ಭಾಗಮಂಡಲದಲ್ಲಿ ಶ್ರದ್ಧಾಭಕ್ತಿಯ ಪೊಲಿಂಕಾನ ಉತ್ಸವ

ಮಡಿಕೇರಿ: ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ಶ್ರದ್ಧಾಭಕ್ತಿ ಯಿಂದ ಪೆÇಲಿಂಕಾನ ಉತ್ಸವದ ವಿಶೇಷ ಪೂಜೆ ನಡೆಯಿತು. ಶ್ರೀಭಗಂಡೇಶ್ವರ ದೇವಾ ಲಯದ ಆವರಣದ ಶ್ರೀ ಮಹಾ ಗಣಪತಿ, ಶ್ರೀ ಮಹಾವಿಷ್ಣು, ಶ್ರೀ ಸುಬ್ರಹ್ಮಣ್ಯ ಹಾಗೂ ಶ್ರೀ ಭಗಂಡೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಬಾಳೆದಿಂಡಿನಿಂದ ತಯಾರಿಸಿದ ಸುಮಂಗಲಿ ಮಂಟಪಕ್ಕೆ ದೀಪ ಬೆಳಗಿ ಕರಿಮಣಿ, ತಾಳಿ, ಬಳೆ, ಸೀರೆ, ಬೆಳ್ಳಿತಟ್ಟೆ ಮತ್ತಿತರ ಆಭರಣಗಳನ್ನು ಹಾಕಿ ವಿಶೇಷ ಪೂಜೆ ಸಲ್ಲಿಸಿ ಭಗಂಡೇಶ್ವರ ದೇವಾಲಯದ ಸುತ್ತ ಪ್ರದಕ್ಷಿಣೆ ಮಾಡಲಾಯಿತು.

ನಂತರ ವಾದ್ಯಗೋಷ್ಠಿಯೊಂದಿಗೆ ತ್ರಿವೇಣಿ ಸಂಗಮಕ್ಕೆ ತೆರಳಿ ಪೂಜಾ ವಿಧಿ ವಿಧಾನಗಳನ್ನು ಕೈಗೊಂಡು ಕಾವೇರಿ ಮಾತೆಗೆ ಕೃತಜ್ಞತಾಪೂರ್ವಕವಾಗಿ ಸುಮಂಗಲಿ ಮಂಟಪವನ್ನು ವಿಸರ್ಜಿಸಲಾಯಿತು. ನೂರಾರು ಭಕ್ತರು ಪೊಲಿಂಕಾನ ಉತ್ಸವಕ್ಕೆ ಸಾಕ್ಷಿಯಾದರು. ಭಾಗಮಂಡಲ- ತಲಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್.ತಮ್ಮಯ್ಯ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಆಷಾಢ ಮಾಸದಲ್ಲಿ ಪೆÇಲಿಂಕಾನ ಉತ್ಸವದ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಲಾಗಿದೆ.

ಶ್ರೀಭಗಂಡೇಶ್ವರ ದೇವಾಲಯದ ಎಲ್ಲಾ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಕಾವೇರಿಗೆ ಕೃತಜ್ಞತಾಭಾವದಿಂದ ಸುಮಂಗಲಿ ಮಂಟಪವನ್ನು ತ್ರಿವೇಣಿ ಸಂಗಮದಲ್ಲಿ ವಿಸರ್ಜಿಸುವ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ ಎಂದು ತಿಳಿಸಿದರು.

ಪ್ರಮುಖರಾದ ಸನ್ನುವಂಡ ಕಾವೇರಪ್ಪ, ಸುಭಾಷ್, ಕಾರ್ಯ ನಿರ್ವಾಹಕಾ ಧಿಕಾರಿ ಜಗದೀಶ್, ಭಾಗಮಂಡಲ ತಕ್ಕ ಮುಖ್ಯಸ್ಥ ಬಲ್ಲಡ್ಕ ಅಪ್ಪಾಜಿ, ಅರ್ಚಕ ಹರೀಶ್ ಮತ್ತಿತರ ಪ್ರಮುಖರು ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು.