`ಪರ್ಮಾಕಲ್ಚರ್’ ಪ್ರಕೃತಿಗೆ ಪೂರಕ, ಮನುಕುಲಕ್ಕೆ ಪ್ರಯೋಜನಕಾರಿ

ಮೈಸೂರು, ನ.10(ಪಿಎಂ)- ಪ್ರಕೃತಿಗೆ ಪೂರಕವಾಗಿ ಬೇಸಾಯ ಮಾಡುವುದೇ ಪರ್ಮಾಕಲ್ಚರ್ (ಶಾಶ್ವತ ಕೃಷಿ). ಇದು ಕೃಷಿ ಭೂಮಿಯ ವಾತಾವರಣಕ್ಕೆ ಅನ್ವಯ ವಾಗುವಂತೆ ವೈವಿಧ್ಯ ಬೆಳೆಗಳ ವಿನ್ಯಾಸ ವಾಗಿದೆ ಎಂದು ಥೈಲ್ಯಾಂಡ್‍ನ ಸಾವಯವ ಕೃಷಿಕ ಮೈಕೆಲ್ ಕಾಮನ್ಸ್ ತಿಳಿಸಿದರು.

ಸಹಜ ಸಮೃದ್ಧ, ಬೆಳವಲ ಫೌಂಡೇ ಷನ್, ಹೊನ್ನೇರು ಬಳಗದ ಸಂಯುಕ್ತಾ ಶ್ರಯದಲ್ಲಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮದ ಬೆಳವಲ ಪರಿಸರ ಕೇಂದ್ರದಲ್ಲಿ ಭಾನುವಾರ ಹಮ್ಮಿ ಕೊಂಡಿದ್ದ `ಶಾಶ್ವತ ಕೃಷಿ’ ಕುರಿತ ಕಾರ್ಯಾ ಗಾರದಲ್ಲಿ ಅವರು ಮಾತನಾಡಿದರು.

ಗದ್ದೆಯಲ್ಲಿ ಕೇವಲ ಭತ್ತ ಬೆಳೆಯಲಷ್ಟೇ ಸೀಮಿತವಾಗದೇ ವಿವಿಧ ಬೆಳೆಗಳೊಂದಿಗೆ ಅಲ್ಲಿನ ವಾತಾವರಣಕ್ಕೆ ಅನ್ವಯವಾಗು ವಂತೆ ವೈವಿಧ್ಯತೆ ಕಾಯ್ದುಕೊಂಡರೆ ಅದೇ ಶಾಶ್ವತ ಕೃಷಿಯ ವಿನ್ಯಾಸವಾಗಲಿದ್ದು, ಇದ ರಿಂದ ವೆಚ್ಚ ಕಡಿಮೆಯಾಗುವುದಲ್ಲದೆ, ಅಧಿಕ ಇಳುವರಿ ಲಭಿಸಲಿದೆ. ಅಲ್ಲದೆ, ಮೀನುಗಾರಿಕೆ ಹಾಗೂ ಬಾತುಕೋಳಿ ಸಾಕಾಣಿಕೆಯಂ ತಹ ಚಟುವಟಿಕೆಗಳನ್ನು ನಡೆಸುವುದು ಮತ್ತಷ್ಟು ಪ್ರಯೋಜನಕಾರಿ ಎಂದು ತಿಳಿಸಿದರು.

`ಜೀವ ವೈವಿಧ್ಯತೆ ಮುಖ್ಯ ಎಂಬು ದನ್ನು ಆಧರಿಸಿ ಪರ್ಮಾಕಲ್ಚರ್ ವಿನ್ಯಾಸ ಪ್ರತಿಪಾದಿಸಲಾಗಿದೆ. ಥೈಲ್ಯಾಂಡಿನಲ್ಲಿ ನಾವು ಇದೇ ವಿಧಾನ ಅನುಸರಿಸಿ ಬೇಸಾಯ ಮಾಡುತ್ತಿದ್ದೇವೆ. ಇದನ್ನು ನಮ್ಮಲ್ಲಿ `ವನ ಕಾಸೆಟ್’ ವಿಧಾನ ಎಂದು ಕರೆಯುತ್ತೇವೆ. `ಪರ್ಮಾಕಲ್ಚರ್’ ಪದ್ಧತಿಯ ಉಗಮ ವನ್ನು ಪ್ರಪಂಚದ ಎಲ್ಲಾ ಬುಡಕಟ್ಟು ಸಮು ದಾಯದಲ್ಲೂ ಈ ಹಿಂದೆ ಕಾಣಬಹು ದಿತ್ತು. ಇದೊಂದು ಸುಸ್ಥಿರ ಕೃಷಿ ಪದ್ಧತಿಯ ವಿಧಾನವಾಗಿದ್ದು, ಆಸ್ಟ್ರೇಲಿಯಾದಲ್ಲಿ ಇದ ಕ್ಕೊಂದು ಹೊಸ ರೂಪ ನೀಡಲಾಯಿತು’ ಎಂದು ಮೈಕೆಲ್ ವಿವರಿಸಿದರು.

