ಸಾಂಕ್ರಾಮಿಕ ರೋಗ ಹರಡದಂತೆ ಕಟ್ಟೆಚ್ಚರ ವಹಿಸಲು ಮೈಸೂರು ಡಿಸಿ ಸೂಚನೆ

ಮೈಸೂರು: ಮಳೆ ಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ, ಸ್ವಚ್ಛತೆ ಕಾಪಾಡುವುದರೊಂದಿಗೆ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಂಡು ಸಾಂಕ್ರ್ರಾಮಿಕ ರೋಗಗಳು ಹರಡದಂತೆ ಎಲ್ಲಾ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸೂಚನೆ ನೀಡಿದ್ದಾರೆ.

ಮೈಸೂರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತಾದ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಮಳೆ ಆರಂಭ ವಾಗಿದ್ದು ಸಾಂಕ್ರಾಮಿಕ ರೋಗ ಹರಡುವ ಆತಂಕವಿದೆ. ಮಳೆ ನೀರು ಎಲ್ಲೆಂದರಲ್ಲಿ ನಿಲ್ಲುವುದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯೊಂದಿಗೆ ಸಂಬಂಧ ಪಟ್ಟ ಎಲ್ಲಾ ಇಲಾಖೆ ಕೈಜೋಡಿಸಿ ರೋಗ ಹರಡದಂತೆ ಕಟ್ಟೆಚ್ಚರವಹಿಸಬೇಕು ಎಂದು ಆದೇಶಿಸಿದರು.

ಸಾಮಾನ್ಯವಾಗಿ ಸಾಂಕ್ರಾಮಿಕ ರೋಗ ಆಹಾರ, ನೀರು, ಗಾಳಿಯಿಂದಾಗಿ ಹರಡು ತ್ತವೆ. ಈ ಹಿನ್ನೆಲೆಯಲ್ಲಿ ರೋಗ ಹರಡ ದಂತೆ ಯಾವ ಕ್ರಮ ಕೈಗೊಳ್ಳಬೇಕು. ಶುದ್ಧ ಕುಡಿಯುವ ನೀರು ಸರಬರಾಜು ಮಾಡಬೇಕು. ಚರಂಡಿಯಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು. ನೀರು ಸರಾಗವಾಗಿ ಹರಿದು ಹೋದರೆ ಸೊಳ್ಳೆ ಉತ್ಪತ್ತಿಯಾಗುವುದಿಲ್ಲ. ಪ್ರತಿದಿನ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಮರ್ಪಕ ವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು. ಯಾವ ಯಾವ ಇಲಾಖೆ ಗಳ ಪಾತ್ರ ಏನೆಂಬುದನ್ನು ಅರಿತು ಪರಸ್ಪರ ಸಹಕಾರದಿಂದ ಸಾಂಕ್ರಾಮಿಕ ರೋಗ ಹರಡದಂತೆ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕುಸುಮ ಮಾತನಾಡಿ, 2018ರಲ್ಲಿ ದೃಢೀಕೃತ ಹೆಚ್1ಎನ್1 93(612) ಪ್ರಕರಣ, ವೈರಲ್ ಹೆಪಟೈಟೀಸ್ 21 ಪ್ರಕರಣ, 754 ವಿಷಮ ಶೀತ ಜ್ವರ ಪ್ರಕರಣ ದಾಖಲಾಗಿತ್ತು. 2019ನೇ ಸಾಲಿನಲ್ಲಿ ಏಪ್ರಿಲ್‍ವರೆಗೆ ಹೆಚ್1 ಎನ್1 123(439), ವೈರಲ್ ಹೆಪಟೈಟೀಸ್ 18, ವಿಷಮಶೀತ 559 ಪ್ರಕರಣ ದಾಖ ಲಾಗಿವೆ. ಸಾಂಕ್ರಾಮಿಕ ರೋಗ ಹರಡ ದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳ ಲಾಗಿದೆ ಎಂದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗ ಗಳ ನಿಯಂತ್ರಣಾಧಿಕಾರಿ ಡಾ.ಎಸ್. ಚಿದಂಬರ ಮಾತನಾಡಿ, ಮಳೆಗಾಲದಲ್ಲಿ ಸ್ವಚ್ಛತೆ ಕಾಪಾಡಿಕೊಂಡರೆ ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಗಟ್ಟ ಬಹುದು. ನಿಂತ ನೀರು, ಚರಂಡಿಯಲ್ಲಿ ಸೊಳ್ಳೆ ಉತ್ಪತ್ತಿಯಾದರೆ ಮಲೇರಿಯಾ, ಡೆಂಗ್ಯೂ, ಚಿಕುನ್‍ಗುನ್ಯಾ, ಆನೆಕಾಲು ರೋಗ ಬರುತ್ತದೆ. ನೀರಿನಿಂದ ಟೈಫಡ್, ಕಾಲರ, ಹೆಪಟೈಟೀಸ್ ರೋಗಕ್ಕೆ ತುತ್ತಾಗು ತ್ತಾರೆ. ಗಾಳಿಯಿಂದ ಟಿಬಿ, ಹೆಚ್1ಎನ್1 ಹಾಗೂ ಇನ್ನಿತರ ರೋಗ ಹರಡುತ್ತದೆ. ಈ ಹಿನ್ನೆಲೆಯಲ್ಲಿ ಸ್ವಚ್ಛತೆ ಕಾಪಾಡಿ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಿದರೆ ರೋಗ ನಿಯಂತ್ರಣ ಸಾಧ್ಯ ಎಂದರು.
ಸಭೆಯಲ್ಲಿ ಪಾಲಿಕೆ, ಮುಡಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಲೋಕ ಯೋಗಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡು, ತಮ್ಮ ತಮ್ಮ ಇಲಾಖೆಗಳ ಜವಾಬ್ದಾರಿ ಯನ್ನು ನಿಭಾಯಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಸರ್ಜನ್ ಡಾ.ಲಕ್ಷ್ಮಣ್, ಕಾಲರಾ ನಿಯಂ ತ್ರಣಾಧಿಕಾರಿ ಡಾ.ಉಮೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಡಾ.ಪದ್ಮಾ, ಜಿಲ್ಲಾ ಸಾಂಕ್ರಾಮಿಕ ಶಾಸ್ತ್ರಜ್ಞೆ ಡಾ. ಕವಿತಾ, ಪಾಲಿಕೆ ಹೆಲ್ತ್ ಇನ್ಸ್‍ಪೆಕ್ಟರ್ ತಪಸಮ್, ಮೈಸೂರು ಮೆಡಿಕಲ್ ಕಾಲೇಜಿನಿಂದ ಡಾ.ಮುದಾ ಸಿರ್ ಅಹಮದ್ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳು ಪಾಲ್ಗೊಂಡಿದ್ದರು.