ಕಳಪೆ ರಸ್ತೆ ಕಾಮಗಾರಿ: ಸಾರ್ವಜನಿಕರಿಂದ ಪ್ರತಿಭಟನೆ

ಕೆ.ಆರ್.ಪೇಟೆ: ಕಳಪೆ ಗುಣಮಟ್ಟದಿಂದ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ನಡೆಸಲಾಗುತ್ತಿದೆ ಎಂದು ಆರೋಪಿಸಿ ಪಟ್ಟಣದ 8ನೇ ವಾರ್ಡ್‍ನ ನಿವಾಸಿಗಳು ಹಾಗೂ ಸಾರ್ವಜನಿಕರು ಭಾನುವಾರ ಪ್ರತಿಭಟನೆ ನಡೆಸಿದರು.ವಾರ್ಡ್‍ನಲ್ಲಿ ಪ್ರಗತಿಯಲ್ಲಿರುವ ಕಾಮಗಾರಿ ಸ್ಥಳದಲ್ಲಿ ಜಮಾಯಿಸಿದ ವಾರ್ಡ್‍ನ ನಿವಾಸಿಗಳು ಪುರಸಭೆ ಇಂಜಿನಿಯರ್‍ಗಳು ಮತ್ತು ಗುತ್ತಿಗೆದಾರರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಬಡಾವಣೆಯ ನಿವಾಸಿ ಕುಮಾರ್ ಮಾತನಾಡಿ, ಡಾಂಬರು ರಸ್ತೆ ಕಳೆಪೆ ಗುಣಮಟ್ಟದಿಂದ ಕೂಡಿದೆ. ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿಗೆ ತಿಂಗಳ ಹಿಂದೆ ದೂರು ನೀಡಿದ್ದೇವೆ. ಅವರು ಗುಣಮಟ್ಟದ ಕಾಮಗಾರಿ ನಡೆಸಲು ಮುಂದಾಗಿಲ್ಲ. ಅಂದಾಜು ವೆಚ್ಚದಲ್ಲಿ 90ಮೀ. ಬಾಕ್ಸ್‍ಡ್ರೈನ್, 150ಮೀ. ಡಾಂಬರು ರಸ್ತೆಗೆ ಟೆಂಡರ್ ನಡೆದಿದ್ದು, ಟೆಂಡರ್ ಪಟ್ಟಣದ ನಿವಾಸಿ ಗಿರೀಶ್‍ಗೌಡ ಎಂಬು ವರಿಗೆ ಆಗಿದೆ. ಹಲವು ತಿಂಗಳ ಹಿಂದೆ ಬಾಕ್ಸ್ ಡ್ರೈನನ್ನು ಅವೈಜ್ಞಾನಿಕವಾಗಿ ಗುತ್ತಿಗೆದಾರ ನಿರ್ಮಾಣ ಮಾಡಿರು ವುದರಿಂದ ಡ್ರೈನ್‍ಅಲ್ಲಿ ಕಲುಷಿತ ನೀರು ಹೊರ ಹೋಗದೆ ನಿಂತು ಗಬ್ಬುನಾರುತ್ತಿದೆ ಎಂದು ದೂರಿದರು.

ಡ್ರೈನ್‍ಗೆ ಬಳಸಿರುವ ಸಿಮೆಂಟ್ ಕೂಡ ಕಳಪೆಯಾಗಿದೆ. ಇನ್ನೂ ಕಾಮಗಾರಿ ಮುಗಿದಿಲ್ಲ. ಆಗಲೆ ಡ್ರೈನ್ ಕುಸಿಯುವ ಹಂತದಲ್ಲಿದೆ. ಹಿಂದೆ ಇದ್ದ ಮಣ್ಣಿನ ಕಚ್ಚಾ ರಸ್ತೆಗೆ ಒಂದು ಪದರ ಜಲ್ಲಿ ಕಲ್ಲು ಹಾಕಿ ಕಳಪೆ ಗುಣಮಟ್ಟ ದಿಂದ ರಸ್ತೆಯನ್ನು ಅಭಿವೃದ್ಧಿಗೊಳಿಸಿದ್ದರು. ಈಗ ಡಾಂಬರು ಹಾಕಿ ಕೈ ಬಿಟ್ಟಿದ್ದಾರೆ. ಆದರೆ, ಡಾಂಬರು ಹಾಕಿದ ದಿನವೇ ಕಿತ್ತು ಬರುತ್ತಿದೆ ಎಂದು ಕಾಮಗಾರಿ ಕುರಿತು ಅಸಮಾಧಾನ ವ್ಯಕ್ತ ಪಡಿಸಿದರು. ಕಾಮಗಾರಿ ನಡೆಯುತ್ತಿದ್ದರೂ ಸ್ಥಳಕ್ಕೆ ಒಮ್ಮೆಯೂ ಇಂಜಿನಿಯರ್ ಬಂದು ಪರಿಶೀಲನೆ ನಡೆಸಿ ಗುಣಮಟ್ಟ ಕಾಯ್ದುಕೊಳ್ಳುವ ಕೆಲಸವನ್ನು ಮಾಡಿಲ್ಲ. ಗುತ್ತಿಗೆದಾರರ ಜೊತೆ ಇಂಜಿನಿಯರ್ ಶಾಮೀಲಾಗಿ ಕಳಪೆ ಕಾಮಗಾರಿಯನ್ನು ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಈ ಪ್ರಕರಣವನ್ನು ತನಿಖೆ ನಡೆಸಿ ಗುತ್ತಿಗೆದಾರ, ಇಂಜಿನಿಯರ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದರು.

ವಾರ್ಡ್‍ನ ಸದಸ್ಯ ಸಂತೋಷ್ ಮಾತನಾಡಿ, ಕಾಮಗಾರಿಯಲ್ಲಿ ಯಾವುದೇ ರಾಜಿ ಇಲ್ಲ. ಹಲವು ಬಾರಿ ಇಂಜಿನಿಯರ್‍ಗೆ ಕರೆ ಮಾಡಿ ಗುಣಮಟ್ಟದ ಕಾಮಗಾರಿ ಮಾಡಿಸುವಂತೆ ತಿಳಿಸಿದ್ದೇನೆ. ವೈಜ್ಞಾನಿಕವಾಗಿ ಕಾಮಗಾರಿ ನಡೆಯದೆ ಕಳಪೆ ಮಟ್ಟದಾಗಿದ್ದು, ಇಂಜಿನಿಯರ್ ಮತ್ತು ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮಕ್ಕೆ ಹಿರಿಯ ಅಧಿಕಾರಿಗಳನ್ನು ಒತ್ತಾಯಿಸುತ್ತೇನೆ ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ವಾರ್ಡ್‍ನ ನಿವಾಸಿಗಳು ಪಾಲ್ಗೊಂಡಿದ್ದರು.