ನೆರೆಪೀಡಿತ ಪ್ರದೇಶದ ರೈತರ ಸಾಲಗಳ ಪುನರ್ರಚನೆ ಇಲ್ಲವೇ ಮರುಪಾವತಿಗೆ ಒಂದು ವರ್ಷ ಕಾಲಾವಕಾಶ

ಮೈಸೂರು,ಸೆ.26(ಎಸ್‍ಪಿಎನ್)-ನೆರೆ ಪೀಡಿತÀ ಪ್ರದೇಶದ ಗ್ರಾಹಕರು ಹಾಗೂ ರೈತರು ಬ್ಯಾಂಕ್‍ಗಳಲ್ಲಿ ಪಡೆದಿರುವ ಸಾಲಗಳ ಪುನರ್ರಚನೆ ಅಥವಾ ಮರು ಪಾವತಿಗೆ ಒಂದು ವರ್ಷ ಕಾಲಾವಕಾಶ ನೀಡಲಾಗಿದೆ. ಈ ಸಂಬಂಧ ಆರ್‍ಬಿಐ ಮಾರ್ಗ ಸೂಚಿಗಳನ್ನು ಎಲ್ಲಾ ಬ್ಯಾಂಕ್‍ಗಳಿಗೆ ಮಾಹಿತಿ ರವಾನಿಸಲಾಗಿದೆ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ವೆಂಕಟಾಚಲಪತಿ ತಿಳಿಸಿದ್ದಾರೆ.

ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆರ್‍ಬಿಐ ಮಾರ್ಗಸೂಚಿ ಪ್ರಕಾರ, ಕರ್ನಾಟಕ ರಾಜ್ಯ ಸರ್ಕಾರ ಮತ್ತು ರಾಜ್ಯ ಮಟ್ಟದ ಬ್ಯಾಂಕರ್‍ಗಳ ಸಮಿತಿ ಕಾಲಾವಕಾಶ ವಿಸ್ತರಿಸುವ ನಿರ್ಣಯ ತೆಗೆದುಕೊಂಡಿದೆ. ಈ ಮಾಹಿತಿಯನ್ನು ಎಲ್ಲಾ ಬ್ಯಾಂಕ್‍ಗಳಿಗೆ ರವಾನಿಸಲಾಗಿದೆ ಎಂದು ಮಾಹಿತಿ ನೀಡಿದರು. ರಾಜ್ಯ ಸರ್ಕಾರ ಮತ್ತು ರಾಜ್ಯಮಟ್ಟದ ಬ್ಯಾಂಕರುಗಳ ಸಮಿತಿ ವತಿಯಿಂದ ಕಳೆದ 15 ದಿನಗಳ ಹಿಂದೆ ಬೆಂಗಳೂರಿನಲ್ಲಿ ಜಂಟಿ ಸಭೆ ನಡೆಸಿ ಈ ತೀರ್ಮಾನಕ್ಕೆ ಬರಲಾಗಿದೆ. ಸಾಲ ವಿಸ್ತರಣೆ ಅವಧಿಯ ಬಡ್ಡಿಯನ್ನು ಫಲಾನುಭವಿಗಳು ಪಾವತಿಸಬೇಕೇ, ಬೇಡವೇ ಎಂಬುದರ ಬಗ್ಗೆ ಆರ್‍ಬಿಐನಿಂದ ಸ್ಪಷ್ಟ ನಿರ್ದೇಶನ ಬರಬೇಕಿದೆ. ಸದ್ಯಕ್ಕೆ ನೆರೆ ಪೀಡಿತ ಪ್ರದೇಶದ ಗ್ರಾಹಕರು ಹಾಗೂ ರೈತರು, ತಾವು ಪಡೆದ ಸಾಲದ ಮರು ಪಾವತಿಸುವ ಅವಧಿ ಮುಂದೂಡುವ ಬಗ್ಗೆ ಆಯಾಯ ಬ್ಯಾಂಕುಗಳಿಗೆ ಅರ್ಜಿ ಸಲ್ಲಿಸಬೇಕು ಎಂದು ಹೇಳಿದರು.

ನೆರೆ ಪೀಡಿತ ಪ್ರದೇಶದ ಬ್ಯಾಂಕುಗಳಲ್ಲಿ ರೈತರು ಮತ್ತು ಗ್ರಾಹಕರು ಪಡೆದ ಸಾಲದ ಖಾತೆಗಳು ಚಾಲ್ತಿಯಲ್ಲಿರಬೇಕು ಅಥವಾ ಸುಸ್ಥಿತಿಯಲ್ಲಿರಬೇಕು. ಸಾಲವು ಸುಸ್ತಿಯಾಗಿರಬಾರದು ಮತ್ತು ಅನುತ್ಪಾದಕ ಸ್ಥಿತಿಯಲ್ಲಿರಬಾರದು. ಈ ಅವಕಾಶ ಪಡೆಯಲಿಚ್ಛಿಸುವ ಸಾರ್ವಜನಿಕರು, ರೈತರು ನಿಗದಿತ ನಮೂನೆ ಯಲ್ಲಿ ಒಪ್ಪಿಗೆ ಪತ್ರವನ್ನು ಸಂಬಂಧಿಸಿದ ಬ್ಯಾಂಕ್‍ಗೆ (slbckarnataka.in> information centre>downloads>Restructure application) ಸಲ್ಲಿಸಬೇಕು ಎಂದು ಮಾಹಿತಿ ನೀಡಿದರು.

ಮೈಸೂರು ಜಿಲ್ಲೆಯ 5 ತಾಲೂಕು ಬರಪೀಡಿತ ಪಟ್ಟಿಯಲ್ಲಿವೆ. ಈ ವ್ಯಾಪ್ತಿಯ ತೋಟಗಾರಿಕೆ ಇಲಾಖೆಯ 1996 ರೈತರು, ಕೃಷಿ ಇಲಾಖೆಯ ವ್ಯಾಪ್ತಿಯ ಅಂದಾಜು 2,650ಕ್ಕೂ ಹೆಚ್ಚು ರೈತ ಕುಟುಂಬಗಳ ಬೆಳೆ ನಷ್ಟವಾಗಿದೆ ಎಂದು ಮಾಹಿತಿ ನೀಡಿದರು. ಈ ಎಲ್ಲ ಸೌಲಭ್ಯಗಳು ಪಡೆದಿರುವ ಸಾಲಗಳ ಚಾಲ್ತಿ ಸ್ಥಿತಿ, ಅನುತ್ಪಾದಕ ಸ್ಥಿತಿ ಹಾಗೂ ಕಾಲ ಕಾಲಕ್ಕೆ ಜಾರಿಯಲ್ಲಿರುವ ಬ್ಯಾಂಕಿನ ಇತರೆ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತವೆ.

ಹೆಚ್ಚಿನ ಮಾಹಿತಿಗೆ ಸಾರ್ವಜನಿಕರು, ರೈತರು ವ್ಯವಹರಿಸುತ್ತಿರುವ ಬ್ಯಾಂಕ್ ಶಾಖೆ ಸಂಪರ್ಕಿಸುವಂತೆ ಹೇಳಿದರು. ಮೈಸೂರು ಅಪರ ಜಿಲ್ಲಾಧಿಕಾರಿ ಬಿ.ಟಿ. ಪೂರ್ಣಿಮಾ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಮಹಾಂತೇಶಪ್ಪ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕೆ.ರುದ್ರೇಶ್ ಭಾಗವಹಿಸಿದ್ದರು. ಈ ಸಂಬಂಧ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.