ಸೆ.15ರಂದು ಬಾಗಲಕೋಟೆಯಲ್ಲಿ ರೈತಸಂಘದಿಂದ ನೆರೆ ಸಂತ್ರಸ್ತರ ಬಹಿರಂಗ ಸಮಾವೇಶ

ನೆರೆ ಸಂತ್ರಸ್ತರಿಗೆ ನೆರವಾಗದೆ ಸರ್ಕಾರದ ನಿರ್ಲಕ್ಷ್ಯ ಧೋರಣೆ

ಮೈಸೂರು, ಸೆ.4(ಆರ್‍ಕೆಬಿ)- ನೆರೆಪೀಡಿತ ಪ್ರದೇಶಗಳಿಗೆ ನೆರವು ನೀಡುವ ವಿಚಾರ ದಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳ ನಿರ್ಲಕ್ಷ್ಯ ಧೋರಣೆ ಖಂಡಿಸಿ, ಬೆಳಗಾವಿ, ಕಲಬುರ್ಗಿ ವಿಭಾಗದ ನೆರೆ ಸಂತ್ರಸ್ತರಿಗೆ ಪರಿಹಾರದ ಹಕ್ಕೊತ್ತಾಯದ ಅಂಗವಾಗಿ ಸೆ.15ರಂದು ಮಧ್ಯಾಹ್ನ 12 ಗಂಟೆಗೆ ಬಾಗಲಕೋಟೆಯ ನವನಗರ ಕಾಳಿದಾಸ ಶಿಕ್ಷಣ ಸಂಸ್ಥೆ ಮೈದಾನ ದಲ್ಲಿ ನೆರೆ ಸಂತ್ರಸ್ತರ ಬಹಿರಂಗ ಸಮಾವೇಶ ಆಯೋಜಿಸಲಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಅಧ್ಯಕ್ಷ ಬಡ ಗಲಪುರ ನಾಗೇಂದ್ರ ಇಂದಿಲ್ಲಿ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹಿರಂಗ ಅಧಿವೇಶನದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಇನ್ಫೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿ ಸೇರಿದಂತೆ ರಾಜ್ಯದ ಮಠಾಧಿ ಪತಿಗಳು, ಜನಪರ ಚಿಂತಕರು, ಹೋರಾಟಗಾರರು ಭಾಗವಹಿಸಲಿದ್ದಾರೆ ಎಂದರು.

ನೆರೆಯಿಂದಾಗಿ ದಲಿತ ಅಲೆಮಾರಿಗಳ ಬದುಕು ಬೀದಿಗೆ ಬಿದ್ದಿದೆ. ಮನೆಗಳು ನೆಲ ಕಚ್ಚಿವೆ. ಉತ್ತರ ಕರ್ನಾಟಕದ ನೆರೆ ಪೀಡಿತ ಪ್ರದೇಶಗಳಲ್ಲಿ ಅರಿಶಿನ, ದ್ರಾಕ್ಷಿ, ಕಬ್ಬು, ಸೂರ್ಯಕಾಂತಿ, ಬಾಳೆ, ಹೆಸರು ಬೆಳೆಗಳು ಸಂಪೂರ್ಣ ನೆಲಕಚ್ಚಿವೆ. ನೆರೆ ಅಧ್ಯಯನ ದಲ್ಲಿಯೇ ಸರ್ಕಾರದ ಲೋಪವಾಗಿದೆ. 10 ಸಾವಿರ ರೂ.ಗಳ ತಾತ್ಕಾಲಿಕ ಪರಿಹಾರ ಸಂತ್ರಸ್ತರಿಗೆ ತಲುಪಿಲ್ಲ. ಪ್ರತಿ ಎಕರೆ ಕಬ್ಬಿಗೆ 5438 ರೂ ಪರಿಹಾರ ನೀಡುತ್ತಿದ್ದು, ಇದು ಭಿಕ್ಷೆಯೋ ಅಥವಾ ಪರಿಹಾರವೋ ತಿಳಿಯುತ್ತಿಲ್ಲ. ಪರಿಹಾರ ವಿತರಣೆ ಸಂಪೂರ್ಣ ಅವೈಜ್ಞಾನಿಕವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದಕ್ಷಿಣ ಕರ್ನಾಟಕದ ನೆರೆ ಪೀಡಿತ ಪ್ರದೇಶಗಳ ಅಧಿವೇಶನವನ್ನು ಮುಂದಿನ ದಿನ ಗಳಲ್ಲಿ ನಡೆಸಲು ತೀರ್ಮಾನಿಸಲಾಗುವುದು ಎಂದರು. ಭಾರತೀಯ ಕಿಸಾನ್ ಸಂಘ, ಸ್ವರಾಜ್ ಇಂಡಿಯಾ, ಕರ್ನಾಟಕ ರೈತ ಸೇನಾ, ಕರ್ನಾಟಕ ರಕ್ಷಣಾ ವೇದಿಕೆ, ಬರ ಮುಕ್ತ ಕರ್ನಾಟಕ ಆಂದೋಲನ ಜನಾಂದೋಲನಗಳ ಮಹಾಮೈತ್ರಿ ಸಹಯೋಗದಲ್ಲಿ ಅದಿವೇಶನ ನಡೆಸಲಾಗುವುದು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಹೊಸಕೋಟೆ ಬಸವರಾಜು, ಕೊಡಗು ಜಿಲ್ಲಾ ರೈತಸಂಘದ ಅಧ್ಯಕ್ಷ ಮನುಸ್ವಾಮಯ್ಯ, ಸ್ವರಾಜ್ ಇಂಡಿಯಾದ ಪುನೀತ್, ಮರಂಕಯ್ಯ ಇನ್ನಿತರರು ಉಪಸ್ಥಿತರಿದ್ದರು.