ಇನ್ನು ವಿವಾದಾತ್ಮಕ ಹೇಳಿಕೆ ನೀಡದಿರಲು ಮೌಖಿಕ ಆದೇಶ

ಮೈಸೂರು:`ರಾಮಮಂದಿರ ಏಕೆ ಬೇಡ?’ ಎಂಬ ಪುಸ್ತಕದಲ್ಲಿ ಶ್ರೀರಾಮನ ಬಗ್ಗೆ ಅವಹೇಳನಕಾರಿಯಾಗಿ ಬರೆದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆ ಸಾಹಿತಿ ಕೆ.ಎಸ್.ಭಗವಾನ್ ವಿರುದ್ಧ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಬುಧವಾರ ಭಗವಾನ್ ಅವರ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ಯಾವುದೇ ರೀತಿಯ ವಿವಾದಾತ್ಮಕ ಹೇಳಿಕೆ ನೀಡುವುದಾಗಲಿ, ಮಾಧ್ಯಮಗಳಿಗೆ ಸಂದರ್ಶನ ನೀಡುವುದಾಗಲಿ ಮಾಡದಂತೆ ಮೈಸೂರು ನಗರ ಪೊಲೀಸ್ ಆಯುಕ್ತರು ಭಗವಾನ್‍ರಿಗೆ ಮೌಖಿಕವಾಗಿ ಆದೇಶ ನೀಡಿದ್ದಾರೆ. ಮಾಧ್ಯಮಗಳೂ ಭಗವಾನ್ ಸಂದರ್ಶನಕ್ಕೆ ಹೋದಾಗ ಅಲ್ಲಿದ್ದ ಪೊಲೀಸರೂ ಯಾವುದೇ ರೀತಿಯ ಸಂದರ್ಶನ ನೀಡದಂತೆ ನಿರ್ಬಂಧ ವಿಧಿಸಲಾಗಿದೆ ಎಂಬ ಹೇಳಿಕೆ ನೀಡಿದ್ದಾರೆಂದು ಹೇಳಲಾಗಿದೆ.

ಈಗಾಗಲೇ ಕುವೆಂಪುನಗರ ಪೊಲೀಸರು ಭಗವಾನ್ ವಿರುದ್ಧ ಐಪಿಸಿ ಸೆಕ್ಷನ್ 295ಎ ಅಡಿಯಲ್ಲಿ ಎಫ್‍ಐಅರ್ ದಾಖಲಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕುವೆಂಪುನಗರದಲ್ಲಿರುವ ಭಗವಾನ್ ಮನೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಅಲ್ಲದೆ ಅವರ ಮನೆಯಲ್ಲಿದ್ದ ಹಳೆಯ ಸಿಸಿಟಿವಿ ಕ್ಯಾಮರಾಗಳನ್ನು ತೆಗೆದು ನಾಲ್ಕು ಹೊಸ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದಾರೆ. ಮತ್ತೊಂದು ಸಿಸಿ ಕ್ಯಾಮರಾ ಮನೆಯ ಒಳಗೆ ಹಾಕಲಾಗಿದ್ದು, ಇನ್ನೆರಡು ಕ್ಯಾಮರಾಗಳನ್ನು ಮನೆಯ ಮೇಲ್ಭಾಗ ಅಳವಡಿಸಲಾಗಿದೆ. ಈ ಎಲ್ಲಾ ಸಿಸಿ ಟಿವಿಗಳ ಕಂಟ್ರೋಲ್ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಸಂಪರ್ಕವಿದೆ. ಈ ಮೂಲಕ ಭಗವಾನ್ ಮನೆಯ ಮುಂಭಾಗದ ಪ್ರಮುಖ ರಸ್ತೆಯ ಸುತ್ತಮುತ್ತಲಿನ ಪ್ರದೇಶವನ್ನು ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿಡಲಾಗಿದೆ.