ಮೈಸೂರು ಜಿಲ್ಲೆಯಲ್ಲಿ 21995, ಚಾ.ನಗರ 832, ಕೊಡಗಲ್ಲಿ 12191 ಆದಿವಾಸಿ ಜೇನು ಕುರುಬರಿದ್ದಾರೆ

ಬೆಳಗಾವಿ: ಮೈಸೂರು ಜಿಲ್ಲೆಯಲ್ಲಿ 21995, ಚಾಮರಾಜನಗರ ಜಿಲ್ಲೆಯಲ್ಲಿ 832 ಮತ್ತು ಕೊಡಗು ಜಿಲ್ಲೆಯಲ್ಲಿ 12191 ಆದಿವಾಸಿ ಜೇನು ಕುರುಬ ಜನಾಂಗದವರಿದ್ದಾರೆ. ರಾಜ್ಯದ ಮೂಲ ನಿವಾಸಿ ಬುಡಕಟ್ಟು ಸಮುದಾಯಗಳಾದ ಜೇನುಕುರುಬ ಮತ್ತು ಕೊರಗ ಸಮು ದಾಯಗಳ ಬೇಸ್‍ಲೈನ್ ಸರ್ವೇ ಕಾರ್ಯ ಕೈಗೊಳ್ಳಲಾಗುತ್ತಿದೆ. ಸದ್ಯಕ್ಕೆ ಕ್ಷೇತ್ರಕಾರ್ಯ ಪೂರ್ಣಗೊಂಡಿದೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಇಂದು ವಿಧಾನ ಪರಿಷತ್ತಿಗೆ ತಿಳಿಸಿದರು.

ಮೈಸೂರು ಚಾಮರಾಜನಗರ ಜಿಲ್ಲೆಗಳಲ್ಲಿರುವ ಆದಿವಾಸಿ ಜೇನುಕುರುಬರ ಬಗ್ಗೆ ಸರ್ವೇ ನಡೆಸಿ, ಅವರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಸಂದೇಶ್ ನಾಗರಾಜ್ ಅವರು ಕೇಳಿದ್ದ ಪ್ರಶ್ನೆಗೆ ಸಚಿವರು ಉತ್ತರ ನೀಡಿದರು. ಪ್ರಸ್ತುತ ಸರ್ವೇ ಕಾರ್ಯದ ವರದಿ ತಯಾರಿಕಾ ಹಂತದಲ್ಲಿದೆ. ಪೂರ್ಣ ವರದಿ ಸ್ವೀಕೃತವಾದ ನಂತರ ಈ ಜನಾಂಗದವರ ಅಭಿವೃದ್ಧಿಗೆ ಸೂಕ್ತ ಯೋಜನೆಗಳನ್ನು ರೂಪಿಸಿ ಕ್ರಮ ವಹಿಸಲಾಗುವುದು ಎಂದು ಸಚಿವರು ತಿಳಿಸಿದರು.
ದೊಡ್ಡ ಅರಸನ ಕೊಳ ಅಭಿವೃದ್ಧಿ: ಚಾಮರಾಜನಗರದ ಇತಿಹಾಸ ಪ್ರಸಿದ್ಧ ದೊಡ್ಡ ಅರಸನ ಕೊಳವು ನಿರ್ವಹಣೆ ಇಲ್ಲದೆ ಹಾಳು ಬಿದ್ದಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ದೊಡ್ಡ ಅರಸನ ಕೊಳದಲ್ಲಿ ಇಡೀ ವರ್ಷ ನೀರು ತುಂಬಿಸಿ, ಸುತ್ತಲೂ ಉದ್ಯಾ ನವನ ನಿರ್ಮಿಸಿ, ನಾಗರಿಕರಿಗೆ ವಿಹಾರಕ್ಕೆ ಒದಗಿಸಿಕೊಡುವುದಾಗಿ ಸಂದೇಶ್ ನಾಗರಾಜ್ ಅವರ ಮತ್ತೊಂದು ಪ್ರಶ್ನೆಗೆ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು.

ದೊಡ್ಡ ಅರಸನ ಕೊಳಕ್ಕೆ ಈಗಾಗಲೇ ಬಂಜಾರಾ ಸ್ಕೂಲ್ ಪಕ್ಕದಲ್ಲಿರುವ ಹಳ್ಳದಿಂದ ಪೈಪ್ ಲೈನ್ ಅಳವಡಿಸಿದ್ದು, ಮಳೆಗಾಲದಲ್ಲಿ ಹಳ್ಳದಲ್ಲಿ ನೀರು ಬಂದಾಗ ಮಾತ್ರ ಕೊಳ ತುಂಬಿ ಕೊಳ್ಳುತ್ತಿದೆ. ಇಲ್ಲಿಗೆ 4 ಕಿ.ಮೀ ದೂರದಲ್ಲಿರುವ ಮಾಲಗೆರೆ ಕೆರೆಯಿಂದ ಹೊಸದಾಗಿ ಪೈಪ್‍ಲೈನ್ ಅಳವಡಿಸಿದಲ್ಲಿ ವರ್ಷವಿಡೀ ನೀರು ತುಂಬುವ ಹಾಗೆ ಮಾಡಬಹುದೆಂದು ಸಚಿವರು ಹೇಳಿದರು. ದೊಡ್ಡರಸನ ಕೊಳದ ಸುತ್ತಲೂ ನಾಗರಿಕರಿಗೆ ವಿಹಾರ ಸ್ಥಳ ಮಾಡಿ, ಸುತ್ತಲು ವಿದ್ಯುತ್ ದೀಪಗಳನ್ನು ಅಳವಡಿಸಿ, ಹಿರಿಯ ನಾಗರಿಕರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡುವ ಬಗ್ಗೆ ಅನುದಾನ ಲಭ್ಯತೆಯ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದೆಂದು ಸಚಿವರು ವಿವರಿಸಿದರು.