ಅಂತಾರಾಷ್ಟ್ರೀಯ ಆಹಾರ ಸಮ್ಮೇಳನದಲ್ಲಿ ನವೀನ ತಂತ್ರಜ್ಞಾನ ಆಧರಿತ ಆಹಾರ ಪದಾರ್ಥಗಳ ಪ್ರದರ್ಶನ

ಮೈಸೂರು: – ಮೈಸೂರಿನ ಸಿಎಫ್ ಟಿಆರ್‍ಐ ಸಂಸ್ಥೆಯ ಆವರಣದಲ್ಲಿ 8ನೇ ಅಂತರ ರಾಷ್ಟ್ರೀಯ ಆಹಾರ ಸಮ್ಮೇಳನ `ಇಫ್ಕಾನ್-2018’ ಅಂಗವಾಗಿ ಗುರುವಾರ ಆರಂಭವಾದ ಆಹಾರ ಮೇಳದಲ್ಲಿ 88ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದ್ದು, ಹೊಸ ಹೊಸ ತಂತ್ರಜ್ಞಾನ ಆಧರಿತ ಆಹಾರ ಉತ್ಪನ್ನ ಗಳ ಪ್ರದರ್ಶನ ಗ್ರಾಹಕರ ಮನ ಸೆಳೆಯುತ್ತಿದೆ.

ಕೇಂದ್ರೀಯ ಆಹಾರ ಮತ್ತು ಸಂಶೋಧನಾಲಯ (ಸಿಎಫ್‍ಟಿಆರ್‍ಐ)ದ ಸಂಶೋಧನಾ ವಿದ್ಯಾರ್ಥಿಗಳು ಸೇರಿದಂತೆ ಬೇರೆ ಬೇರೆ ರಾಜ್ಯಗಳ ಆಹಾರ ವಿಜ್ಞಾನ ವಿದ್ಯಾರ್ಥಿಗಳು ಸಂಶೋಧಿತ ಆಹಾರ ಪದಾರ್ಥ ಗಳನ್ನು ಪ್ರದರ್ಶನದಲ್ಲಿಟ್ಟು ಗ್ರಾಹಕರಿಗೆ ಮಾಹಿತಿ ನೀಡ ಲಾಗುತ್ತಿದೆ. ಹವಾನಿಯಂತ್ರಿತ ವ್ಯವಸ್ಥೆಯೊಂದಿಗೆ ಸಿದ್ಧ ಪಡಿಸಿರುವ ಟೆಂಟ್‍ನಲ್ಲಿ ಅಣಿಗೊಳಿಸಿರುವ ಆಹಾರ ಮೇಳದಲ್ಲಿ ಹೊಸ ತಂತ್ರಜ್ಞಾನದ ಮೇಲೆ ಬೆಳಕು ಚೆಲ್ಲುವ ಫಲಕಗಳನ್ನು ಪ್ರದರ್ಶಿಸಿ ವಿದ್ಯಾರ್ಥಿಗಳಿಗೆ ವಿವರಣೆ ನೀಡಲಾಗುತ್ತಿದೆ.

ಮಹಾರಾಷ್ಟ್ರದ ಇಂಡಸ್ಟ್ರಿ ಯಲ್ ಮೆಟಲ್ ಪೌಡರ್ಸ್ ಪ್ರೈ. ಲಿಮಿಟೆಡ್ ಸಂಸ್ಥೆ ಮಳಿಗೆ ಯೊಂದನ್ನು ಪಡೆದುಕೊಂಡು ದೇಶದಲ್ಲಿ ಕಬ್ಬಿಣಾಂಶ ವನ್ನು ಹೆಚ್ಚಿಸುವುದಕ್ಕೆ ಬೇಕಾದ ಸುಲಭ ರೀತಿಯಲ್ಲಿ ತಯಾರಿಸಬಹುದಾದ ತಿನಿಸು, ಪಾನೀಯದ ಬಗ್ಗೆ ವಿವರಣೆ ನೀಡುತ್ತಿದೆ. ಸಂಸ್ಥೆಯ ಸಮಾಲೋಚಕಿ ಶೀಥಲ್ ಓಸ್ವಾಲ್, ಕಬ್ಬಿಣಾಂಶದ ಪಾನೀಯ ತಯಾ ರಿಕೆ, ಮೆಟಲ್ ಪೌಡರ್ ಕುರಿತು ಮಾಹಿತಿ ನೀಡಿದರು. ಮೀನಿನ ಆಕೃತಿಯಲ್ಲಿ ತಯಾರಿಸಿರುವ ಕಬ್ಬಿಣದ ತುಂಡೊಂದನ್ನು ಬಿಸಿ ನೀರಿನಲ್ಲಿ ಹಾಕಿ, ಸ್ವಲ್ಪ ಪ್ರಮಾ ಣದ ನಿಂಬೆಹಣ್ಣಿನ ರಸ ಮಿಶ್ರಣ ಮಾಡಿ ಪಾನೀಯ ತಯಾರಿಸುವುದರಿಂದ ಕಬ್ಬಿಣಾಂಶ ದೇಹ ಸೇರುತ್ತದೆ. ಇದರಿಂದ ಆರೋಗ್ಯ ಕಾಪಾಡಬಹುದು ಎಂದು ವಿವರಣೆ ನೀಡಿದರು. ಇದಕ್ಕಾಗಿ ಸಿಕ್ಕ ಸಿಕ್ಕ ಕಬ್ಬಿಣದ ತುಂಡನ್ನು ಬಳಸದೆ, ಮಹಾರಾಷ್ಟ್ರದ ಇಂಡಸ್ಟ್ರಿಯಲ್ ಮೆಟಲ್ ಪೌಡರ್ಸ್ ಪ್ರೈ. ಲಿಮಿಟೆಡ್ ಸಂಸ್ಥೆಯು ಇದಕ್ಕಾ ಗಿಯೇ ತಯಾರಿಸಿರುವ ಮೀನು ಹಾಗೂ ಎಲೆ ಆಕೃತಿಯ ಕಬ್ಬಿಣದ ವಸ್ತುವನ್ನು ಬಳಸುವಂತೆ ತಿಳಿ ಹೇಳಿದರು.

