ಜನಸಂಪರ್ಕ ಸಭೆಯ ಅಹವಾಲುಗಳಿಗೆ ತ್ವರಿತ ಪರಿಹಾರ ನೀಡಲು ಸೂಚನೆ

ಚಾಮರಾಜನಗರ:  ಜನ ಸಂಪರ್ಕ ಸಭೆಯಲ್ಲಿ ಸಲ್ಲಿಸಲಾಗುವ ಅಹವಾಲು, ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಅಧಿಕಾರಿಗಳು ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಕಂದಾಯ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜನರ ಸಮಸ್ಯೆ, ಕುಂದುಕೊರತೆಗಳನ್ನು ಆಲಿಸಿ ಸ್ಥಳದಲ್ಲಿಯೇ ಪರಿಹರಿಸುವ ಸಲು ವಾಗಿ ತಾಲೂಕು ಹಾಗೂ ಹೋಬಳಿ ಮಟ್ಟ ದಲ್ಲಿ ಜನಸಂಪರ್ಕ ಸಭೆ ನಡೆಸುವಂತೆ ಸರ್ಕಾರ ನಿರ್ದೇಶನ ನೀಡಿದೆ. ಈ ನಿಟ್ಟಿನಲ್ಲಿ ಎಲ್ಲಾ ತಾಲೂಕುಗಳ ವ್ಯಾಪ್ತಿಯಲ್ಲಿ ಪ್ರತಿ ತಿಂಗಳು ಜನಸಂಪರ್ಕ ಸಭೆ ಏರ್ಪ ಡಿಸಲಾಗುತ್ತದೆ ಎಂದರು.

ಸಭೆಯಲ್ಲಿ ಸಲ್ಲಿಕೆಯಾಗುವ ಅರ್ಜಿ, ಅಹವಾಲುಗಳನ್ನು ಕಾಲಮಿತಿಯೊಳಗೆ ಇತ್ಯರ್ಥಪಡಿಸಬೇಕು. ಜನಸಂಪರ್ಕ ಸಭೆಯಲ್ಲಿ ಅರ್ಜಿದಾರರು ನೀಡುವ ಮನವಿ, ಸಮಸ್ಯೆಗಳನ್ನು ನಿರ್ಲಕ್ಷಿಸದೆ ಗಂಭೀರ ವಾಗಿ ಪರಿಗಣಿಸಬೇಕು. ಪ್ರತಿ ಸಭೆಯಲ್ಲಿ ಸ್ವೀಕರಿಸಲಾಗುವ ಅರ್ಜಿಗಳಿಗೆ ಸಂಬಂಧಿಸಿ ದಂತೆ ಅಧಿಕಾರಿಗಳು ಯಾವ ಕ್ರಮ ತೆಗೆದು ಕೊಂಡಿದ್ದಾರೆ, ಸಮಸ್ಯೆ ಪರಿಹಾರವಾಗಿದೆಯೇ ಎಂಬ ಬಗ್ಗೆ ತಾವೇ ಖುದ್ದು ಪರಾಮರ್ಶೆ ನಡೆಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.

ಸಭೆಯಲ್ಲಿ ನಾಗರಿಕರು ಸಮಸ್ಯೆ ಪರಿಹರಿಸಲು ಕೋರಿ ಸಲ್ಲಿಸುವ ಅರ್ಜಿಗಳನ್ನು ತಾಲೂಕು ಮಟ್ಟದಲ್ಲಿ ಇತ್ಯರ್ಥಪಡಿಸಲು ಸಾಧ್ಯವಿದ್ದಲ್ಲಿ ಒಂದು ವಾರದೊಳಗೆ ಪರಿಹರಿಸಬೇಕು. ಜಿಲ್ಲಾಮಟ್ಟದ ಹಂತದಲ್ಲಿ ಪರಿಹರಿಸಬೇಕಿದ್ದರೆ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಶೀಘ್ರವೇ ಅರ್ಜಿ ರವಾನಿಸಬೇಕು. ಜನಸಂಪರ್ಕ ಸಭೆಯಲ್ಲಿ ಸ್ವೀಕರಿಸಲಾಗುವ ಅರ್ಜಿಗಳ ವಿಲೇವಾರಿ ಸಂಬಂಧ ನೇರವಾಗಿ ತಮ್ಮನ್ನೇ ಯಾವುದೇ ಅಧಿಕಾರಿ ಭೇಟಿ ಮಾಡಬಹುದು ಎಂದು ಕಾವೇರಿ ಅವರು ತಿಳಿಸಿದರು.

