ಮಳೆ ಬಂದರೆ ನ್ಯೂ ಕೆಹೆಚ್‍ಬಿ ಕಾಲೋನಿ ನಿವಾಸಿಗಳ ಸ್ಥಿತಿ ಹೇಳತೀರದು ನಂಜನಗೂಡು: ನಗರಸಭೆ ಜಾಣ ಕುರುಡಿನಿಂದ ಮ್ಯಾನ್‍ಹೋಲ್ ತುಂಬಿ ರಸ್ತೆಗಳ ಮೇಲೆಯೇ ಹರಿಯುತ್ತಿದ್ದು, ನ್ಯೂ ಕೆಹೆಚ್‍ಬಿ ಕಾಲೋನಿ ನಿವಾಸಿಗಳು ಸಾಂಕ್ರಾಮಿಕ ರೋಗದ ಭೀತಿಯಲ್ಲಿ ದಿನದೂಡುವಂತಾಗಿದೆ.
ನಗರದ ಸಿಟಿಜûನ್ ಶಾಲೆ ಸಮೀಪದ ನ್ಯೂ ಕೆಹೆಚ್‍ಬಿ ಕಾಲೋನಿಯಲ್ಲಿ ಒಳ ಚರಂಡಿ ತುಂಬಿ ರಸ್ತೆಗಳ ಮೇಲೆಯೇ ಕಲುಷಿತ ನೀರು ಹರಿಯುತ್ತಿದ್ದು, ಈ ಬಗ್ಗೆ ಹಲವು ಬಾರಿ ನಗರಸಭಾ ಅಧಿಕಾರಿ ಗಳಿಗೆ ಮನವಿ ನೀಡಿದ್ದರೂ ಗಮನಿಸದ ಪರಿಣಾಮ ಇಲ್ಲಿಯ ನಿವಾಸಿಗಳು ನಿತ್ಯ ಒಳಚರಂಡಿ ನೀರಿನ ಜೊತೆಗೆ ಮಲ ಮೂತ್ರಗಳ ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಬದುಕುವ ಸ್ಥಿತಿ ನಿರ್ಮಾಣವಾಗಿದೆ.
ಕಾಲೋನಿಯ ಮಧ್ಯ ಭಾಗದಲ್ಲಿ ನಗರ ಸಭೆಯಿಂದ ದೊಡ್ಡದಾದ ಪಿಟ್ ಗುಂಡಿ ನಿರ್ಮಿಸಿ, ಕಾಲೋನಿಯ ಎಲ್ಲಾ ಮನೆಗಳ ಶೌಚ್ಯದ ನೀರು ಒಂದೇ ಪೈಪ್‍ನಲ್ಲೇ ಹೋಗುವಂತೆ ಸಂಪರ್ಕ ಕಲ್ಪಿಸಲಾಗಿದೆ. ಈಗಾಗಲೇ ಈ ಇಂತಹ ಪಿಟ್‍ಗಳು ತುಂಬಿ ತುಳುಕುತ್ತಿದ್ದು, ದುರ್ವಾಸನೆ ಬೀರುತ್ತಿವೆ. ಇದರಿಂದ ಕಾಲೋನಿಯ ನಿವಾಸಿ ಗಳಂತೂ ನಿತ್ಯ ನರಕ ಅನುಭವಿಸುತ್ತಿದ್ದಾರೆ.
ಇನ್ನೇನು ಮಳೆಗಾಲ ಆರಂಭವಾಗುತ್ತಿದ್ದು, ಮಳೆ ಬಂದರಂತೂ ಇಲ್ಲಿನ ನಿವಾಸಿಗಳ ಸ್ಥಿತಿ ಚಿಂತಾಜನಕವಾಗಲಿದೆ. ಮಳೆಯ ನೀರು ಒಳಚರಂಡಿ ಮ್ಯಾನ್‍ಹೋಲ್‍ಗಳು ತುಂಬಿ ನೀರು ಸರಾಗವಾಗಿ ಸಾಗದೇ ಮನೆಯೊಳಕ್ಕೆ ಹಿಮ್ಮುಖವಾಗಿ ನುಗ್ಗುವ ಸ್ಥಿತಿ ನಿರ್ಮಾಣವಾಗುತ್ತದೆ. ಇದರಿಂದ ಮನೆ ದುರ್ವಾಸನೆಯುಕ್ತವಾಗಲಿದ್ದು, ಜನರು ಪರಿತಪಿಸುವಂತಾಗುತ್ತದೆ. ಅಲ್ಲದೆ ಮಳೆಗಾಲದಲ್ಲಿ ಚರಂಡಿಗಳೂ ಸಹ ತುಂಬಿ ಹರಿಯುವುದರಿಂದ ಕಾಲೋನಿ ಯಲ್ಲಿ ಸಾಂಕ್ರಾಮಿಕ ರೋಗಗಳು ಎದು ರಾಗಲಿದೆ ಎಂಬ ಭೀತಿ ನಿವಾಸಿಗಳನ್ನು ಕಾಡುತ್ತಿದೆ.
ಈಗಾಗಲೇ ಪಿಟ್‍ಗಳು ತುಂಬಿ ಕೊಂಡಿದ್ದು, ಕೂಡಲೇ ತ್ಯಾಜ್ಯವನ್ನು ತೆರವು ಮಾಡದೇ ಇದ್ದರೆ ಮಳೆಗಾಲದಲ್ಲಿ ಮತ್ತಷ್ಟು ಸಮಸ್ಯೆ ಉಲ್ಬಣಿಸುವÀ ಸಾಧ್ಯತೆ ಇದೆ. ಶೀಘ್ರವಾಗಿ ಸಂಬಂಧಪಟ್ಟ ನಗರಸಭಾ ಅಧಿಕಾರಿಗಳು, ಅಧ್ಯಕ್ಷರು ಹಾಗೂ ಸದಸ್ಯರು ಇತ್ತ ಗಮನ ಹರಿಸಿ ದುಸ್ಥಿತಿ ತಲುಪಿರುವ ಒಳಚರಂಡಿಗಳ ದುರಸ್ತಿ ಹಾಗೂ ತ್ಯಾಜ್ಯ ತೆರವುಗೊಳಿಸಿ ಮುಂದೆ ಎದುರಾಗಬಹುದಾದ ಸಮಸ್ಯೆ ಗಳನ್ನು ತಡೆಯುವಂತೆ ಕಾಲೋನಿಯ ನಿವಾಸಿಗಳು ಆಗ್ರಹಿಸಿದ್ದಾರೆ. ತಪ್ಪಿದರೆ ಉಗ್ರ ಹೋರಾಟ ಮಾಡುವುದಾಗಿಯೂ ಎಚ್ಚರಿಸಿದ್ದಾರೆ.