ಮೈಸೂರು: ಮೈಸೂರಿನ ಹೃದಯ ಭಾಗದಲ್ಲಿರುವ ಮೈಸೂರು ವಿವಿಯ ವ್ಯಾಪ್ತಿಯ ಕುಕ್ಕರಹಳ್ಳಿ ಕೆರೆಯು ನಿಸರ್ಗದ ಸೊಬಗಿ ನಿಂದ ಕೂಡಿದ ಪ್ರಶಾಂತಮಯ ತಾಣ. ಇಂತಹ ರಮ್ಯ ಮನೋಹರ ರಮಣೀಯ ಪ್ರದೇಶದ ಮನ ಮೋಹಕ ವನ್ಯ ಸಂಪತ್ತಿನ ಸಂಪದ್ಭರಿತ ಚಿತ್ರಣ 100ಕ್ಕೂ ಹೆಚ್ಚು ಛಾಯಾಚಿತ್ರಗಳಲ್ಲಿ ಅನಾವರಣ ಗೊಂಡು ನೋಡುಗರಲ್ಲಿ ಪುಳಕ ಉಂಟು ಮಾಡಿತು.
ಹೌದು, ಕುಕ್ಕರಹಳ್ಳಿ ಕೆರೆ ಆವರಣದಲ್ಲೇ `ವೈಲ್ಡ್ ಮೈಸೂರು’ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ `ಲೈಫ್ ಇನ್ ಕುಕ್ಕರಹಳ್ಳಿ ಕೆರೆ’ ಎಂಬ ಛಾಯಾಚಿತ್ರ ಪ್ರದರ್ಶನದಲ್ಲಿ ಕುಕ್ಕರಹಳ್ಳಿ ಕೆರೆಯ ವನ್ಯ ಸಂಪತ್ತು ಹಾಗೂ ಪಕ್ಷಿ ಸಂಕುಲದ ವೈವಿಧ್ಯಮಯ ನೋಟ ಮೂಡಿಬಂದು ಬೆಳಂಬೆಳಿಗ್ಗೆ ವಾಯುವಿಹಾರಕ್ಕೆ ಬಂದಿದ್ದ ನೂರಾರು ಮಂದಿಯ ಮನಸೂರೆಗೊಂಡಿತು.
49 ಛಾಯಾಗ್ರಾಹಕರಿಂದ 90 ಚಿತ್ರಗಳು ಕೆರೆಯ ನೈಸರ್ಗಿಕ ಸಂಪತ್ತು ಸೆರೆ ಹಿಡಿದಿದ್ದರೆ, ಉಳಿದಂತೆ ವೈಲ್ಡ್ ಮೈಸೂರು ಸಂಘಟನೆಯ ಛಾಯಾಚಿತ್ರಗಳು ಕೆರೆಯ ನಾನಾ ವೈಶಿಷ್ಟ್ಯ ಕಲೆ ಹಾಕಿರುವ ಚಿತ್ರಗಳು ಸೇರಿದಂತೆ ಒಟ್ಟಾರೆ 185 ಛಾಯಾಚಿತ್ರಗಳು ಪ್ರದರ್ಶನಗೊಂಡವು.
ಹೆಜ್ಜಾರ್ಲೆ, ಬಿಳಿ ಕೆಂಬರಲು, ಬೂದು ಬಕ ಸೇರಿ ದಂತೆ ವಿವಿಧ ಬಗೆಯ ಕೊಕ್ಕರೆಗಳು ಕೆರೆಯ ಆವರಣದಲ್ಲಿ ನೆಲೆ ನಿಂತು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿರುವ ರೋಮಾಂಚನ ಮೂಡಿಸುವ ಚಿತ್ರಗಳನ್ನು ಕ್ಲಿಕ್ಕಿಸಿ ಪ್ರದರ್ಶಿಸಲಾಗಿತ್ತು.
ಹಾಲಕ್ಕಿ, ನವ ರಂಗ, ಬಿಳಿ ಹುಬ್ಬಿನ ಬಾತು, ಅಡವಿ ಗದ್ದೆಗೊರವ, ಪುಟ್ಟ ನೀರುಕಾಗೆ ಸೇರಿದಂತೆ ವೈವಿಧ್ಯಮಯ ಪಕ್ಷಿ ಸಂಕುಲ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದವು. ಕೆರೆ ಆವರಣದಲ್ಲಿರುವ ಜೋಂಡು ಪ್ರದೇಶ, ನೀರು ದಂಡೆ, ಜೋಗುನೆಲೆಯಲ್ಲಿ ಸಸ್ಯ ಸಂಪತ್ತು ನೋಡುಗರ ಕಣ್ಣಲ್ಲಿ ಕೌತುಕ ಮೂಡಿಸಿತು.
