ವಿದ್ಯುತ್ ಕೇಬಲ್‍ಗೆ ನೀರಿನ ಪೈಪ್ ಸಂಪರ್ಕ ನೀಡಲು ಯತ್ನಿಸಿದ ಪ್ಲಂಬರ್!!

ಮೈಸೂರು, ಜೂ.30(ಎಂಟಿವೈ)- ನೀರಿನ ಸಂಪರ್ಕ ಮಾರ್ಗವೆಂಬ ತಪ್ಪು ಗ್ರಹಿಕೆಯಿಂದ 11 ಕೆವಿ ಸಾಮಥ್ರ್ಯದ ವಿದ್ಯುತ್ ಪ್ರವಹರಿಸುತ್ತಿದ್ದ ಕೇಬಲ್‍ಗೆ ಪ್ಲಂಬರ್‍ವೊಬ್ಬರು ನೀರಿನ ಪೈಪ್ ಅಳವಡಿಸಿದ ಘಟನೆ ನಡೆದಿದ್ದು, ಅದೃಷ್ಟ ವಶಾತ್ ಕೂದಲೆಳೆ ಅಂತರದಲ್ಲಿ ಸಂಭವಿಸ ಬಹುದಾಗಿದ್ದ ದೊಡ್ಡ ದುರಂತ ತಪ್ಪಿದೆ.

ಮೈಸೂರಿನ ಕೆ.ಟಿ.ಸ್ಟ್ರೀಟ್‍ನಲ್ಲಿರುವ ಕಾಳಮ್ಮ ದೇವಾಲಯದ ರಸ್ತೆಯಲ್ಲಿ ಶಂಕರಯ್ಯ ಜಂಕ್ಷನ್ ಬಳಿ ಹೊಸದಾಗಿ 3 ಅಂತಸ್ತಿನ ಮನೆಯನ್ನು ಕಟ್ಟ ಲಾಗಿದ್ದು, ಈ ಮನೆಗೆ ಮನೆ ಮಾಲೀಕ ರಾತ್ರಿ ವೇಳೆ ನೀರಿನ ಸಂಪರ್ಕ ಪಡೆಯಲು ಪ್ಲಂಬರ್‍ನಿಂದ ಕೆಲಸ ಮಾಡಿಸುವಾಗ ಅಚಾತುರ್ಯ ನಡೆದಿದೆ. ಮೇಲ್ನೋಟಕ್ಕೆ ಪಾಲಿಕೆಯ ಕಣ್ಣಿಗೆ ಮಣ್ಣೆರಚಿ ಅನಧಿಕೃತವಾಗಿ ನೀರಿನ ಸಂಪರ್ಕ ಪಡೆಯಲು ಯತ್ನಿಸಿದ್ದರೆ? ಎಂಬ ಅನುಮಾನ ವ್ಯಕ್ತವಾಗಿದೆ.

ಮನೆ ಮಾಲೀಕನ ಕೋರಿಕೆ ಮೇರೆಗೆ ಜೂ.25 ರಂದು ಮೂವರು ಪ್ಲಂಬರ್‍ಗಳು ಮಾಲೀಕ ತೋರಿ ಸಿದ ಜಾಗದಲ್ಲಿ ರಸ್ತೆ ಬದಿಯಲ್ಲಿ ಅಗೆದಿದ್ದಾರೆ. ಎರಡೂವರೆ ಅಡಿಯಿಂದ ಮೂರು ಅಡಿ ಆಳದ ಗುಂಡಿ ತೋಡುತ್ತಿದ್ದಂತೆ 11 ಕೆವಿ ಸಾಮಥ್ರ್ಯದ ವಿದ್ಯುತ್ ಪ್ರವಹರಿಸುತ್ತಿದ್ದ ಕೇಬಲ್ ಕಂಡಿದೆ. ಮೇಲ್ನೋಟಕ್ಕೆ ಅದು ನೀರಿನ ಪೈಪ್‍ಲೈನ್‍ನಂತೆ ಕಂಡಿದ್ದರಿಂದ ಪ್ಲಂಬರ್‍ಗಳಿಗೆ ಅದು ವಿದ್ಯುತ್ ಕೇಬಲ್ ಎಂದು ಗುರುತಿಸಿಲ್ಲ. ಅಲ್ಲದೆ ಮುಂಜಾನೆ 2.30ರಲ್ಲಿ ಗುಂಡಿ ತೋಡುವ ಕೆಲಸ ಮಾಡುತ್ತಿದ್ದರಿಂದ ನಿದ್ದೆ ಮಾಡುವ ತವಕದಲ್ಲಿದ್ದ ಪ್ಲಂಬರ್‍ಗಳು ವಿದ್ಯುತ್ ಕೇಬಲ್‍ಗೆ ಹಾರೆಯಿಂದ ಹೊಡೆದಿದ್ದಾರೆ. ಇದರಿಂದ ಕೇಬಲ್‍ಗೆ ಹಾನಿಯಾಗಿದೆ. ಕೂಡಲೇ ಸ್ವಯಂ ಚಾಲಿತ ವ್ಯವಸ್ಥೆ ಇರುವುದರಿಂದ ಆ ಮಾರ್ಗದ ಪಾಯಿಂಟ್‍ನಲ್ಲಿ ಟ್ರಿಪ್ ಆಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇದರಿಂದ ಕೆಲಸ ಮಾಡುತ್ತಿದ್ದ ಪ್ಲಂಬರ್‍ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾಪಾಡಿದ ಸ್ವಯಂ ಚಾಲಿತ ವ್ಯವಸ್ಥೆ: ಈ ಕುರಿತಂತೆ `ಮೈಸೂರು ಮಿತ್ರ’ನೊಂದಿಗೆ ಚೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆರ್.ರುದ್ರೇಶ್ ಮಾತನಾಡಿ, ವಿದ್ಯುತ್ ಸಂಪರ್ಕ ಕೇಬಲ್ ವ್ಯವಸ್ಥೆಯಲ್ಲಿ ಸ್ವಯಂ ಚಾಲಿತ ವ್ಯವಸ್ಥೆ ಇರುವುದರಿಂದ ಪ್ಲಂಬರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಟೇಷನ್‍ನಿಂದ 1 ಅಥವಾ 2 ಕಿ.ಮೀ.ಗೆ ಬ್ರೇಕ್ ಪಾಯಿಂಟ್ ಅಳವಡಿಸಲಾಗಿದ್ದು, ಯಾವುದಾದರೂ ಒಂದು ಪಾಯಿಂಟ್ ನಡುವೆ ಕೇಬಲ್‍ಗೆ ಹಾನಿಯಾದರೆ ಟ್ರಿಪ್ ಆಗಿ ವಿದ್ಯುತ್ ಸಂಪರ್ಕ ಸ್ಥಗಿತಗೊಳ್ಳುತ್ತದೆ. ಜೂನ್ 25ರಂದು ಮುಂಜಾನೆ 2.45ಕ್ಕೆ ಕೇಬಲ್ ಡ್ಯಾಮೇಜ್ ಆಗಿ ವಿದ್ಯುತ್ ಸಂಪರ್ಕ ಕಡಿತವಾಗಿದೆ. ನನಗೆ ಮುಂಜಾನೆ 2.50ಕ್ಕೆ ಕಚೇರಿಯಿಂದ ಕರೆ ಬಂದು ವಿದ್ಯುತ್ ಸ್ಥಗಿತಗೊಂಡಿರುವ ಮಾಹಿತಿ ನೀಡಿದ್ದಾರೆ. ಕೂಡಲೇ ಪರಿಶೀಲಿಸಿದಾಗ ಕಾಳಮ್ಮ ರಸ್ತೆಯ ಪಾಯಿಂಟ್‍ವರೆಗೆ ವಿದ್ಯುತ್ ಸಂಪರ್ಕ ಇದ್ದು, ಮುಂದಿನ ಐದಾರು ಪಾಯಿಂಟ್‍ಗೆ ಕಡಿತಗೊಂಡಿತ್ತು. ಕೊನೆಯ ಪಾಯಿಂಟ್‍ನಲ್ಲಿ 1 ಕಿ.ಮೀ. ವಿದ್ಯುತ್ ಸಂಪರ್ಕ ಇಲ್ಲದೇ ಇರುವುದನ್ನು ಗಮನಿಸಿ ಮುಂದಿನ ಪಾಯಿಂಟ್ ನಿಂದ ಪರ್ಯಾಯ ಮಾರ್ಗದಲ್ಲಿ ವಿದ್ಯುತ್ ಸರಬರಾಜು ಮಾಡಲಾ ಯಿತು. ನಂತರ ಪರಿಶೀಲನೆ ನಡೆಸಿದಾಗ ಹೊಸ ಮನೆಯೊಂದರ ಮುಂದೆ ಕೇಬಲ್ ಲೈನ್ ಇರುವ ಜಾಗದಲ್ಲಿ ಗುಂಡಿ ತೋಡಿ ಮುಚ್ಚಿರುವುದು ಕಂಡುಬಂದಿತು. ಕೂಡಲೇ ಪರಿಶೀಲಿಸಿದಾಗ ನೀರಿನ ಸಂಪರ್ಕ ಪಡೆಯಲು ವಿದ್ಯುತ್ ಕೇಬಲ್‍ಗೆ ಪೈಪ್ ಅಳವಡಿಸಿರು ವುದು ಕಂಡುಬಂದಿತು. ಕೂಡಲೇ ಕಟ್ಟಡ ಮಾಲೀಕರ ಗಮನಕ್ಕೆ ತಂದು ಕೇಬಲ್ ಅನ್ನು ಸರಿಪಡಿಸಲಾಯಿತು. ಇಷ್ಟು ದಿನ ಯಾವುದಾದರೂ ಕೇಬಲ್ ಮಾರ್ಗದಲ್ಲಿ ಟ್ರಿಪ್ ಆದಾಗ ಮತ್ತೊಮ್ಮೆ ವಿದ್ಯುತ್ ಸಂಪರ್ಕ ಕಲ್ಪಿಸುವ ಪ್ರಯತ್ನ ಮಾಡಲಾಗುತ್ತಿತ್ತು. ಆದರೆ ಅಂದು ಮತ್ತೊಮ್ಮೆ ವಿದ್ಯುತ್ ಸರಬರಾಜು ಮಾಡುವುದಕ್ಕೆ ಪ್ರಯತ್ನಿಸಲಿಲ್ಲ. ಒಂದು ವೇಳೆ ಕರೆಂಟ್ ಪಾಸಾಗಿದ್ದರೆ ಅಲ್ಲಿದ್ದವರ ಪ್ರಾಣಹಾನಿಯಾಗುತ್ತಿತ್ತು. ಇಂತಹ ಘಟನೆ ಮರುಕಳಿಸದಂತೆ ತಡೆಗಟ್ಟಲು ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಕಟ್ಟಡ ಮಾಲೀಕನಿಗೆ ನೋಟೀಸ್ ನೀಡಲು ನಿರ್ಧರಿಸಲಾಗಿದೆ ಎಂದರು.

ಮಾಹಿತಿ ನೀಡಿ: ಎನ್.ಆರ್.ಮೊಹಲ್ಲಾದ ಕಾರ್ಯ ನಿರ್ವಾಹಕ ಇಂಜಿನಿಯರ್ ಹೆಚ್.ಎಸ್.ಸ್ವಾಮಿ ಮಾತನಾಡಿ, ರಸ್ತೆ ಅಗೆಯುವಾಗ ಚೆಸ್ಕಾಂ ಗಮನಕ್ಕೆ ತರುವಂತೆ ಮನವಿ ಮಾಡಲಾಗಿದೆ ಆದರೂ ಕೆಲವರ ನಿರ್ಲಕ್ಷ್ಯದಿಂದಾಗಿ ಕೂಲಿ ಕಾರ್ಮಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮೈಸೂರಿನಲ್ಲಿ ಅಂಡರ್‍ಗ್ರೌಂಡ್‍ನಲ್ಲಿ ವಿದ್ಯುತ್ ಸಂಪರ್ಕ ಕೇಬಲ್ ಅಳವಡಿಸಿರುವುದರಿಂದ ನೀರು, ಒಳಚರಂಡಿ ಸೇರಿದಂತೆ ಯಾವುದೇ ಉದ್ದೇ ಶಕ್ಕೆ ರಸ್ತೆ ಅಗೆಯುವಾಗ ಚೆಸ್ಕಾಂ ಗಮನಕ್ಕೆ ತಂದರೆ ಯಾವ ಸ್ಥಳದಲ್ಲಿ ವಿದ್ಯುತ್ ಕೇಬಲ್ ಹಾದುಹೋಗಿದೆ ಎಂಬುವ ಮಾಹಿತಿಯನ್ನು ನೀಡುತ್ತೇವೆ. ಅಲ್ಲದೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಕ್ಕೂ ಕ್ರಮ ಕೈಗೊಳ್ಳುತ್ತೇವೆ. ಕಟ್ಟಡದ ಕಾಮಗಾರಿಗೆ ಕಬ್ಬಿಣ ಸಾಗಿಸುವಾಗ, ಕ್ಯೂರಿಂಗ್ ಮಾಡುವ ಸಂದರ್ಭದಲ್ಲೂ ಅವಘಡಗಳು ನಡೆದಿವೆ. ಈ ನಿಟ್ಟಿನಲ್ಲಿ ಕಟ್ಟಡದ ಮಾಲೀಕರು, ಕೂಲಿ ಕಾರ್ಮಿಕರು, ಸಾರ್ವಜನಿಕರು ಜಾಗೃತಿ ವಹಿಸಿ ವಿದ್ಯುತ್ ಅವಘಡಗಳಿಂದ ರಕ್ಷಣೆ ಪಡೆಯುವಂತೆ ಕೋರಲಾಗಿದೆ ಎಂದರು.