ವಯೋವೃದ್ಧೆ ಕೊಲೆ ಪ್ರಕರಣ: ಆರೋಪಿ ಬಂಧನ

ಮದ್ದೂರು:  ತಾಲೂಕಿನ ನಗರಕೆರೆಯಲ್ಲಿ ನಡೆದ ವಯೋವೃದ್ಧೆ ಬೆಟ್ಟಮ್ಮ ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಮದ್ದೂರು ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ನಗರಕೆರೆ ನಿವಾಸಿ ಎಸ್.ಸಿ.ಅಶ್ವಥ್ ಬಿನ್ ಲೇ.ಚಿಕ್ಕಣ್ಣ ಬಂಧಿತ ಆರೋಪಿ. ಕಳೆದ ಮೇ.14ರಂದು ಮಧ್ಯಾಹ್ನ ಬೆಟ್ಟಮ್ಮ ಅವರು ಮನೆಯಲ್ಲಿ ಒಬ್ಬರೇ ಇದ್ದಾಗ ಅಶ್ವಥ್ ಮನೆಗೆ ನುಗ್ಗಿ ಚಿನ್ನಾಭರಣ ಕದಿಯಲು ಪ್ರಯತ್ನಿಸಿದ್ದಾನೆ. ಈ ವೇಳೆ ವಿರೋಧ ವ್ಯಕ್ತಪಡಿಸಿದ ಬೆಟ್ಟಮ್ಮಳನ್ನು ಹತ್ಯೆ ಮಾಡಿ ಆಕೆಯ ಮೈಮೇಲಿದ್ದ ಚಿನ್ನಾಭರಣ ಕಳವು ಮಾಡಿ, ಪ್ರಕರಣ ಮುಚ್ಚಿ ಹಾಕುವ ಉದ್ದೇಶದಿಂದ ಯಾವುದೋ ಎಣ್ಣೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದ. ಈ ಸಂಬಂಧ ಬೆಟ್ಟಮ್ಮಳ ಪುತ್ರ ನಾಗರಾಜು ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಆರೋಪಿ ಪತ್ತೆಗಾಗಿ ಜಿಲ್ಲಾ ಎಸ್ಪಿ ಶಿವಪ್ರಕಾಶ್ ದೇವರಾಜ್, ಎಎಸ್‍ಪಿ ಲಾವಣ್ಯ, ಡಿವೈಎಸ್‍ಪಿ ಮಲ್ಲಿಕ್ ಮಾರ್ಗದರ್ಶನದಲ್ಲಿ ಸಿಪಿಐ ಕೆ.ಪ್ರಭಾಕರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಮದ್ದೂರು ಪೊಲೀಸರು ಖಚಿತ ಮಾಹಿತಿ ಮೇರೆಗೆ ಆ.25ರಂದು ಆರೋಪಿಯನ್ನು ಮದ್ದೂರಿನ ಶಿವಪುರದ ಬಳಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯಿಂದ ಬೆಟ್ಟಮ್ಮಳ ಮೈಮೇಲಿದ್ದ ಚಿನ್ನಾಭರಣ ಹಾಗೂ ಒಂದು ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಮದ್ದೂರು ಪೊಲೀಸ್ ಠಾಣೆ ಎಸ್‍ಐ ಕುಮಾರ್, ಸಿಬ್ಬಂದಿಗಳಾದ ಎಎಸ್‍ಐ ಮಹದೇವಯ್ಯ, ಕರಿಗಿರಿಗೌಡ, ನಟರಾಜ, ಕುಮಾರಸ್ವಾಮಿ, ಭರತ್, ವಿಠ್ಠಲ್ ಜೆ.ಕೆ. ಶರತ್, ಚಿರಂಜೀವಿ.ಪಿ, ಬಸವರಾಜ್ ಡಿ, ಹೆಚ್.ಸುಲ್ತಾನ್, ಜೀಪ್ ಚಾಲಕ ಪ್ರೀತಿ ಕುಮಾರ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.