ಮೈಸೂರು ವರ್ತಕನ ಅಪಹರಿಸಿ ಹತ್ಯೆ: ಆರು ಮಂದಿ ಬಂಧನ

ತಿ.ನರಸೀಪುರ: ಮೈಸೂರಿನ ಫಾಮ್ ಆಯಿಲ್ (ತಾಳೆ ಎಣ್ಣೆ) ಅಡಿಗೆ ಎಣ್ಣೆ ವರ್ತಕನ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ತಿರುವು ದೊರೆತ್ತಿದ್ದು, ಈತನನ್ನು ಅಪಹರಿಸಿ ಹತ್ಯೆ ಮಾಡಿದ್ದ 6 ಮಂದಿಯನ್ನು ಬಂಧಿಸುವಲ್ಲಿ ಬನ್ನೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಮೈಸೂರಿನ ಕೆ.ಆರ್. ಮೊಹಲ್ಲಾದ ಶ್ರೀಧರ, ಮೇಟಗಳ್ಳಿಯ ಮಂಜುನಾಥ ಅಲಿಯಾಸ್ ಚೋಳು, ಕುಂಬಾರಕೊಪ್ಪಲಿನ ಮಂಜು ಅಲಿಯಾಸ್ ಮಂಜು ನಾಥ್, ಇಟ್ಟಿಗೆಗೂಡಿನ ಸಂತೋಷ್, ಬನ್ನೂರು ಪಟ್ಟಣದ ಇಮ್ರಾನ್ ಪಾಷ ಅಲಿಯಾಸ್ ಮಾಯಿ, ಇಮ್ರಾನ್ ಅಲಿಯಾಸ್ ಗಬ್ಬರ್ ಬಂಧಿತ ಆರೋಪಿಗಳು.

ಮೈಸೂರಿನ ವೀಣೆಶೇಷಣ್ಣ ನಿವಾಸಿ ಶಿವರಾಂಪೇಟೆ ಯಲ್ಲಿ ಅಡುಗೆ ಎಣ್ಣೆ ಅಂಗಡಿ ನಡೆಸುತ್ತಿರುವ ಸೆಂಥಿಲ್ (36) ಎಂಬುವರನ್ನು ಈ ಆರೋಪಿಗಳು ಜ.28ರಂದು ಅಪಹರಿಸಿ ಹತ್ಯೆಗೈದು ನಾಲೆಯಲ್ಲಿ ಎಸೆದು ಹೋಗಿದ್ದರು. ಅದಕ್ಕೂ ಮುನ್ನ ಮೃತನ ಭಾವಮೈದನಿಂದ 2.25 ಲಕ್ಷ ಒತ್ತೆ ಹಣವನ್ನು ಪಡೆದಿದ್ದರು. ನಾಲೆಯಲ್ಲಿ ಮೃತದೇಹ ವಶಪಡಿಸಿಕೊಂಡ ಬನ್ನೂರು ಪೊಲೀಸರು, ಮೃತನ ಸಂಬಂಧಿಕರು ನೀಡಿದ ದೂರಿನನ್ವಯ ಅನುಮಾನಾಸ್ಪದ ಸಾವು ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಆದರೆ ಆತನನ್ನು ಉಸಿರುಗಟ್ಟಿಸಿ ಸಾಯಿಸಲಾ ಗಿದೆ ಎಂದು ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಲ್ಲಿ ತಿಳಿದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದರು. ಈ 6 ಆರೋಪಿಗಳನ್ನು ಬಂಧಿಸಿದ ಪೊಲೀಸರು, ಅಪಹರಣಕ್ಕೆ ಬಳಸಿದ್ದ ಜೈಲೋ ಕಾರು, 6 ಮೊಬೈಲ್, ಮೃತನ ದ್ವಿಚಕ್ರ ವಾಹನ ಹಾಗೂ 1,54,450 ರೂ. ಗಳನ್ನು ವಶಪಡಿಸಿಕೊಂಡಿದ್ದಾರೆ.

ವಿವರ: ಅಡುಗೆ ಎಣ್ಣೆ ವ್ಯಾಪಾರಿಯಾದ ಸೆಂಥಿಲ್ ಜ.28ರಂದು ಮಧ್ಯಾಹ್ನ ಅಡುಗೆ ಎಣ್ಣೆ ಲೋಡ್ ಬಂದಿದೆ ಎಂದು ಮನೆಯಲ್ಲಿ ತಿಳಿಸಿ ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳಿದ್ದರು. ರಾತ್ರಿ 8.30ರ ಸುಮಾರಿನಲ್ಲಿ ಅವರ ಭಾವ ಮೈದನಿಗೆ ಕರೆ ಮಾಡಿದ ಅವರು, `ನನ್ನ ಸ್ಕೂಟರ್ ನಲ್ಲಿ ಬರುವ ವ್ಯಕ್ತಿಗಳಿಗೆ 2.22 ಲಕ್ಷ ರೂ.ಗಳನ್ನು ತಡ ಮಾಡದೇ ಕೊಡು’ ಎಂದು ತಿಳಿಸಿದ್ದರು. ಅದರಂತೆ ಅಂದು ರಾತ್ರಿ 9.45ರ ಸುಮಾರಿನಲ್ಲಿ ಸೆಂಥಿಲ್ ಅವರ ಸ್ಕೂಟರ್‍ನಲ್ಲಿ ಬಂದ ವ್ಯಕ್ತಿಗೆ ಅವರ ಭಾಮೈದ 2.22 ಲಕ್ಷ ಹಣ ನೀಡಿದ್ದರು. ಆನಂತರ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಆದರೆ ಮನೆಯವರು ಸೆಂಥಿಲ್ ಎಲ್ಲೋ ಹೋಗಿರಬಹುದು ಎಂದು ಸುಮ್ಮನಿದ್ದರು. ಬನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ನಾಲೆಯಲ್ಲಿ ಮೃತದೇಹ ದೊರೆತ ಹಿನ್ನೆಲೆಯಲ್ಲಿ ಅದನ್ನು ವಶಪಡಿಸಿಕೊಂಡ ಪೊಲೀಸರು, ಮೃತನ ಜೇಬಿನಲ್ಲಿ ದೊರೆತ ದಾಖಲೆ ಆಧರಿಸಿ ಮೈಸೂರಿನ ಕೆ.ಆರ್.ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೆ.ಆರ್. ಪೊಲೀಸರ ಮಾಹಿತಿ ಮೇರೆಗೆ ಸೆಂಥಿಲ್‍ನ ಕುಟುಂಬಸ್ಥರು ತೆರಳಿ ನೋಡಿದಾಗ ಅದು ಸೆಂಥಿಲ್‍ನ ಶವ ಎಂಬುದು ಪತ್ತೆಯಾಗಿತ್ತು. ಆತನ ಕುಟುಂಬದವರು ನೀಡಿದ ದೂರಿನ ಮೇರೆಗೆ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದರು.

ಪತ್ತೆಯಾದದ್ದು ಹೇಗೆ?: ಮೃತನ ಮೊಬೈಲ್ ಕರೆಗಳ ಬಗ್ಗೆ ಪೊಲೀಸರು ಪರಿಶೀಲಿಸಿ ಅದರ ಆಧಾರದ ಮೇರೆಗೆ ಮಂಚೇಗೌಡನಕೊಪ್ಪಲಿನ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಆತನಿಂದ ಶ್ರೀಧರ್ ಎಂಬಾತ ಮೊಬೈಲ್ ಸಿಮ್ ತೆಗೆದುಕೊಂಡು ಹೋಗಿದ್ದ. ಆ ಸಿಮ್ ಮೂಲಕವೇ ಮೃತ ಸೆಂಥಿಲ್ ಜೊತೆ ಮಾತನಾಡಲಾಗಿದೆ ಎಂಬುದು ಪತ್ತೆಯಾಗಿದೆ.

