ಕುಕ್ಕರಹಳ್ಳಿ ಕೆರೆಯಲ್ಲಿ ಹಂದಿ ಬೇಟೆ

ಮೈಸೂರು: ಮೈಸೂರಿನ ಕುಕ್ಕರಹಳ್ಳಿ ಕೆರೆಯಲ್ಲಿ ಹಲವು ವಾಯು ವಿಹಾರಿಗಳ ಸಮ್ಮುಖದಲ್ಲಿಯೇ ನಾಲ್ವರು ಯುವಕರ ತಂಡವೊಂದು ಹಂದಿಯೊಂದನ್ನು ಹಿಡಿದು ಡೋಲಿಯಲ್ಲಿ ಹೊತ್ತೊಯ್ದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಂಗಳ ವಾರ ಸಂಜೆ ಕುಕ್ಕರಹಳ್ಳಿ ಕೆರೆ ಏರಿ ಮೇಲೆ ಹಲವಾರು ಮಂದಿ ವಾಯುವಿಹಾರ ಮಾಡುತ್ತಿ ರುವ ಸಂದರ್ಭದಲ್ಲಿಯೇ ನಾಲ್ವರು ಯುವಕರು ಕೆರೆ ಆವರಣದಿಂದ ದೊಡ್ಡ ಗಾತ್ರದ ಹಂದಿ ಯೊಂದನ್ನು ಹಿಡಿದು ಬೊಂಬನ್ನು ಬಳಸಿ ಡೋಲಿ ಮಾಡಿಕೊಂಡು ಹೊತ್ತೊಯ್ದಿದ್ದಾರೆ. ಅನಿರೀಕ್ಷಿತವಾಗಿ ಹಂದಿಯೊಂದಿಗೆ ಎದುರಾದ ಯುವಕ ರನ್ನು ವಾಯುವಿಹಾರಿಗಳು ಗಮನಿಸಿದ್ದರಾದರೂ ಪ್ರಶ್ನೆ ಮಾಡದೆ ತಟಸ್ಥರಾಗಿದ್ದಾರೆ. ಯುವಕರು ಹಿಡಿದುಕೊಂಡು ಹೋದ ಹಂದಿ ಕಾಡಂದಿಯೆಂದು ಕೆಲವರು ಭಾವಿಸಿದ್ದರು. ಮತ್ತೆ ಕೆಲವರು ದೂರದಿಂದ ನಿಂತುಕೊಂಡು ಫೋಟೊ ತೆಗೆದುಕೊಂಡು ಸುಮ್ಮನಾಗಿದ್ದಾರೆ.

ಡಿಸಿಎಫ್ ಡಾ.ಕೆ.ಸಿ.ಪ್ರಶಾಂತ್ ಕುಮಾರ್ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಯುವಕರು ಕೊಂಡೊಯ್ದಿರುವ ಹಂದಿ ಕಾಡಂದಿಯಲ್ಲ. ಅದು ನಾಡಂದಿಯಾಗಿದೆ. ಕಾಡಂದಿಯನ್ನು ಬೇಟೆಯಾಡುವುದು ಅಪರಾಧ. ಸಮೀಪದ ಬಡಾವಣೆಯಲ್ಲಿ ಸಾಕಿದ್ದ ಹಂದಿ ಕುಕ್ಕರಹಳ್ಳಿ ಕೆರೆ ಆವರಣ ಪ್ರವೇಶಿಸಿದ್ದನ್ನು ಕೊಂಡೊಯ್ದಿದ್ದಾರೆ ಎಂದು ತಿಳಿದು ಬಂದಿದೆ. ಮತ್ತೊಮ್ಮೆ ಇಂತಹ ಘಟನೆ ನಡೆಯದಂತೆ ಕಟ್ಟೆಚ್ಚರವಹಿಸಲಾಗಿದೆ. ಸಾರ್ವಜನಿ ಕರು ಇಂತಹ ಕೃತ್ಯಗಳನ್ನು ಕಂಡ ಕೂಡಲೇ ಅರಣ್ಯ ಇಲಾಖೆಗೆ ತಿಳಿಸುವಂತೆ ಕೋರಿದ್ದಾರೆ.