ಮೈಸೂರು ನಗರ ಪಾಲಿಕೆ ವಾರ್ಡ್ ಮೀಸಲಾತಿ: ಜನಪ್ರತಿನಿಧಿಗಳು, ಸಾರ್ವಜನಿಕರಿಂದ 187 ಆಕ್ಷೇಪಣೆ ಸಲ್ಲಿಕೆ

ಮೈಸೂರು: ಮೈಸೂರು ಮಹಾನಗರ ಪಾಲಿಕೆಯ 65 ವಾರ್ಡ್‍ಗಳಿಗೆ ನಿಗದಿಪಡಿಸಿರುವ ಮೀಸಲಾತಿಗೆ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಂದ ಒಟ್ಟು 187 ಲಿಖಿತ ಆಕ್ಷೇಪಣೆಗಳು ಬಂದಿವೆ ಎಂದು ಮೈಸೂರು ಜಿಲ್ಲಾಧಿ ಕಾರಿ ಕಚೇರಿಯ ಚುನಾವಣಾ ಶಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮೈಸೂರು ನಗರದ ಎಲ್ಲಾ 65 ವಾರ್ಡ್‍ಗಳ ಮೀಸಲಾತಿ ಪಟ್ಟಿಯನ್ನು ಸರ್ಕಾರ ಜೂನ್ 19ರಂದು ಪ್ರಕಟಿಸಿ, ಜೂನ್ 25ರೊಳ ಗಾಗಿ ಲಿಖಿತ ಆಕ್ಷೇಪಗಳನ್ನು ಆಹ್ವಾನಿಸಲಾಗಿತ್ತು. ಮೀಸಲಾತಿ ನಿಗದಿ ಅವೈಜ್ಞಾನಿಕವಾಗಿದ್ದು, ಯಾವುದೋ ವರ್ಗ ಹಾಗೂ ವ್ಯಕ್ತಿಗೆ ಅನುಕೂಲ ಮಾಡಿಕೊಡಲು ಸರ್ಕಾರ ಮುಂದಾಗಿದೆ ಎಂದು ಕೆಲ ಜನಪ್ರತಿನಿಧಿಗಳು ತೀವ್ರವಾಗಿ ಆಕ್ಷೇಪಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಳಿದಂತೆ ಪುನರ್‍ವಿಂಗಡಣೆ ಮಾಡಿರುವ ವಾರ್ಡ್‍ಗಳಲ್ಲಿನ ಜನಸಂಖ್ಯೆಗನುಸಾರ ಮೀಸಲಾತಿ ಪ್ರಕಟಿಸಬೇಕೇ ಹೊರತು, ಯಾವುದೋ ಹಳೇ ಮಾನದಂಡದಲ್ಲಿ ನಿಗದಿಪಡಿಸಿರುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದುದು ಎಂದು ಸಾರ್ವಜನಿಕರು ಅಭಿಪ್ರಾಯಿಸಿ ಆಕ್ಷೇಪಣೆಗಳನ್ನು ಸಲ್ಲಿ ಸಿದ್ದಾರೆ ಎಂದು ಕಚೇರಿ ಮೂಲಗಳು ತಿಳಿಸಿವೆ.