ಪೊಲೀಸರು ಶ್ರೀಧರ್‍ನನ್ನು ಬಂಧಿಸಿ ವಿಚಾರಣೆ ಗೊಳಪಡಿಸಿದ ವೇಳೆ ಬಂಧಿತರಾಗಿರುವ 6 ಮಂದಿಯೂ ಸೇರಿ ಸೆಂಥಿಲ್‍ನನ್ನು ಅಪಹರಿಸಿ ಒತ್ತೆ ಹಣ ಪಡೆಯಲು ಸಂಚು ರೂಪಿಸಿದ್ದರು. ಅದರಂತೆ ಬನ್ನೂರಿನ ಗಬ್ಬಾರ್ ಮತ್ತು ಇಮ್ರಾನ್ ಪಾಷ ಬಳಿ ಅಡುಗೆ ಎಣ್ಣೆ ದಾಸ್ತಾನು ಇದೆ ಎಂದು ತಿಳಿಸಿ ಶ್ರೀಧರ್ ಮೈಸೂರಿನಿಂದ ಸೆಂಥಿಲ್‍ನನ್ನು ಬನ್ನೂರಿಗೆ ಕರೆದೊಯ್ದಿದ್ದಾನೆ. ಅಲ್ಲಿ ಈ 6 ಮಂದಿಯೂ ಸೇರಿ ಸೆಂಥಿಲ್ ಬಳಿ 25 ಲಕ್ಷ ಒತ್ತೆ ಹಣಕ್ಕೆ ಒತ್ತಾಯಿಸಿದ್ದಾರೆ. ಆದರೆ ಆತ ನನ್ನ ಬಳಿ ಅಷ್ಟು ಹಣ ಇಲ್ಲ, ಈಗ ಇರುವುದನ್ನು ಕೊಡಿಸುತ್ತೇನೆ ಎಂದು ಹೇಳಿ ತನ್ನ ಭಾವಮೈದನಿಗೆ ಕರೆ ಮಾಡಿ ಹಣ ಕೊಡಿಸಿದ್ದಾನೆ. ಬಂಧಿತರಲ್ಲಿ ಶ್ರೀಧರ್ ಎಂಬಾತ ಸೆಂಥಿಲ್‍ಗೆ ಪರಿಚಿತನಾಗಿದ್ದು, ಆತನನ್ನು ಬಿಟ್ಟರೆ ತಾವೆಲ್ಲಾ ಸಿಕ್ಕಿ ಹಾಕಿಕೊಳ್ಳಬಹುದು ಎಂದು ಆರೋಪಿಗಳು ನಾಲೆ ಬಳಿ ಸೆಂಥಿಲ್‍ನನ್ನು ಕರೆದೊಯ್ದು, ಕುತ್ತಿಗೆಯನ್ನು ವೈರ್‍ನಿಂದ ಬಿಗಿದು ಹತ್ಯೆ ಮಾಡಿ ಮೃತದೇಹವನ್ನು ನಾಲೆಗೆ ಎಸೆದು ಪರಾರಿಯಾಗಿದ್ದಾರೆ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ.

ಈ ಕಾರ್ಯಾಚರಣೆಯಲ್ಲಿ ಬನ್ನೂರು ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಎಂ.ಆರ್.ಲವ, ಸಬ್ ಇನ್ಸ್‍ಪೆಕ್ಟರ್ ಅಜಯ್ ಕುಮಾರ್, ಎಎಸ್‍ಐ ಬಿ.ವೈ.ಶಿವಣ್ಣ, ಸಿಬ್ಬಂದಿಗಳಾದ ಎಸ್.ಜೆ.ಶಿವಣ್ಣ, ನಾರಾಯಣ, ಸೋಮಶೇಖರ್, ಪ್ರಭಾಕರ್, ನಾಗೇಂದ್ರ, ಮುಕುಂದ, ಮಹೇಶ್, ಇಸ್ಮೈಲ್, ಗಿರೀಶ್, ಪುಟ್ಟಸ್ವಾಮಿ, ವಿಜಯ ಕುಮಾರ್ ಭಾಗವಹಿಸಿದ್ದರು.