಕಾಂತರಾಜು ಮತ್ತಿತರರಿದ್ದರು.

ಕೆಎಂಸಿ ಆಸ್ಪತ್ರೆಯಿಂದ ಇಸಿಜಿ ಯಂತ್ರ ಕೊಡುಗೆ
ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯ ಹೃದಯರೋಗ ವಿಭಾಗದ ಮುಖ್ಯಸ್ಥ ಡಾ.ಪದ್ಮನಾಭ ಕಾಮತ್ ಅವರ ನೇತೃತ್ವದಲ್ಲಿ ಕಾರ್ಡಿಯಾಲಜಿ ಹ್ಯಾಟ್ ಡೋರ್ ಸ್ಟೆಪ್ ಗ್ರೂಪ್ ವತಿಯಿಂದ ಹತ್ತು ಇ.ಸಿ.ಜಿ ಯಂತ್ರಗಳನ್ನು ಹಾಸನ ಜಿಲ್ಲೆಯ ವಿವಿಧ ಪ್ರಾಥ ಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಉಚಿತವಾಗಿ ವಿತರಿಸಲಾಯಿತು.