ಜೂನ್ 22ರಂದು 43, ಜೂನ್ 23ರಂದು 42 ಹಾಗೂ ಜೂನ್ 25ರಂದು 102 ಸೇರಿ ಸೋಮವಾರದವರೆಗೆ 187 ಮಂದಿ ವಾರ್ಡ್ ಮೀಸಲಾತಿಗೆ ಆಕ್ಷೇಪಣೆ ಸಲ್ಲಿಸಿದ್ದು, ಅವುಗಳನ್ನು ಪರಿಶೀಲಿಸಿ ಜಿಲ್ಲಾಧಿಕಾರಿಗಳು ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯ ದರ್ಶಿಗಳಿಗೆ ವರದಿ ಸಲ್ಲಿಸುವರು. ಅದನ್ನು ಸರ್ಕಾರದ ಮಟ್ಟದಲ್ಲಿ ಪರಿಶೀಲಿಸಿದ ನಂತರ ಇನ್ನೊಂದು ವಾರದಲ್ಲಿ ಸಣ್ಣಪುಟ್ಟ ಮಾರ್ಪಾಡಿ ನೊಂದಿಗೆ ಮೀಸಲಾತಿ ಅಂತಿಮ ಪಟ್ಟಿಯನ್ನು ಪ್ರಕಟಿಸಿ ಅಧಿಸೂಚನೆ ಹೊರಡಿಸಲಿದೆ. ಈಗ ಸಲ್ಲಿಕೆಯಾಗಿರುವ ಬಹುತೇಕ ಆಕ್ಷೇಪಣೆಗಳು ಜನಪ್ರತಿನಿಧಿಗಳೇ ಸಲ್ಲಿಸಿದ್ದು, ಸರ್ಕಾರ ಅವುಗಳನ್ನು ಗಂಭೀರ ವಾಗಿ ಪರಿಗಣಿಸಿ ನಿಯಮಾನುಸಾರ ಮಾರ್ಪಡಿಸಬಹುದೆಂದು ನಿರೀಕ್ಷಿಸಲಾಗಿದೆ. ಈ ಸಂಬಂಧ ವಾರ್ಡ್ ಮೀಸಲಾತಿ ಬದಲಿಸಲು ಕೆಲ ಪ್ರಭಾವಿ ನಾಯಕರು ಸರ್ಕಾರದ ಮಟ್ಟದಲ್ಲಿ ತೀವ್ರ ಲಾಬಿ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ಅದೇ ರೀತಿ ಸಾರ್ವ ಜನಿಕರು ಸಲ್ಲಿಸಿರುವ ಮೌಲ್ಯಯುತ ಆಕ್ಷೇಪಣೆಗಳನ್ನು ಸರ್ಕಾರ ಪರಾಮರ್ಶಿಸಲಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.

ಸೆಪ್ಟೆಂಬರ್ ಮಾಹೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ಚುನಾವಣೆ ನಡೆಯುವುದರಿಂದ ಜನಸಂಖ್ಯೆಗನುಗುಣವಾಗಿ ವಾರ್ಡ್‍ಗಳ ಮರುವಿಂಗಡಣೆ ಮಾಡಿ ಮೈಸೂರು ಮಹಾನಗರ ಪಾಲಿಕೆಯು ಮತದಾರರ ಪಟ್ಟಿಯನ್ನು ಸಹ ಪ್ರಕಟಿಸಿದೆ. ವಾರ್ಡ್‍ಗಳ ಮೀಸಲಾತಿ ಹಾಗೂ ಪುನರ್‍ವಿಂಗಡಣೆ ಅವೈಜ್ಞಾನಿಕ ಎಂದು ಶಾಸಕ ಎಸ್.ಎ.ರಾಮದಾಸ್, ಮಾಜಿ ಮೇಯರ್‍ಗಳಾದ ಸಂದೇಶಸ್ವಾಮಿ, ಆರ್.ಲಿಂಗಪ್ಪ ಸೇರಿದಂತೆ ಹಲವು ಪ್ರಮುಖರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ವಾರ್ಡ್ ಮೀಸಲಾತಿ ಮತ್ತು ಪುನರ್ ವಿಂಗಡಣೆ ಮಾರ್ಪಾಡು ಮಾಡಬೇಕೆಂದು ಒತ್ತಾಯಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಇಂದು ಮತದಾರರ ಪಟ್ಟಿ ಅಂತಿಮ

ಪುನರ್ ವಿಂಗಡಣೆಗನುಸಾರ ಮೈಸೂರು ಮಹಾನಗರ ಪಾಲಿಕೆಯ ಎಲ್ಲಾ 65 ವಾರ್ಡ್‍ಗಳ ಜನಸಂಖ್ಯೆಗನುಸಾರ ಮತದಾರರ ಪಟ್ಟಿಯನ್ನು ನಾಳೆ (ಜೂ.27) ಅಂತಿಮಗೊಳಿಸಲಾಗುವುದು ಎಂದು ಪಾಲಿಕೆ ಕಮೀಷ್ನರ್ ಕೆ.ಹೆಚ್.ಜಗದೀಶ ತಿಳಿಸಿದ್ದಾರೆ. ಈ ಕುರಿತು ಸಂಪರ್ಕಿಸಿದಾಗ ‘ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದ ಅವರು, ವಾರ್ಡ್‍ಗಳ ಪುನರ್‍ವಿಂಗಡಣೆಯಾದ ನಂತರ ನಮ್ಮ ಕಂದಾಯಾಧಿಕಾರಿಗಳು, ಸಹಾಯಕ ಕಂದಾಯಾಧಿಕಾರಿಗಳು ಹಾಗೂ ರೆವಿನ್ಯೂ ಇನ್‍ಸ್ಪೆಕ್ಟರ್‍ಗಳು ಸಿಬ್ಬಂದಿಗಳೊಂದಿಗೆ ಪ್ರತೀ ವಾರ್ಡ್‍ಗಳ ರಸ್ತೆ, ಮುಖ್ಯರಸ್ತೆ, ಗಲ್ಲಿಗಳಲ್ಲಿ ಖುದ್ದು ಪರಿಶೀಲನೆ ನಡೆಸಿ ಮತಗಟ್ಟೆವಾರು ಮತದಾರರ ಪಟ್ಟಿಯನ್ನು ಸಿದ್ಧಪಡಿಸಿದ್ದರು ಎಂದರು. ಅವುಗಳನ್ನು ಆಯಾ ವಾರ್ಡ್‍ಗಳಿಗೆ ಸೇರುತ್ತವೆಯೇ ಎಂಬುದನ್ನು ನಕ್ಷೆಯಲ್ಲಿ ತೋರಿಸಿರುವ ಗಡಿಯನ್ವಯ ಮತ್ತೊಮ್ಮೆ ಪರಿಶೀಲಿಸಲಾಗುತ್ತಿದ್ದು, ನಾಳೆ ಮೈಸೂರು ನಗರ ಪಾಲಿಕೆಯ ಎಲ್ಲಾ 65 ವಾರ್ಡ್‍ಗಳ ಮತದಾರರ ಪಟ್ಟಿಯನ್ನು ಅಂತಿಮಗೊಳಿಸಲಾಗುತ್ತದೆ ಎಂದು ಜಗದೀಶ ತಿಳಿಸಿದರು.

ಮತದಾರ ಪಟ್ಟಿ ಪರಿಷ್ಕರಣೆ ಮಾಡಿದ ನಂತರ ಹಾಗೂ ವಾರ್ಡ್‍ಗಳ ಪುನರ್ ವಿಂಗಡಣೆಯಾದ ಕಾರಣ ಕೆಲವು ಮತದಾರರ ಹೆಸರು ಬೇರೆ ವಾರ್ಡ್‍ಗಳಿಗೆ ಬರುವ ಸಾಧ್ಯತೆ ಇರುತ್ತದೆ. ಆದರೆ ಯಾವೊಬ್ಬ ಮತದಾರರ ಹೆಸರನ್ನು ಕೈಬಿಟ್ಟಿಲ್ಲ. ಸಾಧ್ಯವಾದಷ್ಟು ಮಟ್ಟಿಗೆ ಎಚ್ಚರಿಕೆಯಿಂದ ನೋಡಿ ಪಟ್ಟಿ ತಯಾರು ಮಾಡಲಾಗಿದೆ ಎಂದು ಅವರು ತಿಳಿಸಿದರು.