ನಿಖಿಲ್ ಪ್ರಚಾರ ವಾಹನಕ್ಕೆ ಕೆ.ಆರ್.ಪೇಟೆ ಬಳಿ ಕಲ್ಲೆಸೆತ

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಅವರ ಪ್ರಚಾರ ವಾಹನಗಳ ಮೇಲೆ ಗುಂಪೊಂದು ಕಲ್ಲು ತೂರಾಟ ನಡೆಸಿದ್ದು, ಶಾಸಕ ನಾರಾಯಣ ಗೌಡ ಅವರ ಆಪ್ತ ಸಹಾಯಕನ ಕಾರು ಸೇರಿದಂತೆ 3 ಕಾರುಗಳು ಜಖಂಗೊಂಡ ಘಟನೆ ಕೆ.ಆರ್.ಪೇಟೆ ತಾಲೂಕು ಸೋಮನ ಹಳ್ಳಿಯಲ್ಲಿ ಇಂದು ಸಂಜೆ ನಡೆದಿದೆ.

ಬೂಕನಕೆರೆಯಲ್ಲಿ ಪ್ರಚಾರ ಮುಗಿಸಿ ನಿಖಿಲ್ ಕುಮಾರ್ ಪ್ರಚಾರ ವಾಹನಗಳು ಸೋಮನಹಳ್ಳಿಗೆ ಬಂದಾಗ ಸುಮಾರು 20ರಿಂದ 30 ಜನರಿದ್ದ ಗುಂಪು `ಗೋ ಬ್ಯಾಕ್ ನಿಖಿಲ್’ ಎಂದು ಘೋಷಣೆ ಕೂಗುತ್ತಾ, ಕಾರುಗಳ ಮೇಲೆ ಕಲ್ಲು ತೂರಾಟ ನಡೆಸಿ ದರು. ಇದರಲ್ಲಿ ನಾರಾಯಣಗೌಡರ ಆಪ್ತ ಸಹಾಯಕ ದಯಾನಂದ್ ಅವರ ಕಾರು, ತಾಪಂ ಉಪಾಧ್ಯಕ್ಷ ಜಾನಕಿ ರಾಂ ಕಾರು ಸೇರಿದಂತೆ ಮೂರು ಕಾರುಗಳು ಜಖಂಗೊಂಡಿವೆ. ಅದೇ ವೇಳೆ ಜೆಡಿಎಸ್ ಮುಖಂಡ ಕೊಮ್ಮೇನಹಳ್ಳಿ ಜಗದೀಶ್ ಎಂಬುವರ ಮೇಲೆ ಹಲ್ಲೆ ನಡೆದಿದ್ದು, ಅವರಿಗೆ ಹಲ್ಲು ಮುರಿತವಾಗಿದೆ.

ತಕ್ಷಣವೇ ಎಚ್ಚೆತ್ತುಕೊಂಡ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದ್ದಾರೆ. ಈ ಘಟನೆಯಲ್ಲಿ ನಿಖಿಲ್ ಮತ್ತು ಶಾಸಕ ನಾರಾಯಣಗೌಡರು ಸ್ವಲ್ಪ ದೂರದಲ್ಲಿದ್ದ ಕಾರಣ ಅವರಿಗೆ ಯಾವುದೇ ರೀತಿಯ ಅಪಾಯವಾಗ ಲಿಲ್ಲ ಎಂದು ನಾರಾಯಣಗೌಡರ ಆಪ್ತ ಸಹಾಯಕ ದಯಾನಂದ ಅವರು `ಮೈಸೂರು ಮಿತ್ರ’ನಿಗೆ ತಿಳಿಸಿದರು. ಇದಕ್ಕೂ ಮುನ್ನ ಬೂಕನಕೆರೆಯಲ್ಲಿ ನಿಖಿಲ್ ಪ್ರಚಾರ ನಡೆಸುತ್ತಿದ್ದಾಗಲೂ ಕೂಡ ಗುಂಪೊಂದು `ಗೋ ಬ್ಯಾಕ್ ನಿಖಿಲ್’ ಎಂದು ಘೋಷಣೆ ಕೂಗಿದರು.
ಅಲ್ಲೂ ಸಹ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದ್ದಾರೆ. ಕೊನೆಗೆ ಅಕ್ಕಿಹೆಬ್ಬಾಳಿನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ನಿಖಿಲ್ ಭಾಷಣದ ನಂತರ ಗುಂಪೊಂದು ಅವರ ವಿರುದ್ಧ ಘೋಷಣೆ ಕೂಗಿದೆ ಎಂದು ವರದಿಗಳು ತಿಳಿಸಿವೆ.