ಬೇಲೂರು: ಅರೇಹಳ್ಳಿ ಸಮೀಪದ ಬಿಕ್ಕೋಡು ಹೋಬಳಿಯ ಸುತ್ತಮುತ್ತ ಹಳ್ಳಿಗಳಲ್ಲಿ ಸೋಮವಾರ ಸುರಿದ ಭಾರಿ ಗಾಳಿ ಮಳೆಗೆ ಅಪಾರ ಪ್ರಮಾಣ ನಷ್ಟ ಸಂಭವಿಸಿದೆ. ಜೊತೆಗೆ, ವಿದ್ಯುತ್ ಕಂಬಗಳು ಮುರಿದು ಬಿದ್ದ ಪರಿಣಾಮ ಹಲವು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದ್ದು, ಜನರು ಕತ್ತಲೆಯಲ್ಲಿ ಜೀವನ ನಡೆಸುವಂತಾಗಿದೆ.
ಮಲೆನಾಡು ಭಾಗದ ಹಳ್ಳಿಗಳಿಗೆ ವಿದ್ಯುತ್ ಕೈಕೊಟ್ಟ ಪರಿಣಾಮ, ಕುಡಿಯುವ ನೀರಿನ ಸರಬರಾಜಿಗೂ ತೊಂದರೆ ಉಂಟಾಗಿದ್ದು, ಜನರ ಗೋಳು ಹೇಳತೀರದಾಗಿದೆ. ಭಾರಿ ಗಾಳಿ ಮಳೆಗೆ ರಸ್ತೆ ಬದಿಯ ಮರಗಳು ಅಲ್ಲಲ್ಲಿ ತೋಟಗಳ ಮಧ್ಯೆ ಹಾದು ಹೋಗಿರುವ ವಿದ್ಯುತ್ ತಂತಿಯ ಮೇಲೆ ಮರ ಬಿದ್ದು ಸುಮಾರು 10ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಬಿಕ್ಕೋಡು ಗ್ರಾಮದ ಪೆಟ್ರೋಲ್ ಬಂಕ್ ಬಳಿ ಟ್ರಾನ್ಸ್ ಫಾರಂ ಕಂಬದ ಮೇಲೆ ಬೃಹತ್ ಗಾತ್ರದ ಮರ ಬಿದ್ದ ಪರಿಣಾಮ ಕಂಬ ಮುರಿದು ಹೋಗಿದೆ. ಹುಸ್ಕೂರು ಗ್ರಾಮದಲ್ಲಿ 6ಕ್ಕೂ ಹೆಚ್ಚು ಕಂಬಗಳು ಮುರಿದು ಬಿದ್ದ ಪರಿಣಾಮ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ.
ಹುಸ್ಕೂರು, ಚಿಕ್ಕಬಿಕ್ಕೋಡು, ಚೌಕನಹಳ್ಳಿ, ನಿಡುಮನಹಳ್ಳಿ, ಹೊನ್ನೆಮನೆ, ಬಾಳಿಗನಹಳ್ಳಿ, ಚಳ್ಳೇನಹಳ್ಳಿ ಗ್ರಾಮಗಳಿಗೆ ವಿದ್ಯುತ್ ಸಂಚಾರ ಸಂಪೂರ್ಣ ಬಂದಾಗಿದೆ.
ಅರೇಹಳ್ಳಿಯ ಚೆಸ್ಕಾಂ ಇಂಜಿನಿಯರ್ ರಾಘವೇಂದ್ರ ಮಾತನಾಡಿ, ಸೋಮವಾರ ಸುರಿದ ಮಳೆಗೆ ಮರಬಿದ್ದ ಕಾರಣ ಬಿಕ್ಕೋಡು, ಕೆಸಗೋಡು, ಕುಶಾವರ, ಲಕ್ಕುಂದ, ಕೋಗಿಲೆಮನೆ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾ ಗಿದ್ದು, ಚೆಸ್ಕಾಂ ಸಿಬ್ಬಂದಿಗಳು ಕಾರ್ಯಪ್ರವೃತ್ತರಾಗಿದ್ದು ಬುಧವಾರದ ಹೊತ್ತಿಗೆ ಎಲ್ಲಾ ಸಮಸ್ಯೆಯನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗಿದೆ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.