ವಿವಿಧ ಇಲಾಖಾ ಅಧಿಕಾರಿಗಳ ನಡುವೆಸಮನ್ವಯತೆ ಕೊರತೆ ಬಗ್ಗೆ ಆಕ್ರೋಶ

ಮೈಸೂರು: ಪ್ರಕೃತಿ ವಿಕೋಪ ಮತ್ತು ಬರ ನಿರ್ವಹಣೆ ಕುರಿತಂತೆ ಮೈಸೂರಿನಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಮೈಸೂರು ಜಿಲ್ಲಾ ಪಂಚಾಯ್ತಿ ಕಚೇರಿ ಸಭಾಂ ಗಣದಲ್ಲಿ ನಡೆದ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಚರ್ಚಿಸುವ ವೇಳೆ ಗ್ರಾಮಾಂತರ ನೀರು ಸರಬ ರಾಜು ವಿಭಾಗದ ಎಗ್ಸಿ ಕ್ಯೂಟಿವ್ ಇಂಜಿನಿಯರ್ ಸಭೆಗೆ ಗೈರು ಹಾಜರಾಗಿ ದ್ದರಿಂದ ಕೋಪಗೊಂಡ ಸಚಿವರು, ಅವರ ಪರ ಬಂದಿದ್ದ ಅಸಿಸ್ಟಂಟ್ ಎಗ್ಸಿ ಕ್ಯೂಟಿವ್ ಇಂಜಿನಿಯರ್ ರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

`ನಾನೇನು ಮಜಾ ಮಾಡಲು ಅಥವಾ ಮೈಸೂರು ನೋಡಲು ಬಂದಿದ್ದೀನಾ, ಸಭೆಗೆ ಬರಲು ಆಗದಿದ್ದರೆ ಕಾರಣ ನೀಡಿ ಪೂರ್ವಾನುಮತಿ ಪಡೆದುಕೊಳ್ಳಬೇಕು. ತುಂಬಾ ಗಂಭೀರ ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದೇನೆ. ಅಧಿಕಾರಿಗಳು ಇಲ್ಲ ಎಂದರೆ ಹೇಗೆ? ಎಂದು ದೇಶಪಾಂಡೆ ಕೆಂಡಾ ಮಂಡಲ ವಾದರು. ಎಗ್ಸಿಕ್ಯೂಟಿವ್ ಇಂಜಿನಿಯರ್‍ಗೆ ನೋಟಿಸ್ ನೀಡಿ, ವರದಿ ಪಡೆದು ಕೈಗೊಂಡ ಶಿಸ್ತು ಕ್ರಮದ ಬಗ್ಗೆ ನಮಗೆ ಮಾಹಿತಿ ನೀಡಿ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವರಿಗೆ ಸೂಚನೆ ನೀಡಿದ ಸಚಿವರು, ಚಾಮುಂಡಿಬೆಟ್ಟ, ಹಿನಕಲ್, ಹೂಟಗಳ್ಳಿ, ವಿಜಯನಗರ 3 ಮತ್ತು 4ನೇ ಹಂತದ ಬಡಾ ವಣೆಗಳಿಗೆ ಸಮರ್ಪಕ ಕುಡಿಯುವ ನೀರು ಪೂರೈಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಕಳೆದ ಮೂರ್ನಾಲ್ಕು ತಿಂಗಳಿಂದ ಮೈಸೂರು ನಗರ ಹಾಗೂ ಜಿಲ್ಲೆಯ ವಿವಿಧೆಡೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಪರಿಹರಿಸುವಂತೆ ತಾವು ಹೇಳುತ್ತಿದ್ದರೂ ಏನೂ ಪ್ರಯೋಜನವಾಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಸಭೆಯಲ್ಲಿ ಪ್ರಸ್ತಾಪಿಸಿದ್ದರಿಂದ ಅದನ್ನು ಗಂಭೀರವಾಗಿ ಪರಿಗಣಿಸಿದ ಕಂದಾಯ ಸಚಿವರು, ಜನರಿಗೆ ಕುಡಿಯುವ ನೀರು ಹಾಗೂ ದನಕರುಗಳಿಗೆ ನೀರು ಮತ್ತು ಮೇವಿಗೆ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು. ಚಾಮುಂಡಿಬೆಟ್ಟಕ್ಕೆ ನೀರು ಪೂರೈಕೆಗೆ ಪೈಪ್‍ಲೈನ್ ಅಳವಡಿಕೆ ಹಾಗೂ ಓವರ್ ಹೆಡ್ ಟ್ಯಾಂಕ್ ನಿರ್ಮಿಸಲು ಅನುಮತಿ ಕೋರಿ 6 ತಿಂಗಳಾದರೂ ಅರಣ್ಯ ಇಲಾಖೆ ಅಧಿಕಾರಿಗಳು ಕ್ಲಿಯರೆನ್ಸ್ ನೀಡಿಲ್ಲ. ಪರಿ ಶೀಲನೆಗಾಗಿ ನಾವು ಸ್ಥಳಕ್ಕೆ ಹೋದರೆ ನಮ್ಮ ವಾಹನಗಳನ್ನೇ ಸೀಜ್ ಮಾಡುತ್ತಾರೆ ಎಂದು ನೀರು ಸರಬರಾಜು ಮಂಡಳಿ ಅಧಿಕಾರಿಗಳು ಅಳಲು ತೋಡಿಕೊಂಡರು.

ಅದರಿಂದ ಅಸಮಾಧಾನಗೊಂಡ ಸಚಿವ ದೇಶಪಾಂಡೆ ಅವರು, `ಅಲ್ಲಪ್ಪಾ ಜನರಿಗೆ ನೀರು ಕೊಡಲು ಅರಣ್ಯ ಪ್ರದೇಶದಲ್ಲಿ ಕೊಳವೆ ಅಳ ವಡಿಸಿದ್ರೆ ನಿಂಗೇನು, ಸಣ್ಣಪುಟ್ಟ ಗಿಡ ಮರಗಳು ಹೋಗಬಹುದು ಇಡೀ ಕಾಡೇ ನಾಶವಾಗುತ್ತಾ?, ನೀವು, ನಿಮ್ಮ ಸಿಬ್ಬಂದಿ ವಾಹನಗಳು ಅರಣ್ಯದಲ್ಲಿ ಓಡಾಡಿದರೆ ಕಾಡು ನಾಶವಾಗೋದಿಲ್ವಾ’ ಎಂದು ಉಪ ಅರಣ್ಯ ಸಂರಕ್ಷಣಾ ಧಿಕಾರಿಯೊಬ್ಬರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

`ಚಾಮುಂಡಿಬೆಟ್ಟದಲ್ಲಿ ನಿನ್ನ ಮನೆ ಇದ್ದಿದ್ರೆ ಏನು ಮಾಡ್ತಿದ್ದಿ? ಇದು ಕುಡಿಯುವ ನೀರು ಪೂರೈಕೆಗಾಗಿ ಗೊತ್ತಾಯ್ತಾ, ಕಾನೂನು -ಕಾಯ್ದೆಗಳನ್ನು ಸ್ವಲ್ಪ ತಿಳ್ಕೋಬೇಕು. ಕೆಲವೊಂದು ಒಳ್ಳೇ ಉದ್ದೇಶಗಳಿಗೆ ಕಾನೂನು ತೊಡಕಾದರೂ, ಮಾನವೀಯತೆಯಿಂದ ಬುದ್ಧಿ ಉಪಯೋಗಿಸಿ ಪೂರಕವಾಗಿ ಕೆಲಸ ಮಾಡಿ ಜನರಿಗೆ ಅನುಕೂಲ ಮಾಡ್ಬೇಕು. ನೀವೆಲ್ಲಾ ಯುವ ಅಧಿಕಾರಿಗಳಿದ್ದೀರಿ. ನಮಗೆ-ನಿಮಗೆ ಈ ಹುದ್ದೆ ಶಾಶ್ವತವಲ್ಲ. ಅವಕಾಶ ಸಿಕ್ಕಾಗ ಮಾಡಿದ ಒಳ್ಳೇ ಕೆಲಸಗಳಷ್ಟೇ ಉಳಿಯುತ್ತವೆ. ಯಾವಾಗ್ಲೂ ಜನ ಮೆಚ್ಚುವ ಕೆಲಸ ಮಾಡಿ, ಎಂದು ಸಚಿವರು ಅಧಿಕಾರಿಗಳಿಗೆ ಇದೇ ಸಂದರ್ಭ ನೀತಿ ಪಾಠ ಹೇಳಿದರು.

ಬರ ಪರಿಸ್ಥಿತಿಯಲ್ಲಿ ಟ್ಯಾಂಕರ್ ಮೂಲಕ ನೀರು ಸರಬ ರಾಜು ಮಾಡಿದ ಏಜೆನ್ಸಿಗಳಿಗೆ ಹಣ ಪಾವತಿಸಿಲ್ಲ ಎಂದು ಸಚಿವ ಜಿ.ಟಿ.ದೇವೇಗೌಡರು ಹೇಳಿದಾಗ ಮೈಸೂರು ತಹಸೀಲ್ದಾರ್ ಮತ್ತು ನೀರು ಸರಬರಾಜು ಮಂಡಳಿ ಅಧಿಕಾರಿಗಳು ವಿಭಿನ್ನ ಉತ್ತರ ನೀಡಿದ್ದರಿಂದ ಕೆಂಡಾಮಂಡಲವಾದ ಕಂದಾಯ ಸಚಿವರು, ಸುಳ್ಳು ಹೇಳಿದರೆ ಸಸ್ಪೆಂಡ್ ಮಾಡುತ್ತೇನೆಂದು ಎಚ್ಚರಿಸಿದರು.