ಇದಲ್ಲದೆ ಅಡುಗೆ ತೈಲ, ವಿವಿ ಬಿಸ್ಕತ್, ಆರೋಗ್ಯ ದಾಯಕ ಪಾನೀಯ, ಸಕ್ಕರೆ ಅಂಶ ಇಲ್ಲದಿರುವ ಆಹಾರ ಪದಾರ್ಥಗಳು ಸೇರಿದಂತೆ ಇನ್ನಿತರ ತಿನಿಸುಗಳನ್ನು ಪ್ರದರ್ಶನಕ್ಕಿಡಲಾಗಿದೆ. ವಿವಿಧ ಆಹಾರ ತಯಾರಿಕಾ ಸಂಸ್ಥೆಗಳು ತಾವು ಮಾರುಕಟ್ಟೆಗೆ ಬಿಡುಗಡೆ ಮಾಡಿ ರುವ ಹೊಸ ಹೊಸ ಆಹಾರ ಪದಾರ್ಥಗಳನ್ನು ಗ್ರಾಹಕ ರಿಗೆ ಪರಿಚಯ ಮಾಡಿಕೊಡಲಾಗುತ್ತಿತ್ತು.

ವಿವಿಧ ರಾಜ್ಯಗಳ ಸಂಶೋಧನಾ ವಿದ್ಯಾರ್ಥಿಗಳು ಮೇಳ ದಲ್ಲಿ ಪಾಲ್ಗೊಂಡಿರುವುದರಿಂದ ಮೈಸೂರು ದಸರಾ ಮಹೋತ್ಸವ ಪರಂಪರೆಯನ್ನು ಬಿಂಬಿಸು ವಂತೆ ವೇದಿಕೆ ಸೃಷ್ಟಿಸಲಾಗಿದೆ. ಅರಮನೆಯ ದರ್ಬಾರ್ ಹಾಲ್‍ನಂತೆ ವಿಚಾರ ಸಂಕಿರಣ ನಡೆಯುವ ಸಭಾಂ ಗಣವನ್ನು ಅಲಂಕರಿಸಲಾಗಿದೆ. ಇದರೊಂದಿಗೆ ಮೇಳಕ್ಕೆ ಬಂದಿರುವವರು ಅಂಬಾರಿ ಹೊತ್ತಿರುವ ಆನೆಯ ಆಕೃತಿಯ ಮುಂದೆ ನಿಂತು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಿದ್ದಾರೆ. ಅಲ್ಲದೆ ಸಿಎಫ್‍ಟಿಆರ್‍ಐ ಆವ ರಣದಲ್ಲಿ ವಿವಿಧ ಬಗೆಯ ಗೊಂಬೆಗಳನ್ನು ನಿಲ್ಲಿಸ ಲಾಗಿದ್ದು, ಆಕರ್ಷಣೀಯ ಕೇಂದ್ರ ಬಿಂದುವಾಗಿದೆ. ಎರಡು ದಿನಗಳ ಆಹಾರ ಮೇಳವನ್ನು ವೀಕ್ಷಿಸಲು ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ವಿವಿಧ ಶಾಲೆಗಳ ನೂರಾರು ವಿದ್ಯಾರ್ಥಿಗಳು ಇಂದು ವಸ್ತು ಪ್ರದರ್ಶನವನ್ನು ವೀಕ್ಷಿಸಿದರು.