ರಾಜ್ಯದಲ್ಲಿ ರಾಜಕೀಯ ಬದಲಾವಣೆ ಸನ್ನಿಹಿತ

ಮೈಸೂರು, ಜು.7(ಆರ್‍ಕೆಬಿ)- ರಾಜ್ಯದ ಪ್ರಸ್ತುತ ಪರಿಸ್ಥಿತಿ ನೋಡಿದರೆ ಆದಷ್ಟು ಬೇಗ ರಾಜಕೀಯ ಬದಲಾವಣೆ ಆಗುವುದು ಒಳ್ಳೆಯದು ಎಂದು ಮೈಸೂರು-ಕೊಡಗು ಸಂಸದ ಪ್ರತಾಪಸಿಂಹ ಅಭಿಪ್ರಾಯಪಟ್ಟರು.

ಮೈಸೂರಿನ ಕಲಾಮಂದಿರ ಬಳಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಳೆದ ಒಂದು ವರ್ಷದಿಂದ ಶಾಸಕರಿಗೆ ಉಸಿರುಗÀಟ್ಟಿಸುವ ವಾತಾವರಣ ನಿರ್ಮಾಣವಾಗಿತ್ತು. ಸರ್ಕಾರ ಸಂಪೂರ್ಣ ವಿಫಲವಾಗಿರುವುದರಿಂದ ಶಾಸಕರು ತಮ್ಮ ಭವಿಷ್ಯ ವೇನು? ಎಂದು ಯೋಚಿಸುವಂತಹ ಸ್ಥಿತಿ ಕಾಂಗ್ರೆಸ್ ಮತ್ತು ಜೆಡಿಎಸ್‍ನಲ್ಲಿ ಶುರುವಾಗಿದೆ. ಸರ್ಕಾರದ ಆಡಳಿತ ವೈಫಲ್ಯದಿಂದ ಶಾಸಕರು ತಮ್ಮ ಕ್ಷೇತ್ರದಲ್ಲಿ ಮುಖ ತೋರಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಈ ರೀತಿ ರಾಜೀನಾಮೆ ನೀಡಿ ಹೊರ ಬಂದಿದ್ದಾರೆ ಎಂದು ಹೇಳಿದರು.

ತಮ್ಮ ಪಕ್ಷದಲ್ಲಿನ ಉಸಿರುಗಟ್ಟಿಸುವ ವಾತಾವರಣದಿಂದ ಬೇಸತ್ತು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ರಾಜೀನಾಮೆ ನೀಡಿದ್ದಾರೆ ಎಂದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ದೇಶದ ಅಭಿವೃದ್ಧಿ ಕಡೆ ಗಮನ ಹರಿಸುತ್ತಿದ್ದಾರೆಯೇ ಹೊರತು ಅವರಿಗೂ ಶಾಸಕರ ರಾಜೀನಾಮೆಗೂ ಸಂಬಂಧವಿಲ್ಲ. ಇಂತಹ ಕ್ಷುಲ್ಲಕ ರಾಜಕಾರಣಕ್ಕೆ ಅವರು ತಲೆ ಹಾಕುವುದಿಲ್ಲ ಎಂದು ತಿಳಿಸಿದರು. ರಾಜಕೀಯ ಬದ ಲಾವಣೆ ಆಗುವುದಾದರೆ ಕರ್ನಾಟಕದ ಮುಖ್ಯಮಂತ್ರಿಯಾಗಲು ಯಡಿಯೂರಪ್ಪನವರೇ ಸೂಕ್ತ ವ್ಯಕ್ತಿ. ಅವರು ಸಿಎಂ ಆಗುವ ಕಾಲ ಬೇಗ ಬರಲಿ ಅನ್ನುವುದೇ ನಮ್ಮ ಆಸೆ. ಇಂದು ನಡೆಯುತ್ತಿರುವ ಬೆಳವಣಿಗೆಗಳಿಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ತಿಳಿಸಿದರು.