ಪಾಲೆಯಂಡ ಪೊನ್ನಪ್ಪ ಸುಪ್ರೀತಾಗೆ ಆಸ್ಟ್ರೇಲಿಯನ್ ಪ್ರಶಸ್ತಿ

ಮೈಸೂರು:  ಆಸ್ಟ್ರೇಲಿಯಾದಲ್ಲಿ ಪಿಹೆಚ್.ಡಿ ಮಾಡುತ್ತಿರುವ ಮೈಸೂರಿನ ಪಾಲೆಯಂಡ ಪೊನ್ನಪ್ಪ ಸುಪ್ರೀತಾ ಅವರು 2018ನೇ ಸಾಲಿನ ನ್ಯಾಷನಲ್ ಕೌನ್ಸಿಲ್ ಆಫ್ ವುಮೆನ್ ಕ್ವೀನ್ಸ್‍ಲ್ಯಾಂಡ್ (ಎನ್‍ಸಿಡಬ್ಲ್ಯೂಕ್ಯೂ) ಆಫೀಸ್ ಫಾರ್ ವುಮೆನ್ (ರಿಟರ್ನ್ ಟು ವರ್ಕ್) ಪ್ರಶಸ್ತಿ ಪಡೆದುಕೊಂಡಿದ್ದಾರೆ. ಎನ್‍ಸಿಡಬ್ಲ್ಯೂಕ್ಯೂ ಸಂಸ್ಥೆಯು ನ್ಯಾಷನಲ್ ಕೌನ್ಸಿಲ್ ಆಫ್ ವುಮೆನ್ ಆಫ್ ಆಸ್ಟ್ರೇಲಿಯಾ ಇಂಕ್ ಲಿಮಿಟೆಡ್ ಸಂಸ್ಥೆಯ ಮಾನ್ಯತೆ ಪಡೆದಿದೆ. ಈ ಸಂಸ್ಥೆಯು ಮಹಿಳಾ ಸಬಲೀಕರಣ ಮತ್ತು ಜೀವನದ ಎಲ್ಲಾ ಹಂತಗಳಲ್ಲೂ ಮಹಿಳೆಯರಿಗೆ ಸಮಾನ ಸ್ಥಾನಮಾನ ಕಲ್ಪಿಸುವಲ್ಲಿ ಕಾರ್ಯನಿರ್ವ ಹಿಸುತದೆ. ಅಲ್ಲದೆ, ರಾಜ್ಯ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಮಹಿಳೆಯರಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿ ಹೋರಾಟ ನಡೆಸುತ್ತದೆ. ಈ ಪ್ರಶಸ್ತಿಯನ್ನು 25 ವರ್ಷ ವಯೋಮಾನದ ಮಹಿಳೆಯರಿಗೆ ನೀಡಲಾಗುವುದು. ಪೂರ್ಣಾವಧಿ ಅಥವಾ ಅಲ್ಪಾವಧಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರಿಗೆ ಅವರ ಕೆಲಸದ ನಂತರ ಅವರ ವಿದ್ಯಾಭ್ಯಾಸದ ಬಗ್ಗೆ ಸಹಕಾರ ನೀಡುವ ಮತ್ತು ತೃತೀಯ ಅಧ್ಯಯನ ಕಾರ್ಯಕ್ರಮ ದಲ್ಲಿ ನೋಂದಣಿ ಮಾಡಿಸಿರುವ ಮಹಿಳೆಯರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.

ಎನ್‍ಸಿಡಬ್ಲ್ಯೂಕ್ಯೂ ಸಂಸ್ಥೆಯು ಸುಪ್ರೀತಾ ಅವರಿಗೆ ಒಂದು ವರ್ಷಗಳ ಕಾಲ ಗೌರವ ಸದಸ್ಯತ್ವ ನೀಡಿದ್ದು, ಈ ಸಂಸ್ಥೆಯು ವಿಶ್ವದ ಇತರ 28 ಸಂಘಗಳೊಂದಿಗೆ ಸಂಪರ್ಕ ಹೊಂದಿರುತ್ತದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಆಸ್ಟ್ರೇಲಿಯಾ ಸರ್ಕಾರ ಈ ಪ್ರಶಸ್ತಿಯನ್ನು ಪರಿಗಣಿಸುತ್ತದೆ. ಸುಪ್ರೀತಾ ಅವರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ (ವಿಟಿಯು)ದಲ್ಲಿ ಎಂ.ಟೆಕ್‍ನಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಅಲ್ಲದೆ ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಇಂಜಿನಿ ಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ.

ಪ್ರಸ್ತುತ ಸುಪ್ರೀತಾ ಅವರು ಆಸ್ಟ್ರೇಲಿಯಾದ ಬ್ರಿಸ್‍ಬೇನ್ ಕ್ವೀನ್ಸ್‍ಲ್ಯಾಂಡ್ ಯೂನಿವರ್ಸಿಟಿ ಯಲ್ಲಿ ನ್ಯಾನೋ ಟೆಕ್ನಾಲಜಿ ಬಗ್ಗೆ ಪಿಹೆಚ್.ಡಿ ಮಾಡುತ್ತಿದ್ದಾರೆ. ಅವರು ಎಲೆಕ್ಟ್ರೊ ಕೆಮಿಕಲ್ ಮತ್ತು ಕೆಮಿಕಲ್ ಅಂಡ್ ಬಯೋಸೆನ್ಸಾರ್ ವಿಷಯದಲ್ಲಿ ಅಂತಿಮ ಪಿಹೆಚ್.ಡಿ ಮಾಡುತ್ತಿದ್ದಾರೆ. ಇದು ಮಾನವನ ಬದುಕಿಗೆ ಸಹಕಾರಿಯಾಗಲಿದೆ.

ಸುಪ್ರೀತಾ ಅವರು ಪಾಲೇಯಂಡ ಪೊನ್ನಪ್ಪ ಮತ್ತು ಭಾಗ್ಯವತಿ ದಂಪತಿ ಸುಪುತ್ರಿ. ಪೊನ್ನಪ್ಪ ಅವರು ಹಿರಿಯ ವಕೀಲರಾಗಿದ್ದು, ಮೈಸೂರಿನ ವಿಜಯನಗರ 3ನೇ ಹಂತದಲ್ಲಿ ವಾಸವಾಗಿದ್ದಾರೆ. ಭಾಗ್ಯವತಿಯವರು ಹಾರಂಗಿ ಪ್ರಾಜೆಕ್ಟ್‍ನಲ್ಲಿ ಸರ್ಕಾರಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಸುಪ್ರೀತಾ ಅವರ ಅಣ್ಣ ಪಾಲೇಯಂಡ ಪೊನ್ನಪ್ಪ ಸಂತೋಷ್ ಅವರು ಉದಯಗಿರಿ ಪೊಲೀಸ್ ಠಾಣೆಯಲ್ಲಿ ಇನ್ಸ್‍ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.