ಕುಕ್ಕಿ ಬಳ್ಳಿ, ಗಂಟಿಗೆ ಹೂವು ಸೇರಿದಂತೆ ನಾನಾ ಬಗೆಯ ಹೂಗಳ ಸೌಂದರ್ಯರಾಶಿಯೂ ಅನಾವರಣ ಗೊಂಡಿತ್ತು. ಒಟ್ಟಾರೆ ಕುಕ್ಕರಹಳ್ಳಿಯ ಕೆರೆಯಲ್ಲಿರುವ ಪರಿಸರ, ಜೀವ ವೈವಿಧ್ಯತೆ, ಪ್ರಾಣಿ ಮತ್ತು ಪಕ್ಷಿ ಪ್ರಬೇಧ ಹಾಗೂ ವನ್ಯ ಸಂಪತ್ತಿನ ಪ್ರಾಮುಖ್ಯತೆ ಸಾರಿತು ಈ ಪ್ರದರ್ಶನ.
ಕೆರೆ ಆವರಣದಲ್ಲಿ ಮಹಾಗೊನಿ ಸಸಿ ನೆಟ್ಟು ಪ್ರದ ರ್ಶನಕ್ಕೆ ಚಾಲನೆ ನೀಡಿದ ಮೈಸೂರು ವಿವಿ ಕುಲಸಚಿವ (ಆಡಳಿತ) ಪ್ರೊ.ಲಿಂಗರಾಜ ಗಾಂಧಿ ಮಾತನಾಡಿ, ವೈಲ್ಡ್ ಮೈಸೂರು ಇಂತಹ ವಿಶಿಷ್ಟ ಕಾರ್ಯಕ್ರಮ ಏರ್ಪ ಡಿಸಿರುವುದು ಶ್ಲಾಘನೀಯ. ಮೈಸೂರು ವಿವಿಯ ಕುಕ್ಕರಹಳ್ಳಿ ಕೆರೆ ಮೈಸೂರಿನ ಹೆಮ್ಮೆಯ ತಾಣ. ಈ ಕೆರೆ ಹಾಗೂ ಇಲ್ಲಿನ ಅರಣ್ಯ ಸಂಪತ್ತು ಸಂರಕ್ಷಣೆ ಮಾಡು ವುದು ಮೈಸೂರಿಗರ ಕರ್ತವ್ಯ. ಈ ಸುಂದರ ಕೆರೆಯ ಆವರಣ ರಾಷ್ಟ್ರಕವಿ ಕುವೆಂಪು ಸೇರಿದಂತೆ ಅನೇಕ ಸಾಹಿತಿಗಳಿಗೆ ಸ್ಫೂರ್ತಿ ನೀಡಿದೆ ಎಂದು ಹೇಳಿದರು.
ಪರಿಸರ ಪ್ರೇಮಿಗಳಿಗೆ ಪ್ರೇರಣೆ ನೀಡುವಂತಹ ಈ ಸ್ಥಳದ ಸಂರಕ್ಷಣೆ ನಿಟ್ಟಿನಲ್ಲಿ ಇಂದಿನ ಕಾರ್ಯ ಕ್ರಮ ಪೂರಕವಾಗಿದೆ. ಪ್ರದರ್ಶನ ನೋಡುವವರಲ್ಲಿ ಈ ಕೆರೆಯ ವೈಶಿಷ್ಟ್ಯ ಹಾಗೂ ಮಹತ್ವ ಅರಿವಿಗೆ ಬಂದರೆ ಸಾರ್ಥಕ ಎಂದರು. ಮೈಸೂರು ಗ್ರಾಹಕ ಪರಿಷತ್ತಿನ ಸಂಸ್ಥಾಪಕ ಭಾಮಿ ಶೆಣೈ, ಪರಿಸರ ತಜ್ಞರಾದ ದಿನೇಶ್, ಯು.ಆರ್.ರವಿಕುಮಾರ್, ವೈಲ್ಡ್ ಮೈಸೂರು ಸಂಘಟನೆ ಕಾರ್ಯಕರ್ತರಾದ ಶೈಲ ಜೇಸ್, ಚಂದ್ರ ಮತ್ತಿತರರು ಹಾಜರಿದ್ದರು.