ಮೈಸೂರು-ಬೆಂಗಳೂರು ನೈಸ್ ರಸ್ತೆ ಯೋಜನೆ ರದ್ದು ಸಂಭವ: ಹೆಚ್‍ಡಿಕೆ

ಬೆಂಗಳೂರು: ಮೈಸೂರು-ಬೆಂಗಳೂರು ನಡುವಣ ನೈಸ್ ರಸ್ತೆ ಯೋಜನೆಯ ಒಪ್ಪಂದ ರದ್ದುಗೊಳಿಸುವ ಇಂಗಿತವನ್ನು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಧಾನಸಭೆಯಲ್ಲಿಂದು ವ್ಯಕ್ತಪಡಿಸಿದ್ದಾರೆ.

ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡುವಾಗ ಬಿಜೆಪಿ ಸದಸ್ಯರ ಕುಹಕ ಮಾತಿಗೆ ನಾನು ಅಧಿಕಾರಕ್ಕೆ ಬಂದು 40 ದಿನಗಳು ಕಳೆದಿದೆ ಯಷ್ಟೆ. ರಾಜ್ಯದ ಜನತೆಗೆ ನೀಡಿರುವ ಆಶ್ವಾಸನೆಗಳ ಜೊತೆಗೆ ಹಿಂದೆ ಸರ್ಕಾರದ ಕಡತದಲ್ಲಿ ಉಳಿದಿರುವ ಕೆಲವು ಪ್ರಮುಖ ವಿಷಯಗಳಿಗೂ ಮೋಕ್ಷ ನೀಡುತ್ತೇನೆ. ಇಂತಹ ವಿಚಾರಗಳನ್ನು ಕೈಗೆತ್ತಿಕೊಳ್ಳುವುದಕ್ಕೂ ಮುನ್ನ ನನ್ನ ಹಿರಿಯ ಸಚಿವ ಸಹೋದ್ಯೋಗಿಗಳು, ಶಾಸಕರ ಅಭಿಪ್ರಾಯ ಪಡೆಯುತ್ತೇನೆ. ರೈತರಿಗೆ ಮತ್ತು ಜನರಿಗೆ ಅನುಕೂಲವಾಗುವ ಕಾರ್ಯಕ್ರಮಗಳಿಂದ ನಾನು ಹಿಂದೆ ಸರಿಯುವುದಿಲ್ಲ ಎಂದರು.

ಹಿಂದೆ ಬಿಜೆಪಿ ಜತೆ ಸೇರಿ ಸಮ್ಮಿಶ್ರ ಸರ್ಕಾರ ಮಾಡಿದ ಸಂದರ್ಭದಲ್ಲಿ ಬಿಜೆಪಿಯವರು ಹೇಗೆ ನಮಗೆ ಅಸಹಕಾರ ನೀಡಿದರು ಎನ್ನುವುದು ನನಗೆ ಗೊತ್ತಿದೆ. ನೈಸ್ ಯೋಜನೆಯ ಒಪ್ಪಂದವನ್ನು ರದ್ದುಗೊಳಿಸುವ ಸಂಬಂಧ ಸಚಿವ ಸಂಪುಟ ಸಭೆ ಕರೆದರೆ ಸಂಜೆ ಆರು ಗಂಟೆಯ ತನಕ ಬಿಜೆಪಿ ಸಚಿವರು ಸಂಪುಟ ಸಭೆಗೇ ಬಂದಿರಲಿಲ್ಲ.