ರಾಜಕೀಯ ದ್ವೇಷ: ಕಾಂಗ್ರೆಸ್-ಬಿಎಸ್‍ಪಿ ಕಾರ್ಯಕರ್ತರ ನಡುವೆ ಘರ್ಷಣೆ

ಚಾಮರಾಜನಗರ: ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಎಸ್‍ಪಿ ಪಕ್ಷದ ಕಾರ್ಯಕರ್ತರ ನಡುವೆ ಕಲ್ಲು ತೂರಾಟ ಹಾಗೂ ಮಾರಾಮಾರಿ ನಡೆದು, 8 ಮಂದಿ ಗಾಯಗೊಂಡಿರುವ ಘಟನೆ ಸಮೀಪದ ರಾಮಸಮುದ್ರ ಬಡಾವಣೆಯಲ್ಲಿ ಭಾನುವಾರ ಸಂಭವಿಸಿದೆ.

ಕಾಂಗ್ರೆಸ್ ಕಾರ್ಯಕರ್ತರೆನ್ನಲಾದ ನಾಗರಾಜು, ಚಂದ್ರಶೇಖರ್, ನಟರಾಜು, ಮಹದೇವಸ್ವಾಮಿ, ಆಂಜನೇಯ ಹಾಗೂ ಬಿಎಸ್‍ಪಿ ಕಾರ್ಯಕರ್ತರೆನ್ನಲಾದ ಚಿನ್ನಸ್ವಾಮಿ, ಮಂಜು, ಮಹದೇವಸ್ವಾಮಿ ಗಾಯ ಗೊಂಡಿದ್ದು, ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ವಿವಿರ: ನಗರಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ನಡೆದ ಸೆಪ್ಟೆಂಬರ್ 3ರಂದು 27ನೇ ವಾರ್ಡಿ ನಿಂದ ಬಿಎಸ್‍ಪಿ ಅಭಿನವ್ ಪ್ರಕಾಶ್ ಗೆಲುವು ಸಾಧಿಸಿದ್ದಾರೆ ಎಂಬ ವಿಷಯ ತಿಳಿದ ಪಕ್ಷದ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದ್ದರು. ಈ ವೇಳೆ ಅದೇ ಬಡಾವಣೆಯಲ್ಲಿ ಇರುವ ಕಂಬವೊಂದಕ್ಕೆ ಬಿಎಸ್‍ಪಿ ಪಕ್ಷದ ಬಾವುಟ ಕಟ್ಟಲಾಗಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಬಿಎಸ್‍ಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಎರಡು ಕುಟುಂಬ ನಡುವೆ ಜಗಳ ನಡೆಯಿತು. ಈ ವಿಚಾರ ಬಡಾವಣೆಯ ಯಜಮಾನರು ತಿಳಿದು ಕಳೆದ ಭಾನುವಾರ ಪಂಚಾಯಿತಿ ಆಯೋಜಿಸಲು ಉದ್ದೇಶಿಸಲಾಗಿತ್ತು. ಆದರೆ, ಗಲಾಟೆಯ ವಿಷಯ ಅರಿತಿದ್ದ ಪೊಲೀಸರು, ಪಂಚಾಯಿತಿಯನ್ನು ಇಂದಿಗೆ ಮುಂದೂಡಿದ್ದರು ಎನ್ನಲಾಗಿದೆ.

ಪೂರ್ವ ನಿಗದಿಯಂತೆ ಬಡಾವಣೆಯ ದೇವಸ್ಥಾನವೊಂದರಲ್ಲಿ ಯಜಮಾನರು ಹಾಗೂ ಮುಖಂಡರು ಸೇರಿ ಪಂಚಾಯಿತಿ ಆರಂಭಿಸಿದ್ದಾರೆ. ಜಗಳ ನಡೆದ ಎರಡು ಕುಟುಂಬದವರು ಹಾಗೂ ಕಾಂಗ್ರೆಸ್, ಬಿಎಸ್‍ಪಿ ಕಾರ್ಯಕರ್ತರ ಅಹವಾಲು ಆಲಿಸಿದ್ದಾರೆ. ಕೊನೆಗೆ ಕಾಂಗ್ರೆಸ್ ಕಾರ್ಯಕರ್ತರದ್ದು ತಪ್ಪು ಎಂದು ತೀರ್ಮಾನಿಸಿದ ಯಜಮಾನರು ಅವರಿಗೆ ದಂಡ ವಿಧಿಸಿದರು ಎನ್ನಲಾಗಿದೆ.
ಪಂಚಾಯಿತಿ ಮುಗಿದು ಹೊರ ಹೋಗುವಾಗ ಕಾಂಗ್ರೆಸ್ ಹಾಗೂ ಬಿಎಸ್‍ಪಿ ಕಾರ್ಯಕರ್ತರ ನಡುವೆ ಗಲಾಟೆ ಆರಂಭವಾಗಿದೆ. ನಂತರ ಎರಡು ಗುಂಪುಗಳ ನಡುವೆ ಮಾರಾಮಾರಿ, ಕಲ್ಲು ತೂರಾಟ ನಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರೆನ್ನಲಾದ ಐವರು ಹಾಗೂ ಬಿಎಸ್‍ಪಿ ಕಾರ್ಯ ಕರ್ತರೆನ್ನಲಾದ ಮೂವರ ತಲೆಗೆ ಗಾಯಗಳಾಯಿತು. ಎಲ್ಲಾ 8 ಮಂದಿ ಗಾಯಾಳುಗಳನ್ನು ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೀತಾಪ್ರಸನ್ನ, ಡಿವೈಎಸ್‍ಪಿ ಜಯ ಕುಮಾರ್ ರಾಮಸಮುದ್ರ ಬಡಾವಣೆಗೆ ಹಾಗೂ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಹಾಗೂ ರಾಮಸಮುದ್ರ ಬಡಾವಣೆ ಯಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.