ಇಂದಿನ ಸಭೆಯಲ್ಲಿ ಹಲವಾರು ವಿಷಯ ಗಳಿಗೆ ಸಂಬಂಧಿಸಿದಂತೆ ಅರ್ಜಿಗಳನ್ನು ನಾಗರಿಕರು ಸಲ್ಲಿಸಿದ್ದಾರೆ. ಇದರ ಪರಿಹಾರಕ್ಕೆ ಶೀಘ್ರ ಕ್ರಮ ತೆಗೆದುಕೊಳ್ಳಬೇಕು. ಕೆಲ ಅರ್ಜಿಗಳ ಪರಿಹಾರಕ್ಕೆ ನಿಗದಿತ ಗಡುವು ನೀಡಿ ಪರಿಹರಿಸುವಂತೆ ಸೂಚಿಸಲಾಗಿದೆ.

ಮುಂದಿನ ಸಭೆಯ ವೇಳೆಗೆ ಪ್ರಸ್ತುತ ಅರ್ಜಿ ದಾರರ ಸಮಸ್ಯೆಗಳು ಇತ್ಯರ್ಥವಾಗಿರಬೇಕು. ಇದೇ ಸಮಸ್ಯೆಗಳು ಮತ್ತೆ ಸಂಬಂಧಿಸಿದ ಅರ್ಜಿದಾರರಿಂದ ಪುನರಾವರ್ತನೆಯಾಗ ದಂತೆ ಅಧಿಕಾರಿಗಳು ಪರಿಹರಿಸಿರಬೇಕೆಂದು ಜಿಲ್ಲಾಧಿಕಾರಿ ತಾಕೀತು ಮಾಡಿದರು.

ಆರಂಭದಲ್ಲೇ ಪ್ರತಿ ಅರ್ಜಿದಾರರಿಂದ ಜಿಲ್ಲಾಧಿಕಾರಿಯವರೆ ಖುದ್ದು ಸಮಸ್ಯೆಗಳನ್ನು ಆಲಿಸಿದರು. ಆಯಾ ಹೋಬಳಿಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಕೈಗೆತ್ತಿ ಕೊಂಡರು. ಪ್ರತಿಯೊಬ್ಬರು ಸಾವಕಾಶವಾಗಿ ಕುಂದುಕೊರತೆ ಹೇಳಿಕೊಳ್ಳಲು ಸಾಧ್ಯವಾಯಿತು.

ಅರ್ಜಿಗಳನ್ನು ಪರಿಶೀಲಿಸಿ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಹಂತದ ಪರಿಹಾರ ಕ್ಕಾಗಿ ಜಿಲ್ಲಾಧಿಕಾರಿಯವರು ಸೂಚಿಸಿ ದರು. ಒಟ್ಟು 64 ಅರ್ಜಿಗಳು ಜನಸಂಪರ್ಕ ಸಭೆಯಲ್ಲಿ ಸ್ವೀಕೃತವಾದವು. ಉಪವಿಭಾಗಾಧಿಕಾರಿ ಫೌಜಿಯಾ ತರನ್ನುಮ್, ತಹಶೀಲ್ದಾರ್ ಕೆ.ಪುರಂದರ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್, ನಗರಸಭೆ ಆಯುಕ್ತ ರಾಜಣ್ಣ, ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.