ಪ್ರಕೃತಿಯಲ್ಲಿರುವ ನಿಗೂಢ ಸತ್ಯವನ್ನು ನಾವು ಅರಿಯಬೇಕು. ಅದಕ್ಕಾಗಿ ಪ್ರಕೃತಿಗೆ ನಮ್ಮ ಸಮಯ ಮೀಸಲಿಡಬೇಕಾಗುತ್ತದೆ. ಸಮೃದ್ಧವಾಗಿರುವ ಅರಣ್ಯ ಪ್ರದೇಶವೊಂ ದನ್ನು ಉದಾಹರಣೆಗೆ ನೋಡುವುದಾ ದರೆ, ಅಲ್ಲಿ ಯಾರೂ ಯಾವುದೇ ಗೊಬ್ಬರ ಹಾಕಿರುವುದಿಲ್ಲ. ಎಲ್ಲವೂ ಸಹಜವಾ ಗಿಯೇ ಸಮೃದ್ಧವಾಗಿ ಬೆಳೆದಿರುತ್ತದೆ. ಯಾವುದೇ ಸಸ್ಯವಾಗಲೀ ಇಲ್ಲವೇ ಪ್ರಾಣಿ ಯಾಗಲೀ, ಅದು ಒಂಟಿಯಾಗಿ ಅಭಿ ವೃದ್ಧಿ ಕಾಣಲಾರದು. ಇದನ್ನು ನಾವು ಮೊದಲು ಮನಗಾಣಬೇಕು. ಯಾವ ಬೆಳೆ ಬೆಳೆಯಲು ಉದ್ದೇಶಿಸಿದ್ದೆವೋ ಅದಕ್ಕೆ ಪೂರಕ ವಾದ ಸಸ್ಯಗಳನ್ನು ಜೊತೆಯಲ್ಲಿ ಬೆಳೆಯಲು ಬಿಡಬೇಕು. ಅಂದರೆ ಬೆಳೆಯ ಆರೋಗ್ಯ ಕರ ಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸಬೇಕು ಎಂದು ತಿಳಿಸಿದರು.

`ಪ್ರಸ್ತುತ ಪ್ರಕೃತಿ ವಿರುದ್ಧದ ಕೃಷಿ ಪದ್ಧತಿ ಮೂಲಕ ಕೈ ಸುಟ್ಟುಕೊಳ್ಳುತ್ತಿರುವುದೇ ಹೆಚ್ಚು. ಇದು ಇಂದಿನ ಸಮಸ್ಯೆ ಮಾತ್ರವಲ್ಲ. ಪರ್ಮಾಕಲ್ಚರ್ ಕೃಷಿ ವಿಧಾನದ ಬಗ್ಗೆ ನನಗೆ ಮಾರ್ಗದರ್ಶನ ನೀಡಿದ ಗುರುಗಳು ಮೊದಲು ಆಧುನಿಕ ಕೃಷಿ ಪದ್ಧತಿಯನ್ನೇ ಮಾಡುತ್ತಿದ್ದರು. ಕೊನೆಗೆ ಅದರಿಂದ ನಷ್ಟಕ್ಕೆ ತುತ್ತಾಗಿ ನಮ್ಮ ಪೂರ್ವಿಕರು ಮಾಡುತ್ತಿದ್ದ ಕೃಷಿ ವಿಧಾನವೇ ಸರಿ ಎಂದು ತೀರ್ಮಾ ನಿಸಿ ಅಂತಿಮವಾಗಿ ಪರ್ಮಾಕಲ್ಚರ್ ವಿಧಾ ನದ ಮೂಲಕ ಕೃಷಿಯಲ್ಲಿ ಯಶಸ್ವಿಯಾ ದರು. ಥೈಲ್ಯಾಂಡಿನಲ್ಲಿ ನನ್ನ ಗುರುಗಳು ಕೃಷಿಕರಾಗಿದ್ದ ಕಾಲಕ್ಕೆ ಬ್ರಿಟಿಷ್ ಆಳ್ವಿಕೆ ಇತ್ತು. ಅವರು ಕಾಡು ಕಡಿದು ಕೃಷಿ ಮಾಡಲು ಅನುವು ಮಾಡಿದರು. ಇಂತಹ ಕೃಷಿ ಭೂಮಿಯ 25 ಹೇಕ್ಟೇರ್ ಪ್ರದೇಶದಲ್ಲಿ ನನ್ನ ಗುರುಗಳು ಕೃಷಿ ಮಾಡಲು ಮುಂದಾ ದರು’ ಎಂದು ಕಾಮನ್ಸ್ ತಿಳಿಸಿದರು.

