ಮೈಸೂರು ಜಿಲ್ಲಾಡಳಿತದಿಂದ ಕವಿ ವೇಮನ ಜಯಂತಿ ಆಚರಣೆ

ಮೈಸೂರು, ಜ.19(ಪಿಎಂ)- ಪರೋ ಪಕಾರಿ ಗುಣದಲ್ಲಿ ಭಕ್ತಿಯ ಸಾರವಿದೆ ಎಂದು ಕವಿ ವೇಮನ ತಮ್ಮ ವಚನದ ಮೂಲಕ ಸಮಾಜಕ್ಕೆ ಸಾರಿ ಹೇಳಿದ್ದಾರೆ ಎಂದು ಬಸವಧ್ಯಾನ ಮಂದಿರದ ಬಸವ ಲಿಂಗಮೂರ್ತಿ ತಿಳಿಸಿದರು.

ಮೈಸೂರಿನ ಕಲಾಮಂದಿರದ ಕಿರು ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಾಯೋಗಿ ಶ್ರೀ ವೇಮನ ಜಯಂತ್ಯುತ್ಸವ ಸಮಿತಿ ಸಂಯುಕ್ತಾ ಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಹಾಯೋಗಿ ಶ್ರೀ ವೇಮನ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

ದೇವಾಲಯಗಳು ಹಾಗೂ ಧ್ಯಾನ ಮಂದಿರಗಳು ಇಂದು ವಾಣಿಜ್ಯೀಕರಣ ವಾಗಿವೆ. ತತ್ವಜ್ಞಾನಿಗಳನ್ನು ಮೂಲೆಗುಂಪು ಮಾಡಿರುವ ಈ ಕಲಿಯುಗದಲ್ಲಿ ವೇಮನ ತತ್ವ ಹಾಗೂ ಸಿದ್ಧಾಂತಗಳನ್ನು ಅಳವಡಿಸಿ ಕೊಳ್ಳುವುದು ಅಗತ್ಯವಾಗಿದೆ ಎಂದರು.

ದಕ್ಷಿಣ ಭಾರತದ ಬಹಳ ಪ್ರಭಾವಿ ಕವಿ ಗಳಲ್ಲಿ ವೇಮನ ಅಗ್ರಗಣ್ಯರು. ಅಸಮಾ ನತೆ, ಮೌಢ್ಯ ಹಾಗೂ ಜಾತೀಯತೆಯನ್ನು ವಿರೋಧಿಸಿ ಸಮ ಸಮಾಜವನ್ನು ನಿರ್ಮಾಣ ಮಾಡುವುದಕ್ಕೆ ತಮ್ಮ ಹರಿತವಾದ ವಚನ ಗಳ ಮೂಲಕ ಶ್ರಮಿಸಿದರು ಎಂದರು.

ಅಧ್ಯಕ್ಷತೆ ವಹಿಸಿದ್ದ ಮೈಸೂರು ಉಪ ವಿಭಾಗಾಧಿಕಾರಿ ಡಾ.ಎನ್.ಸಿ.ವೆಂಕಟರಾಜು ಮಾತನಾಡಿ, ಸಮಾಜದ ಉದ್ಧಾರಕ್ಕಾಗಿ ದುಡಿದ ಮಹಾಪುರುಷರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು. ಅವರ ತತ್ವಗಳ ಸಾರವನ್ನು ಅರಿತು ಸಜ್ಜನರಾಗಿ ಬದುಕ ಬೇಕು ಎಂದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್. ಚೆನ್ನಪ್ಪ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಮಡ್ಡಿ ಕೆರೆ ಗೋಪಾಲ್, ಸರ್ವಜನ ಹಿತರಕ್ಷಣಾ ಸಮಿತಿ ಅಧ್ಯಕ್ಷ ವೇಣುಗೋಪಾಲ್, ರಂಗಕರ್ಮಿ ಮೈಮ್ ರಮೇಶ್, ವೇಮನ ಸಂಸ್ಥೆಯ ವಾಸು ದೇವರೆಡ್ಡಿ ಮತ್ತಿತರರು ಹಾಜರಿದ್ದರು.