ಮೈಸೂರು: ರಸ್ತೆ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಲು ಮೈಸೂರು ಮಹಾನಗರಪಾಲಿಕೆ ಕೈಗೊಂಡಿದ್ದ ಕಾರ್ಯಾಚರಣೆಗೆ ನಗರದ ಪ್ರಧಾನ ಸಿವಿಲ್ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ ಎಂದು ಕರ್ನಾಟಕ ರಾಜ್ಯ ರಸ್ತೆಬದಿ ವ್ಯಾಪಾರಿ ಗಳ ಮಹಾಮಂಡಳದ ಕಾನೂನು ಸಲಹೆಗಾರ ಜಿ.ಕೆ.ಜೋಷಿ ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಸ್ತೆ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಏಕಾಏಕಿ ತೆರವು ಕಾರ್ಯಾಚರಣೆ ಸರಿಯಲ್ಲ. ಹೀಗಾಗಿ ಪಾಲಿಕೆಯ ಕಾರ್ಯಾಚರಣೆಗೆ ತಡೆಯೊಡ್ಡ ಬೇಕೆಂದು ರಾಜ್ಯ ರಸ್ತೆ ಬದಿ ವ್ಯಾಪಾರಿಗಳ ಮಹಾಮಂಡಲದಿಂದ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಕಾರ್ಯಾ ಚರಣೆಗೆ ತಡೆ ನೀಡಿ ಆದೇಶಿಸಿದೆ ಎಂದರು. ಮಹಾಮಂಡಳದ ಅಧ್ಯಕ್ಷ ಭಾಸ್ಕರ್ ಶ್ರೀನಿವಾಸ ರಾಜೇ ಅರಸ್ ಮಾತನಾಡಿ, ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಏಕಾಏಕಿ ರಸ್ತೆಬದಿ ವ್ಯಾಪಾರಿ ಗಳನ್ನು ತೆರವುಗೊಳಿಸಲು ನಿರ್ಣಯಿಸಿದ್ದು ಖಂಡನೀಯ. ಇದರಿಂದ ನಗರದಲ್ಲಿರುವ ಸಾವಿರಾರು ಬೀದಿಬದಿ ವ್ಯಾಪಾರಿಗಳ ಜೀವನ ನಿರ್ವಹಣೆಗೆ ತೊಂದರೆಯಾಗಿದೆ. ಇನ್ನು 2010-11ರಲ್ಲಿ ಪಾಲಿಕೆ ನಡೆಸಿದ ಸರ್ವೆಯಲ್ಲಿ ನೋಂದಣಿ ಮಾಡಿಕೊಂಡ ವ್ಯಾಪಾರಿಗಳನ್ನು ಯಾವುದೇ ಕಾರಣಕ್ಕೂ ತೆರವು ಮಾಡಬಾರದು. ಈ ಬಗ್ಗೆ ನ್ಯಾಯಾಲಯವು ತಡೆ ಯಾಜ್ಞೆ ನೀಡಿದೆ ಎಂದರು. ಮಹಾಮಂಡಳದ ಪದಾಧಿಕಾರಿಗಳಾದ ಎನ್.ಚಂದ್ರಶೇಖರ್, ಎಂ.ಮಂಜುನಾಥ್, ಆರ್.ಗುರುಸ್ವಾಮಿ, ರಾಮಣ್ಣ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.