ನಮ್ಮ ಹೋರಾಟ ಯಾವ ಸಮುದಾಯದ ವಿರುದ್ಧವೂ ಅಲ್ಲ

ಮೈಸೂರು, ಅ.5(ಪಿಎಂ)- ಮಹಿಷ ದಸರಾಕ್ಕೆ ತಡೆಯೊಡ್ಡಿದ ಸಂಸದ ಪ್ರತಾಪ್ ಸಿಂಹ ಅವರ ಏಕಮುಖ ಧೋರಣೆ ವಿರುದ್ಧ ನಮ್ಮ ಹೋರಾ ಟವೇ ಹೊರತು, ಒಕ್ಕಲಿಗ ಸೇರಿದಂತೆ ಯಾವುದೇ ಸಮುದಾಯದ ವಿರುದ್ಧ ವಲ್ಲ ಎಂದು ಮಾಜಿ ಮೇಯರ್ ಹಾಗೂ ಮಹಿಷ ದಸರಾ ಆಚರಣಾ ಸಮಿತಿ ಅಧ್ಯಕ್ಷ ಪುರುಷೋತ್ತಮ್ ಸ್ಪಷ್ಟಪಡಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿ ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವೆಂದೂ ಜಾತಿ ಸಂಘರ್ಷಕ್ಕೆ ಕೈ ಹಾಕುವುದಿಲ್ಲ. ಮೈಸೂರು ಹೋಟೆಲ್ ಮಾಲೀಕರ ಸಂಘ ಹಾಗೂ ಒಕ್ಕಲಿಗರ ಸಂಘ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ನಮ್ಮ ವಿರುದ್ಧ ಕೆಲ ಆರೋಪಗಳನ್ನು ಮಾಡಿದ್ದು, ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ. ಈ ವಿಚಾರದಲ್ಲಿ ಅವರು ಪರಾಮರ್ಶೆ ಮಾಡಿಕೊಳ್ಳು ವುದು ಒಳಿತು. ಒಕ್ಕಲಿಗರ ಸಂಘ ಏಕೆ ಈ ನಿರ್ಧಾರಕ್ಕೆ ಬಂದಿದೆ ಎಂಬುದು ಅರ್ಥವಾಗುತ್ತಿಲ್ಲ ಎಂದರು.

ನಾವು ಎಲ್ಲರ ಧಾರ್ಮಿಕ ಆಚರಣೆ ಗೌರವಿಸು ತ್ತೇವೆ. ನಮ್ಮ ಹೋರಾಟ ಮೈಸೂರು ದಸರಾ ಅಥವಾ ಚಾಮುಂಡಿ ವಿರುದ್ಧವೂ ಅಲ್ಲ. ಇದಕ್ಕೆ ಜಾತಿ ಸ್ವರೂಪ ನೀಡಿದರೆ ಇಡೀ ಸಮಾಜದ ಮೇಲೆ ದುಷ್ಪರಿಣಾಮ ಉಂಟಾಗಲಿದೆ ಎಂದು ತಿಳಿಸಿದರು.

ಸಂಸದ ಪ್ರತಾಪ್ ಸಿಂಹ ಅವರ ಕುಟುಂಬವನ್ನು ದಲಿತ ಮುಖಂಡರೊಬ್ಬರು ನಿಂದಿಸಿದ್ದರೆ ಅದಕ್ಕೆ ಕ್ಷಮೆ ಯಾಚಿಸುತ್ತೇನೆ. ಅವರ ಕುಟುಂಬದ ಬಗ್ಗೆ ಕೇವಲವಾಗಿ ಮಾತನಾಡುವುದಿಲ್ಲ. ನಾವೆಂದೂ ಹೆಣ್ಣು ಮಕ್ಕಳನ್ನು ತುಚ್ಛವಾಗಿ ಕಾಣುವುದಿಲ್ಲ. ಇಂತಹ ಅಶಾಂತಿಗೆ ಮೂಲ ಕಾರಣ ಸಂಸದರೇ. ಅವರು ಪೊಲೀಸರು ಹಾಗೂ ಮಹಿಷ ದಸರಾ ಆಚರಣೆ ಸಮಿತಿಯವರ ಕುರಿತು ಕೇವಲವಾಗಿ ಮಾತನಾಡಿದ ಮನಸ್ಥಿತಿ ಇದಕ್ಕೆಲ್ಲಾ ಕಾರಣ ಎಂದು ಹೇಳಿದರು.

ಸರ್ಕಾರವೇ ಗೊಂದಲ ನಿವಾರಿಸಲಿ: ಮಹಿಷ ದಸರಾ ತಡೆಯೊಡ್ಡಿದ ಹಿನ್ನೆಲೆಯಲ್ಲಿ ಉಂಟಾಗಿ ರುವ ಗೊಂದಲಕ್ಕೆ ತೆರೆ ಎಳೆಯಲು ಸರ್ಕಾರವೇ ದಸರಾ ಉದ್ಘಾಟನೆಯಂದು ಮಹಿಷ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲು ನಿರ್ಧಾರ ಮಾಡಿದರೆ ಒಳಿತು ಎಂದು ಪುರುಷೋತ್ತಮ್ ಅಭಿಪ್ರಾಯಪಟ್ಟರು. ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹಿರಿಯರಿದ್ದಾರೆ. ಈ ಸಂದರ್ಭದಲ್ಲಿ ಅವರು ಒಂದು ಸಂದೇಶ ಕೊಟ್ಟರೆ ಒಳ್ಳೆಯದು. ನಾವು ತಪ್ಪು ಮಾಡಿದ್ದರೆ ನಮಗೆ ಹೇಳಲಿ. ಅವರು ತಪ್ಪು ಮಾಡಿದ್ದರೆ ಅವರಿಗೆ ಹೇಳಲಿ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಮೊನ್ನೆ ಮೈಸೂರಿಗೆ ಭೇಟಿ ನೀಡಿದ್ದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮಹಿಷ ದಸರಾವೂ ನಡೆಯಲಿ ಎಂದು ಹೇಳಿದ್ದಾರೆ. ಜೊತೆಗೆ ಮಾಜಿ ಸಚಿವರೂ ಆದ ಶಾಸಕ ಎಸ್.ಎ. ರಾಮದಾಸ್, ಶಾಸಕ ಎಲ್.ನಾಗೇಂದ್ರ ಸೇರಿದಂತೆ ಮೈಸೂರಿನಲ್ಲಿರುವ ಯಾವ ಬಿಜೆಪಿ ನಾಯಕರೂ ಮಹಿಷ ದಸರಾ ವಿರೋಧಿಸುತ್ತಿಲ್ಲ. ಹೀಗಿರುವಾಗ ಪ್ರತಾಪ್ ಸಿಂಹ ಅವರು ಏಕೆ ವಿರೋಧಿಸುತ್ತಿದ್ದಾರೆ ಎಂದು ಅವರು ಪ್ರಶ್ನಿಸಿದರು. ಮುಖಂಡರಾದ ಹರಿಹರ ಆನಂದಸ್ವಾಮಿ, ಹಿನಕಲ್ ಸೋಮು, ಜಿ.ಎಂ.ಮಹದೇವು ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.