ಅರಣ್ಯವಾಗಿದ್ದ ಹಿನ್ನೆಲೆಯಲ್ಲಿ ಇಂತಹ ಕೃಷಿಭೂಮಿ ಆರಂಭದಲ್ಲಿ ಹೆಚ್ಚು ಫಲ ವತ್ತತೆಯಿಂದ ಕೂಡಿತ್ತು. ಆದರೆ ಕಾಲ ಕ್ರಮೇಣ ಫಲವತ್ತತೆ ಕಡಿಮೆಯಾಗುತ್ತ ಸಾಗಿತು. ರಾಸಾಯನಿಕ ಗೊಬ್ಬರದ ಬಳಕೆ ಸೇರಿದಂತೆ ಸರ್ಕಾರದ ಸಲಹೆ ಸೂಚನೆ ಯಂತೆ ಈ ಭೂಮಿಯಲ್ಲಿ ಕೃಷಿ ಮುಂದು ವರೆಸಿದಂತೆ ನನ್ನ ಗುರುಗಳು ನಷ್ಟ ಅನು ಭವಿಸುವಂತಾಯಿತು. ಆ ಬಳಿಕವೇ ಅವರು ಪರ್ಮಾಕಲ್ಚರ್ ಪದ್ಧತಿ ಅಳವಡಿಸಿಕೊಂಡು ಚೇತರಿಕೆ ಕಂಡರು. ಪರ್ಮಾಕಲ್ಚರ್ ವಿನ್ಯಾಸ ಆರಂಭದಲ್ಲಿ ಕಷ್ಟವೆನ್ನಿಸಿದರೂ ದೀರ್ಘಾವಧಿಯಲ್ಲಿ ಪ್ರತಿಫಲ ಕೊಡಲಿದೆ ಎಂದು ಭರವಸೆ ಮೂಡಿಸಿದರು.

ಮೈಕೆಲ್ ಕಾಮನ್ಸ್ ಅವರ ಪತ್ನಿ ಯೋಕ್ (ಚೊಂಚಯಾ) ನೈಸರ್ಗಿಕ ಉತ್ಪನ್ನಗಳ ಮೌಲ್ಯವರ್ಧನೆಯ ಕೌಶಲ್ಯವನ್ನು ಪ್ರಾತ್ಯ ಕ್ಷಿಕೆ ಮೂಲಕ ತಿಳಿಸಿಕೊಟ್ಟರು. ಬಂಡೀ ಪುರ ಅರಣ್ಯ ವ್ಯಾಪ್ತಿಯ `ಓಪನ್ ಷೆಲ್’ ಫಾರಂನಲ್ಲಿ ಶಾಶ್ವತ ಕೃಷಿಯ ಮಾದರಿ ಅಳವಡಿಸಿಕೊಂಡಿರುವ ಮಾಳವಿಕಾ ಸೊಳಂಕಿ `ಶಾಶ್ವತ ಕೃಷಿ’ಗೆ ಸಂಬಂಧಿಸಿ ದಂತೆ ತಮ್ಮ ಅನುಭವ ಹಂಚಿಕೊಂಡರು.

ಮೈಕೆಲ್ ಕಾಮನ್ಸ್-ಯೋಕ್ ದಂಪತಿ ಬೆಳವಲ ಪರಿಸರ ಕೇಂದ್ರದಲ್ಲಿ ನ.14ರವ ರೆಗೆ ನಿತ್ಯ ಕೃಷಿಗೆ ಸಂಬಂಧಿಸಿದ ವಿವಿಧ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ ಎಂದು `ಮೈಸೂರು ಮಿತ್ರ’ನಿಗೆ ಬೆಳವಲ ಫೌಂಡೇಷನ್ ಅಧ್ಯಕ್ಷ ಡಾ.ರಾಮಕೃಷ್ಣ ತಿಳಿಸಿದರು. ಹಲವು ಮಂದಿ ಕೃಷಿಕರು ಹಾಗೂ ಆಸಕ್ತರು ಪಾಲ್ಗೊಂಡಿದ್ದರು.