ಮೈಸೂರು ಸಯ್ಯಾಜಿರಾವ್ ರಸ್ತೆಯಲ್ಲಿ  ವಾಹನ ಸಂಚಾರಕ್ಕೆ `ಅಡ್ಡ’ ದಾರಿ

Sayyaji Rao Road

ಮೈಸೂರು:  ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ಸಂಚಾರಕ್ಕೆ ಇನ್ನೂ ಬ್ರೇಕ್ ಬಿದ್ದಿಲ್ಲ.

ಕೃಷ್ಣರಾಜ ವೃತ್ತದಿಂದ ಸರ್ಕಾರಿ ಆಯುರ್ವೇದ ವೃತ್ತದವರೆಗೆ ಅಳವಡಿಸಿ ರುವ ಬ್ಯಾರಿಕೇಡ್‍ಗಳು ಅಸ್ತವ್ಯಸ್ತವಾಗಿದ್ದು, ಅಲ್ಲಲ್ಲಿ ಬ್ಯಾರಿಕೇಡ್‍ಗಳನ್ನು ಸರಿಸಿ, ಅಡ್ಡಾ ದಿಡ್ಡಿ ವಾಹನ ಚಾಲಿಸುವ ಪರಿಪಾಟ ಇಂದಿಗೂ ಮುಂದುವರಿದಿದೆ. ಪರಿಣಾಮ ಸುಗಮ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿ, ಸಾರ್ವಜನಿಕರು ತೊಂದರೆ ಅನುಭವಿ ಸುವಂತಾಗಿದೆ. ದಸರಾ ಜಂಬೂ ಸವಾರಿ ಇದೇ ಮಾರ್ಗವಾಗಿ ಸಾಗುವು ದರಿಂದ ಶಾಶ್ವತ ರಸ್ತೆ ವಿಭಜಕವನ್ನು ಅಳವಡಿಸದೆ, ಬ್ಯಾರಿಕೇಡ್‍ಗಳನ್ನು ಜೋಡಿಸಿ, ತಾತ್ಕಾಲಿಕ ವಿಭಜಕವನ್ನು ನಿರ್ಮಿಸಲಾಗಿದೆ. ಬ್ಯಾರಿಕೇಡ್‍ಗಳನ್ನು ಅತ್ತಿತ್ತ ಸರಿಸದಂತೆ ಒಂದಕ್ಕೊಂದು ಜೋಡಿಸಿ, ತಂತಿ ಬಿಗಿಯಲಾಗಿದೆ. ಆದರೆ ಅಲ್ಲಲ್ಲಿ ತಂತಿಯನ್ನು ಕತ್ತರಿಸಿ, ಅಡ್ಡದಾರಿ ಮಾಡಿಕೊಂಡಿದ್ದಾರೆ. ಧನ್ವಂತರಿ ರಸ್ತೆ ಕಡೆಯಿಂದ ಸಯ್ಯಾಜಿರಾವ್ ರಸ್ತೆಗೆ ಬಂದು ಸೇರುವ ವಾಹನಗಳು, ಕೆ.ಟಿ.ಸ್ಟ್ರೀಟ್, ಗಾಂಧೀ ವೃತ್ತ, ಕೃಷ್ಣರಾಜ ವೃತ್ತದ ಕಡೆಗೆ ತೆರಳಬೇಕಿದ್ದರೆ ಆಯುರ್ವೇದ ಆಸ್ಪತ್ರೆ ವೃತ್ತವನ್ನು ಸುತ್ತಿಕೊಂಡು ಬರಬೇಕು. ಸುರಕ್ಷತೆ ದೃಷ್ಟಿಯಿಂದ ಇದು ಸರಿಯಾದ ಮಾರ್ಗ.

ಆದರೆ ಕೆ.ಆರ್.ಆಸ್ಪತ್ರೆ ಮುಂಭಾಗ, ಕೆ.ಟಿ.ಸ್ಟ್ರೀಟ್‍ಗೆ ಸಂಪರ್ಕಿಸುವ ರಸ್ತೆಗೆ ನೇರವಾಗಿ ಬ್ಯಾರಿಕೇಡ್‍ಗಳನ್ನು ಸರಿಸಿ, ಅಡ್ಡದಾರಿ ಮಾಡಿಕೊಳ್ಳಲಾಗಿದೆ. ಯಾರೋ ಒಬ್ಬ ಮಾಡಿದ ದಾರಿಯಲ್ಲಿ ನೂರಾರು ದ್ವಿಚಕ್ರ ವಾಹನ ಸವಾರರು ಕುರಿಗಳಂತೆ ನುಗ್ಗುತ್ತಾರೆ. ಆಯುರ್ವೇದ ವೃತ್ತದ ಬಳಿ ಪೊಲೀಸರು ತಪಾಸಣೆ ನಡೆಸುತ್ತಿರುವು ದನ್ನು ಕಂಡರಂತೂ ಈ ಅಡ್ಡದಾರಿಯಲ್ಲಿ ನೂರಾರು ವಾಹನಗಳು ಹಾದು ಹೋಗು ತ್ತವೆ. ಪರಿಣಾಮ ರಸ್ತೆಯ ಎರಡೂ ಮಾರ್ಗದ ಸಂಚಾರಕ್ಕೆ ಅಡ್ಡಿಯುಂಟಾ ಗುತ್ತಿದೆ. ಪಾದಚಾರಿಗಳಂತೂ ಆತಂಕ ದಲ್ಲೇ ಓಡಾಡುವಂತಾಗಿದೆ.

ಪ್ರತಿಷ್ಟಿತ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವಲಕ್ಷಣ. ರಸ್ತೆಯ ಸೌಂದರ್ಯಕ್ಕೆ ಕಪ್ಪುಚುಕ್ಕಿಯಂತಿದೆ ಎಂದು ಅನೇಕ ಜನಪ್ರತಿನಿಧಿಗಳೇ ಹೇಳಿಕೆ ನೀಡಿದ್ದಾರೆ. ಆದರೆ ಪೊಲೀಸರು ರಸ್ತೆ ಸುರಕ್ಷತೆ ದೃಷ್ಟಿಯಿಂದ ಇಲಾಖೆ ಯಿಂದ ಲಭ್ಯವಿರುವ ವಸ್ತುಗಳನ್ನು ಬಳಸಬಹುದು. ಬದಲಾಗಿ ಸುಂದರ ವಾಗಿ ಕಾಣುವ, ದಸರಾ ಸಂದರ್ಭದಲ್ಲಿ ಸುಲಭವಾಗಿ ತೆರವು ಮಾಡಿ, ಮತ್ತೆ ಜೋಡಿಸಬಹುದಾದ ರೀತಿಯ ವಿಭಜಕ ಅಳವಡಿಸುವ ಬಗ್ಗೆ ಆಡಳಿತ ವರ್ಗ ಗಮನಹರಿಸಬೇಕಿದೆ. ಅಲ್ಲಿಯವರೆಗೆ ಎಲ್ಲೆಂದರಲ್ಲಿ ಬ್ಯಾರಿಕೇಡ್‍ಗಳನ್ನು ಸರಿಸಿ, ಅಡ್ಡಾದಿಡ್ಡಿ ವಾಹನ ಸಂಚಾರಕ್ಕೆ ಪೊಲೀಸರೇ ಬ್ರೇಕ್ ಹಾಕಬೇಕಿದೆ.