ಸರ್ಕಾರ ಜಿಲ್ಲಾಧಿಕಾರಿಗಳ ಮೂಲಕ ಕುಡಿಯುವ ನೀರು ಪೂರೈಕೆಗಾಗಿ ಎಷ್ಟು ಹಣ ಬೇಕಾದರೂ ಕೊಡುತ್ತದೆ. ಅದನ್ನು ಬಳಸಿಕೊಂಡು ನೀರು ಪೂರೈಕೆಗೆ ತೊಂದರೆಯಾಗದಂತೆ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಮೈಸೂರು ಮಹಾ ನಗರ ಪಾಲಿಕೆ ಆಯುಕ್ತರು ಹಾಗೂ ಜಿಲ್ಲಾ ಪಂಚಾಯ್ತಿ ಸಿಇಓ ಅವರಿಗೆ ದೇಶಪಾಂಡೆ ತಾಕೀತು ಮಾಡಿದರು.

ನೀವು ಮಾಡುವ ಕೆಲಸದಲ್ಲಿ ನನಗೆ ನಂಬಿಕೆ ಇದೆ. ಒಳ್ಳೆಯ ಅಧಿಕಾರಿಗಳನ್ನು ನಾವು ಪ್ರೋತ್ಸಾಹಿಸುತ್ತೇವೆ. ಕೆಲಸ ಮಾಡದೆ ಅವರಿವರ ಆಶೀರ್ವಾದದಿಂದ ಕಾಲ ಕಳೆಯುತ್ತೇವೆಂಬುವ ವರನ್ನು ತಕ್ಷಣವೇ ಬೇರೆ ಸ್ಥಳ ನೋಡಿಕೊಳ್ಳಿ ಎಂದು ಚುರುಕು ಮುಟ್ಟಿಸಿದ ಕಂದಾಯ ಸಚಿವರು, ಬಾಡಿಗೆಗೆ ಟ್ಯಾಂಕರ್ ತೆಗೆದು ಕೊಳ್ಳುವ ಅಧಿಕಾರವನ್ನು ಆಯಾ ತಹಸೀಲ್ದಾರ್‍ರಿಗೆ ನೀಡ ಲಾಗಿದೆ. ನಿಮ್ಮ ಬಳಿ ಕುಡಿಯುವ ನೀರಿಗಾಗಿ ಯಾವಾಗಲೂ 40 ಲಕ್ಷ ರೂ. ಅನುದಾನ ಇಟ್ಟುಕೊಳ್ಳಿ ಎಂದು ತಿಳಿಸಿದರು.

ರಾಜ್ಯ ಹಾಗೂ ಕೇಂದ್ರ ಸರ್ಕಾರದ ಬರ ಪರಿಹಾರ ನಿಧಿ ಹಾಗೂ ಪ್ರಕೃತಿ ವಿಕೋಪ ನಿರ್ವಹಣಾ ಅನುದಾನ ಬರುತ್ತಿದೆ. ಇನ್ನು ಮುಂದೆ ಕುಡಿಯುವ ನೀರು ಪೂರೈಕೆ ಹಾಗೂ ಜಾನು ವಾರುಗಳ ಮೇವಿಗೆ ಶಾಶ್ವತ ಯೋಜನೆ ತಯಾರಿಸಿ ಎಂದೂ ಸಚಿವರು ಇದೇ ವೇಳೆ ಅಧಿಕಾರಿಗಳಿಗೆ ಸಲಹೆ ನೀಡಿದರು.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್, ಮೇಯರ್ ಪುಷ್ಪಲತಾ ಜಗನ್ನಾಥ್, ಶಾಸಕ ಬಿ. ಹರ್ಷವರ್ಧನ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಪರಿಮಳ ಶ್ಯಾಂ, ಮುಡಾ ಅಧ್ಯಕ್ಷ ಹೆಚ್.ಎನ್.ವಿಜಯ್, ವಿಧಾನ ಪರಿಷತ್ ಸದಸ್ಯ ಆರ್. ಧರ್ಮ ಸೇನಾ ಸೇರಿದಂತೆ ಜಿಲ್ಲೆಯ ಎಲ್ಲಾ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.