ಬಿರುಗಾಳಿ ಮಳೆಗೆ ತೋಟದ ಬೆಳೆ ಮಣ್ಣು ಪಾಲು

ಚಾಮರಾಜನಗರ: ಕಳೆದ ರಾತ್ರಿ ಬೀಸಿದ ಭಾರೀ ಬಿರುಗಾಳಿ-ಮಳೆಗೆ ತಾಲೂಕಿನ ಆಲೂರು ಗ್ರಾಮದ ತೋಟದ ಬೆಳೆಗಳು ಮಣ್ಣು ಪಾಲಾಗಿದ್ದು, ಲಕ್ಷಾಂತರ ರೂ. ನಷ್ಟ ಉಂಟಾಗಿರುವ ಬಗ್ಗೆ ವರದಿಯಾಗಿದೆ.

ಗ್ರಾಮದಲ್ಲಿ ತೆಂಗು, ಅಡಕೆ, ಮಾವಿನ ಮರಗಳು, ಹಲಸಿನ ಮರಗಳು ಹಾಗೂ ನೂರಾರು ಬಾಳೆ ಗಿಡಗಳು ನೆಲ ಕಚ್ಚಿವೆ.
ಇನ್ನೂರಕ್ಕೂ ಹೆಚ್ಚು ತೆಂಗಿನ ಮರ. ಐದನೂರಕ್ಕೂ ಹೆಚ್ಚಿನ ಅಡಕೆ ಮರಗಳು, ನೂರಕ್ಕೂ ಹೆಚ್ಚು ಹಲಸು ಮತ್ತು ಮಾವಿನ ಮರಗಳು ಭಾರೀ ಬಿರುಗಾಳಿಗೆ ಸಿಲುಕಿ ಮುರಿದು ಬಿದ್ದಿವೆ. ಲಕ್ಷಾಂತರ ಬೆಲೆ ಬಾಳುವ ಮಾವಿನ ಕಾಯಿಗಳು ಬಿರುಗಾಳಿಗೆ ಸಿಲುಕಿ ನೆಲಕ್ಕೆ ಉರುಳಿವೆ. ಇದರಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಇನ್ನು ಹಲಸಿನ ನೂರಾರು ಕಾಯಿಗಳು ಸಹ ಮಣ್ಣು ಪಾಲಾಗಿದೆ. ನೂರಕ್ಕೂ ಹೆಚ್ಚು ಎಕರೆಯಲ್ಲಿ ಬೆಳೆದಿರುವ ಏಲಕ್ಕಿ, ಪಚ್ಚೆ ಹಾಗೂ ನೇಂದ್ರ ಬಾಳೆ ಗೊನೆಗಳು ಮುರಿದು ಬಿದ್ದಿವೆ. ಕಟಾವಿಗೆ ಬಂದಿದ್ದ ಕಬ್ಬಿನ ಬೆಳೆಯೂ ಸಹ ಬಿರುಗಾಳಿಗೆ ತತ್ತರಿಸಿ ನೆಲಕ್ಕೆ ಉರುಳಿವೆ. ಗ್ರಾಮದ ರೈತರುಗಳಾದ ಎ.ಸಿ. ಸಿದ್ದರಾಜು, ಎ.ಸಿ. ರಾಜಶೇಖರಮೂರ್ತಿ, ಪರಶಿವಮೂರ್ತಿ, ವಿಶ್ವ, ಎ.ಎಸ್. ನಾಗರಾಜು, ಶ್ರೀಮತಿ ಚಿನ್ನಮ್ಮ ಉರುಫ್ ಪುಟ್ಟಲಿಂಗಮ್ಮ, ಕೆರೆಮನೆ ಜಯಣ್ಣ, ಶಾಂತಪ್ಪ, ಎ.ಎಂ. ಸುಂದರಾಜು ಎ.ಎಸ್.ಚನ್ನಬಸಪ್ಪ, ಎ.ಬಿ.ಶಿವಕುಮಾರ್ ಸ್ವಾಮಿ, ಎ.ಪಿ. ಬಸವರಾಜು ಸೇರಿದಂತೆ ಇನ್ನೂ ಹಲವಾರು ರೈತರಿಗೆ ಸೇರಿದ ತೋಟದ ಬೆಳೆಗಳು ನಷ್ಟವಾಗಿದೆ. ಇಂದು ಬೆಳಗ್ಗೆ ತಾಲೂಕು ಆಡಳಿತ ವರ್ಗದಿಂದ ಚಂದಕವಾಡಿ ಹೋಬಳಿಯ ಕಂದಾಯ ಅಧಿಕಾರಿ ರೇಚಣ್ಣಸ್ವಾಮಿ ಹಾಗೂ ಸಿಬ್ಬಂದಿ ವರ್ಗ ಗ್ರಾಮದ ತೋಟಗಳಿಗೆ ಭೇಟಿ ನೀಡಿ ಮಹಜರ್ ನಡೆಸಿ ಸೂಕ್ತ ಪರಿಹಾರ ಕೂಡಿಸಿ ಕೂಡುವ ಬಗ್ಗೆ ಭರವಸೆ ನೀಡಿದರು.

ಚೆನ್ನೀಪುರದ ಮೋಳೆ: ನಗರದ ಚೆನ್ನೀಪುರದ ಮೋಳೆಯಲ್ಲಿ ಭಾನುವಾರ ಸಂಜೆ ಸುರಿದ ಮಳೆ, ಗಾಳಿಯಿಂದ 4 ಮನೆಗಳಿಗೆ ಹಾನಿ ಉಂಟಾಗಿದೆ.

ಚೆನ್ನೀಪುರದಮೋಳೆಯ ಕುಸುಮಬಾಲರಾಜ್, ಮಹದೇವಮ್ಮರಾಮಚಂದ್ರ ಅವರಿಗೆ ಸೇರಿದ ವಾಸಮನೆಯ ಕಲ್ನಾರ್‍ಶೀಟುಗಳು ಹಾರಿಹೋಗಿದ್ದು, ತೆಂಗಿನಮರದ ತೀರುಗಳು ರೀಫರ್‍ಗಳು ಮುರಿದು ಹೋಗಿವೆ. ಮಂಗಳೂರು ಹೆಂಚುಗಳು ಚೂರು ಚೂರಾಗಿದ್ದು, ಪಾತ್ರೆಗಳಿಗೆ ಹಾನಿಯಾಗಿದೆ. ನಾಗಮ್ಮಸುಬ್ಬಶೆಟ್ಟಿ ಅವರಿಗೆ ಸೇರಿದ ವಾಸದ ಮನೆಯ ಸಂಪೂರ್ಣ ಮೇಲ್ಚಾವಣೆಯ ಹಾರಿದು ಹೋಗಿದ್ದು, ಕಲ್ನಾರ್‍ಶೀಟುಗಳು ಚೂರು, ಚೂರಾಗಿದೆ. ಜಯಮ್ಮಸಿದ್ದರಾಜು ಅವರಿಗೆ ಸೇರಿದ ಮನೆಯ ಮೇಲ್ಚಾವಣೆ ಹಾರಿದ್ದು ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ಈ ಸಂಬಂಧ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ ಪರಿಶೀಲಿಸಿ ಸೂಕ್ತ ಪರಿಹಾರ ನೀಡುವಂತೆ ಸಂತ್ರಸ್ತರು ಮನವಿ ಮಾಡಿದ್ದಾರೆ.