ಕೊಡಗಿನಲ್ಲಿ ನಕ್ಸಲ್ ಶಂಕೆ: ಕೊಡಗು ಗಡಿಗ್ರಾಮಗಳಲ್ಲಿ ಪೊಲೀಸರಿಂದ ವ್ಯಾಪಕ ಶೋಧ

ಮಡಿಕೇರಿ: ಪುಷ್ಪಗಿರಿ ಬೆಟ್ಟ ಶ್ರೇಣಿವ್ಯಾಪ್ತಿಯ ಸುಳ್ಯ-ಕುಕ್ಕೆ ಸುಬ್ರಹ್ಮಣ್ಯ ವ್ಯಾಪ್ತಿಯಲ್ಲಿ ಶಂಕಿತ ನಕ್ಸಲರ ಚಲನ-ವಲನ ಕಂಡು ಬಂದಿದ್ದು, ನಾಗರಿಕರು ಆತಂಕ ಗೊಂಡಿದ್ದಾರೆ. ಈ ಬಗ್ಗೆ ಕೊಡಗು ಜಿಲ್ಲೆಯ ಗಡಿ ಗ್ರಾಮಗಳಲ್ಲಿ ಜಿಲ್ಲಾ ಪೊಲೀಸರಿಂದ ಪರಿಶೀಲನೆ ಕಾರ್ಯ ನಡೆದಿದೆ. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ, ಸತೀಶ್ ನೇತೃತ್ವದಲ್ಲಿ ವಿರಾಜಪೇಟೆ ಆರ್ಜಿ ಗ್ರಾಮದ ನಕ್ಸಲ್ ನಿಗ್ರಹ ದಳದ ಸಿಬ್ಬಂದಿಗಳು ಪುಷ್ಪಗಿರಿ ವ್ಯಾಪ್ತಿಯ ಗ್ರಾಮಗಳಿಗೆ ತೆರಳಿ ಗ್ರಾಮಸ್ಥರಿಂದ ನಕ್ಸಲ್ ಚಲನ-ವಲನಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.

ಜೂ.14ರ ರಾತ್ರಿ 7.45 ಸಮಯದಲ್ಲಿ ಸುಳ್ಯದ ದಟ್ಟಾರಣ್ಯ ವ್ಯಾಪ್ತಿಯ ಮಣಪ್ಪಾಡಿ ಗ್ರಾಮದ ಹಾಡಿ ಕಲ್ಲುವಿನ ಥಾಮಸ್ ಎಂಬುವರ ಶೆಡ್‍ಗೆ ಶಂಕಿತ 3 ಮಂದಿ ನಕ್ಸಲರು ಭೇಟಿ ನೀಡಿದ್ದರು ಎನ್ನಲಾಗಿದೆ. ಸುಳ್ಯ ಎಪಿಎಂಸಿ ಮಾಜಿ ಅಧ್ಯಕ್ಷ ಜಯರಾಮ್ ಎಂಬುವರಿಗೆ ಸೇರಿದ ಜಾಗದಲ್ಲಿ ಥಾಮಸ್ ಎಂಬುವರು ರಬ್ಬರ್ ಟ್ಯಾಪಿಂಗ್‍ನ ಶೆಡ್‍ನಲ್ಲಿ ವಾಸವಿದ್ದರು. ರಾತ್ರಿ ವೇಳೆ ಬಂದ ಇಬ್ಬರು ಯುವತಿಯರು, ರಿವಾಲ್ವರ್ ತೋರಿಸಿ, ಥಾಮಸ್ ಅವರನ್ನು ಬೆದರಿಸಿ ಅನ್ನ, ಮೊಟ್ಟೆ ಬುರ್ಜಿ ಮತ್ತು ಸ್ಥಳದಲ್ಲಿದ್ದ ಗುಟ್ಕಾ ಮತ್ತು ತಂಬಾಕನ್ನು ಹೊತ್ತೊ ಯ್ದಿದ್ದರು. ಈ ಕುರಿತು ಥಾಮಸ್ ಅವರು ಮಾಲೀಕ ಜಯರಾಮ್ ಅವರಿಗೆ ಮಾಹಿತಿ ನೀಡಿದ್ದು, ಕಾರ್ಕಳ ಎ.ಎನ್.ಎಫ್.ತಂಡದ ಗುಪ್ತದಳ ಸಿಬ್ಬಂದಿಗಳು ಶಂಕಿತ ನಕ್ಸಲರು ಬಂದಿರುವುದನ್ನು ದೃಢಪಡಿಸಿದ್ದರು.

ಈ ಹಿನ್ನಲೆಯಲ್ಲಿ ಕೊಡಗು ಸೇರಿದಂತೆ ಸುಳ್ಯ, ಕುಕ್ಕೆ ಸುಬ್ರಹ್ಮಣ್ಯ, ಹಾಸನ, ಸಕಲೇಶಪುರ ಮತ್ತು ಸುಳ್ಯದೊಂದಿಗೆ ಗಡಿ ಹಂಚಿಕೊಂಡ ಪ್ರದೇಶಗಳಲ್ಲಿ ನಿಗಾ ವಹಿಸುವಂತೆ ಸೂಚಿಸಲಾಗಿತ್ತು. ಶಂಕಿತ ನಕ್ಸಲರ ತಂಡದಲ್ಲಿ ಇಬ್ಬರು ಯುವತಿಯರು ಮತ್ತು ಓರ್ವ ಯುವಕನಿದ್ದು, ವಿದ್ಯುತ್ ಲೈನ್‍ಮ್ಯಾನ್‍ಗಳು ತೊಡುವ ಕಡು ಹಸಿರು ಬಣ್ಣದ ಸಮವಸ್ತ್ರ ತೊಟ್ಟಿದ್ದರೆಂದು ಥಾಮಸ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಯುವತಿಯರು ತೆಲುಗು ಭಾಷೆಯಲ್ಲಿ ಮಾತ ನಾಡಿದ್ದು, ನಾಡ ಬಂದೂಕು ಮತ್ತು ಪಿಸ್ತೂಲ್ ಹೊಂದಿ ರುವುದಾಗಿ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ.

ಕೊಡಗು ನಂಟು: ಕೊಡಗು ಜಿಲ್ಲೆಯ ಕಾಲೂರಿಗೆ 2004ರಲ್ಲಿ ನಕ್ಸಲರು ಭೇಟಿ ನೀಡಿದ್ದರು. ಇದಾದ ಬಳಿಕ 2018ರ ಫೆಬ್ರವರಿ 2ನೇ ತಾರೀಕು ಸಂಪಾಜೆ ವ್ಯಾಪ್ತಿಯ ಕೊಯನಾಡುವಿನ 2 ಮನೆಗಳಿಗೆ ನಕ್ಸಲರು ಭೇಟಿ ನೀಡಿ, ದಿನ ಬಳಕೆ ಪದಾರ್ಥಗಳನ್ನು ಹೊತ್ತೊಯ್ದಿದ್ದರು. ಫೆಬ್ರವರಿ 22ರಂದು ಮತ್ತೆ ನಾಪೋಕ್ಲು ವ್ಯಾಪ್ತಿಯ ಕಕ್ಕಬ್ಬೆಯಲ್ಲಿ ನಕ್ಸಲರು ಪ್ರತ್ಯಕ್ಷರಾಗಿ ಜನರಲ್ಲಿ ಭೀತಿ ಮೂಡಿಸಿದ್ದರು. ಈ ಸಂದರ್ಭ ಕೊಡಗು ಮತ್ತು ಕಾರ್ಕಳದ ಎಎನ್‍ಎಫ್ ತಂಡ ಜಂಟಿಯಾಗಿ, ಜಿಲ್ಲೆಯ ಗಡಿಭಾಗಗಳಲ್ಲಿ ಭಾರೀ ಕೂಂಬಿಂಗ್ ಕಾರ್ಯಾಚರಣೆ ನಡೆಸಿದರು.

ಕಕ್ಕಬ್ಬೆಯ ಬ್ರಹ್ಮಗಿರಿ ಬೆಟ್ಟತಪ್ಪಲು ಕೇರಳಕ್ಕೆ ಹೊಂದಿ ಕೊಂಡಿದ್ದು, ದಟ್ಟ ಕಾಡಿನಲ್ಲಿ ನಕ್ಸಲರು ಕೇರಳಕ್ಕೆ ಪರಾರಿಯಾದ ಬಗ್ಗೆ ಜಿಲ್ಲಾ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಆ ಬಳಿಕ ಕಕ್ಕಬ್ಬೆ, ಭಾಗಮಂಡಲ ವ್ಯಾಪ್ತಿ ಯಲ್ಲಿ ನಕ್ಸಲ್ ನಿಗ್ರಹ ತಂಡಗಳನ್ನು ನಿಯೋಜಿಸಲಾ ಗಿತ್ತು. ಸುಳ್ಯದಲ್ಲಿ ನಕ್ಸಲರು ಪ್ರತ್ಯಕ್ಷರಾದ ಹಿನ್ನಲೆಯಲ್ಲಿ ಕೊಡಗಿನ ಗಡಿಭಾಗಗಳಲ್ಲಿ ಹದ್ದಿನ ಕಣ್ಣಿಡಲಾಗಿದೆ.
ಗುಪ್ತಚರ ಸಿಬ್ಬಂದಿಗಳು ಕೂಡ ಕರಿಕೆ, ವಣಚಲು, ಕಕ್ಕಬ್ಬೆ, ಸೂರ್ಲಬಿ, ಕಡಮಕಲ್ಲು ಮತ್ತಿತರ ಗ್ರಾಮ ಗಳಿಗೆ ತೆರಳಿ ಸ್ಥಳೀಯರಿಂದ ಮಾಹಿತಿ ಕಲೆ ಹಾಕಿರುವ ಬಗ್ಗೆ ‘ಮೈಸೂರುಮಿತ್ರ’ನಿಗೆ ವಿಶ್ವಾಸನೀಯ ಮೂಲಗಳು ಮಾಹಿತಿ ನೀಡಿವೆ. ಸುಳ್ಯದ ಥಾಮಸ್ ಎಂಬುವರ ಮನೆಯಿಂದ ತಂಬಾಕು ಪದಾರ್ಥ ಗಳನ್ನು ನಕ್ಸಲರು, ದಟ್ಟ ಕಾಡಿನಲ್ಲಿ ಜಿಗಣೆಗಳಿಂದ ರಕ್ಷಣೆ ಪಡೆಯಲು ಕೊಂಡೊ ಯ್ದಿರಬಹುದೆಂದು ಗುಪ್ತಚರ ಇಲಾಖೆ ಶಂಕೆ ವ್ಯಕ್ತಪಡಿಸಿದೆ.