ಏ.28, ನಟ ರಮೇಶ್ ಅರವಿಂದ್‍ರಿಂದ ವೃತ್ತಿ ಶಿಕ್ಷಣದ ಬಗ್ಗೆ ಆನ್‍ಲೈನ್ ಸಂವಾದ

ಮೈಸೂರು: ಮೈಸೂರಿನ ಲರ್ನರ್ಸ್ ಪಿಯು ಕಾಲೇಜಿನ ವತಿಯಿಂದ ಏ.28ರಂದು ಬೆಳಿಗ್ಗೆ 9.30ಕ್ಕೆ ಏರ್ಪಡಿಸಿರುವ ‘ವೃತ್ತಿ ಮಾರ್ಗದರ್ಶನ’ ಕಾರ್ಯಕ್ರಮದಲ್ಲಿ ಚಿತ್ರನಟ ರಮೇಶ್ ಅರವಿಂದ್ ಅವರು ವಿದ್ಯಾರ್ಥಿಗಳೊಂದಿಗೆ ಆನ್‍ಲೈನ್ ಸಂವಾದ ನಡೆಸಲಿದ್ದಾರೆ. ಮೈಸೂರು ಮುಕ್ತ ವಿವಿ ಆವ ರಣದಲ್ಲಿರುವ ಘಟಿಕೋತ್ಸವ ಭವನದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಹತ್ತನೇ ತರಗತಿ ನಂತರ ಏನು?, ವೃತ್ತಿ ಆಯ್ಕೆ ಬಗೆ ಹೇಗೆ?, ಐಐಟಿ, ಇಂಜಿನಿಯರಿಂಗ್, ವೈದ್ಯಕೀಯ ವೃತ್ತಿಗಳಲ್ಲದೆ ಲಭ್ಯವಿರುವ ಉತ್ತಮ ವೃತ್ತಿಗಳ ಬಗ್ಗೆ ಮಾರ್ಗದರ್ಶನ ನೀಡಲಾಗುವುದು. ಪ್ರಶ್ನೆಗಳನ್ನು ಕೇಳಲಿಚ್ಛಿಸುವ ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರಶ್ನೆ ಯನ್ನು learnerspuc @gmailಗೆ ಮುಂಚಿತವಾಗಿ ಕಳುಹಿಸಿಕೊಡಬೇಕು. ಅಲ್ಲದೆ, ಸಿಎಫ್‍ಟಿಆರ್‍ಐ ಪ್ರಮುಖ ಸಂಶೋಧಕರಾದ ಡಾ.ಪಿ.ವಿ.ರವೀಂದ್ರ, ಲರ್ನರ್ಸ್ ಪಿಯು ಕಾಲೇಜು ಸಂಸ್ಥಾಪಕ ಕೆ.ಮುರಳಿ ಮೋಹನ್, ವೈದ್ಯಕೀಯ ವಿದ್ಯಾರ್ಥಿಗಳಾದ ನಿತಿನ್, ನೇಮಿಚಂದ್ರ, ಐಐಟಿ ಪದವೀಧರರಾದ ಪಂಕಜ್ ಗುಪ್ತಾ, ರಿಷಿಕಾಂತ್ ಶುಕ್ಲಾ, ಮೈಸೂರು ಟೋಸ್ಟ್ ಮಾಸ್ಟರ್ಸ್ ಕ್ಲಬ್ ಅಧ್ಯಕ್ಷ ಪರೀಕ್ಷಿತ್, ಸ್ನೇಕ್ ಶಾಂ, ಆರ್‍ಐಐಟಿ ಸಂಸ್ಥಾಪಕ ಎಸ್.ವಿ. ವೆಂಕಟೇಶ್, ಬಾಸ್ಕರನ್ ಶ್ರೀನಿವಾಸನ್ ಅವರುಗಳು ವಿವಿಧ ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡುವರು. ಮೈಸೂರು ವಿವಿ ಕುಲಪತಿ ಡಾ.ಹೇಮಂತ್ ಕುಮಾರ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ದಯಾನಂದ್ ಉಪಸ್ಥಿತರಿರು ವರು. ಈ ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದ್ದು, ಆಸಕ್ತರು ತಮ್ಮ ಮಗುವಿನ ಶಾಲೆಯ ಹೆಸರನ್ನು ಎಸ್‍ಎಂಎಸ್ ಅಥವಾ ವಾಟ್ಸಾಪ್ ಮೂಲಕ 9916933202ಗೆ ಕಳುಹಿಸಿ ನೋಂದಾಯಿಸಿಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.