ಉದ್ಯೋಗಖಾತ್ರಿ ಯೋಜನೆಯಡಿ ನರಸಿಂಹ ತೀರ್ಥ ಸ್ವಚ್ಛ

ಮೇಲುಕೋಟೆ:  ಉದ್ಯೋಗ ಖಾತ್ರಿ ಯೋಜನೆಯಡಿ ಚೆಲುವನಾರಾಯಣಸ್ವಾಮಿ ಅಷ್ಠತೀರ್ಥಗಳಲ್ಲೊಂದಾದ ನರಸಿಂಹ ತೀರ್ಥವನ್ನು ಸ್ವಚ್ಛಗೊಳಿಸಿರುವ ಮೇಲುಕೋಟೆ ಗ್ರಾಪಂ ಕಾರ್ಯವನ್ನು ಜಿಪಂ ಸಿಇಓ ಯಾಲಕ್ಕಿಗೌಡ ಶ್ಲಾಘಿಸಿದರು.

ಇಲ್ಲಿನ ಸರ್ಕಾರಿ ಬಾಲಕರ ಶಾಲೆಯ ಹಿಂಭಾಗದಲ್ಲಿರುವ ನರಸಿಂಹತೀರ್ಥ ಕೊಳ ಹಾಗೂ ನವೀಕರಣಗೊಳ್ಳುತ್ತಿರುವ ಇನ್ನಿತರ ಕೊಳಗಳನ್ನು ಪರಿಶೀಲಿಸಿ ಮಾತ ನಾಡಿದ ಜಿಪಂ ಸಿಇಓ ಯಾಲಕ್ಕಿಗೌಡ, ಕ್ಷೇತ್ರದ ಪುರಾತನ ಕೊಳಗಳನ್ನು ಉಳಿಸಿ ಕೊಳ್ಳಲು ಗ್ರಾಪಂ ಕೈಗೊಳ್ಳುವ ಎಲ್ಲಾ ಯೋಜನೆಗಳಿಗೆ ವಿಶೇಷ ಆದ್ಯತೆ ನೀಡಿ ಸಹಕಾರ ನೀಡುವ ಭರವಸೆ ನೀಡಿದರು.

ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ನಿರ್ದೇಶಕ ಕೆಂಪೇಗೌಡ ಮಾತ ನಾಡಿ, ಮೇಲುಕೋಟೆಯಲ್ಲಿ ಬೆಳಗಿನ ವೇಳೆ ರೈತರು ತಾವು ಬೆಳೆದ ಬೆಳೆಗಳನ್ನು ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ. ಇದಕ್ಕೆ ವ್ಯವಸ್ಥಿತ ಸ್ಥಳ ಗುರ್ತಿಸಿ ಮೂಲ ಸೌಕರ್ಯ ಕಲ್ಪಿಸಿ ಹಳ್ಳಿಸಂತೆ ನಿರ್ಮಿಸಲು ಗ್ರಾಪಂಗೆ 35 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಇದರಿಂದ ಸ್ಥಳೀಯ ಮಾರುಕಟ್ಟೆ ಅಭಿವೃದ್ಧಿ ಹೊಂದಿ ರೈತರು, ಸಣ್ಣ ವ್ಯಾಪಾರಸ್ಥರಿಗೆ ಹಾಗೂ ಗ್ರಾಹಕರಿಗೆ ಅನುಕೂಲವಾಗಲಿದೆ. ಗ್ರಾಪಂ ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಹ ಸೂಚಿಸಲಾಗಿದೆ ಎಂದರು.

ಅಧಿಕಾರಿಗಳಿಗೆ ಮಾಹಿತಿ ನೀಡಿದ ಪಿಡಿಓ ತಮ್ಮೇಗೌಡ, ನರಸಿಂಹ ತೀರ್ಥದ ಹೂಳೆತ್ತಿಸಿ ಸುತ್ತ ಕಟ್ಟಡ ನಿರ್ಮಿಸಲಾಗಿದೆ. ಮುಂದಿನ ಹಂತದಲ್ಲಿ ಕೊಳದ ಸುತ್ತ ಫೆನ್ಸಿಂಗ್ ಅಳವಡಿಸುವ ಕಾರ್ಯ ಮುಂದಿನ ತಿಂಗಳು ಆರಂಭ ವಾಗಲಿದೆ. ಮೇಲು ಕೋಟೆಯ ಕಲ್ಯಾಣಿ ಸೇರಿದಂತೆ ಎಲ್ಲಾ ಕೊಳಗಳನ್ನು ಇದೇ ಮಾದರಿ ಸ್ವಚ್ಛಗೊಳಿಸಿ ಸಂರಕ್ಷಿಸುವ ಕಾರ್ಯಕ್ಕೆ ಹಣ ಬಿಡುಗಡೆಯಾಗಿದೆ. ಯುವಕ ವಿನಯ್ ಮತ್ತು ತಂಡ ಉದ್ಯೋಗ ಖಾತ್ರಿ ನಿಯಮದಂತೆ 3 ಲಕ್ಷ ರೂ. ವೆಚ್ಚದಲ್ಲಿ ನರಸಿಂಹ ತೀರ್ಥದ ಸಂರಕ್ಷಣೆ ಮಾಡಿ ದ್ದಾರೆ ಎಂದರು. ಈ ವೇಳೆ ಗ್ರಾಪಂ ಅಧ್ಯಕ್ಷ ನಾರಾಯಣಭಟ್ಟರ್ ಇತರರಿದ್ದರು.