ಮೈಸೂರು-ಕೊಡಗು ಲೋಕಸಭಾ ಟಿಕೆಟ್ ನನಗೇ ಸಿಗಲಿದೆ

ಮೈಸೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಟಿಕೆಟ್ ನನಗೇ ದೊರೆಯಲಿದ್ದು, ಜನತೆಯ ಶ್ರೀರಕ್ಷೆಯಿಂದ ಪುನರಾಯ್ಕೆಯಾಗುವ ವಿಶ್ವಾಸವನ್ನು ಸಂಸದ ಪ್ರತಾಪ್ ಸಿಂಹ ವ್ಯಕ್ತಪಡಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಪಕ್ಷದ ವರಿಷ್ಠರಾದ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ, ಬಿ.ಎಸ್.ಯಡಿಯೂರಪ್ಪ ಅವರ ಆಶೀರ್ವಾದ ನನ್ನ ಮೇಲಿದ್ದು, ಮತ್ತೆ ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಟಿಕೆಟ್ ನನಗೆ ಲಭ್ಯವಾಗಲಿದೆ. ಜೊತೆಗೆ ಕ್ಷೇತ್ರದ ಜನತೆಯ ಶ್ರೀರಕ್ಷೆಯೂ ನನ್ನ ಮೇಲಿದ್ದು, ಪುನರಾಯ್ಕೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅಚಲ ವಿಶ್ವಾಸ ವ್ಯಕ್ತಪಡಿಸಿದರು.

ಕ್ಷೇತ್ರದ ಅಭಿವೃದ್ಧಿಗೆ ನಾನು ಶ್ರಮಿಸಿದ್ದೇನೆ. ಈ ಕಾರಣಕ್ಕೆ ಕ್ಷೇತ್ರದ ಜನತೆ ನನ್ನ ಪರವಾಗಿದ್ದಾರೆ. ಜನತೆಯ ನಿರೀಕ್ಷೆಗೆ ಅನುಗುಣವಾಗಿ ಕೆಲಸ ಮಾಡಿರುವ ತೃಪ್ತಿ ಇದೆ. ರಾಜ್ಯದಲ್ಲಿ 28 ಮಂದಿ ಸಂಸದರು ಇದ್ದಾರೆ. ಈ ಪೈಕಿ ಯಾರು ಎಷ್ಟು ಅನುದಾನ ತಂದಿದ್ದಾರೆ? ಅದರಲ್ಲಿ ಯಾವ್ಯಾವ ಅಭಿವೃದ್ಧಿ ಕೆಲಸ ಮಾಡಿದ್ದಾರೆ? ಎಂದು ಸಮೀಕ್ಷೆ ನಡೆಸಲಿ. ಆಗ ನಾನು ಯಾವ ಸ್ಥಾನದಲ್ಲಿರುತ್ತೇನೆ ಎಂದು ನೋಡಿ ಎಂದು ಸವಾಲು ಹಾಕಿದರು.

ಮೈಸೂರು-ಬೆಂಗಳೂರು ನಡುವೆ ಜೋಡಿ ರೈಲ್ವೆ ಹಳಿ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿದ್ದೇನೆ. ಮೈಸೂರಿಗೆ 11 ಸಾವಿರ ಕೋಟಿ ಅನುದಾನ ತಂದಿದ್ದು, ಇಎಸ್‍ಐ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಮೈಸೂರು-ಬೆಂಗಳೂರು 10 ಪಥದ ರಸ್ತೆ, ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣದ ರನ್‍ವೇ ವಿಸ್ತರಣಾ ಕಾಮಗಾರಿ
ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದೇನೆ. ನಿರಂತರವಾಗಿ ಅಭಿವೃದ್ಧಿಯತ್ತ ಗಮನ ಹರಿಸುತ್ತಿದ್ದು, ಜನತೆಯ ನಾಡಿಮಿಡಿತ ಅರಿತು ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.

ಸೆಪ್ಟೆಂಬರ್‌ನಲ್ಲಿ ಇಎಸ್‍ಐ ನೂತನ ಕಟ್ಟಡ ಉದ್ಘಾಟನೆ: ಕೆಆರ್‌ಎಸ್‌ ರಸ್ತೆಯಲ್ಲಿರುವ ಇಎಸ್‍ಐ ಆಸ್ಪತ್ರೆಯ ನೂತನ ಕಟ್ಟಡದ ಉದ್ಘಾಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಿಂಹ, ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕಾಮಗಾರಿ ಪೂರ್ಣಗೊಂಡರು ಉದ್ಘಾ ಟನೆ ನೆರವೇರಿಸಲು ಸಾಧ್ಯವಾಗಿರಲಿಲ್ಲ. ಆ ಬಳಿಕ ಪರಿಷತ್ ಚುನಾವಣೆ ನೀತಿ ಸಂಹಿತೆ ಜಾರಿಯಾಯಿತು. ಇದೀಗ ಮೈಸೂರು ಮಹಾನಗರ ಪಾಲಿಕೆ ಚುನಾವಣೆ ನೀತಿ ಸಂಹಿತೆ ಇರುವ ಹಿನ್ನೆಲೆ ಉದ್ಘಾಟನೆಗೆ ಕಾಲ ಕೂಡಿ ಬಂದಿರಲಿಲ್ಲ. ಸೆಪ್ಟೆಂಬರ್‌ನಲ್ಲಿ ನೂತನ ಕಟ್ಟಡ ಉದ್ಘಾಟನೆಗೊಂಡು ಸೇವೆಗಳು ದೊರೆಯಲಿವೆ ಎಂದು ತಿಳಿಸಿದರು.

ರಾಜಕೀಯದಲ್ಲಿ ಆಸಕ್ತಿ ಇಲ್ಲವೆಂದಿದ್ದಾರೆ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಟಿಕೆಟ್ ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ನೀಡಲಾಗುತ್ತದೆ ಎಂಬ ಸುದ್ದಿಯಿದೆ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಂಹ, ಯದುವೀರ್ ಅವರು ರಾಜಕೀಯ ನನಗೆ ಆಸಕ್ತಿ ಇಲ್ಲ ಎಂದು ಅನೇಕ ಬಾರಿ ಅವರೇ ಹೇಳಿಕೊಂಡಿದ್ದಾರೆ. ಇದೆಲ್ಲಾ ಕೇವಲ ಊಹಾಪೋಹಗಳು ಎಂದ ಅವರು, 2014ರ ಲೋಕಸಭಾ ಚುನಾವಣೆ ವೇಳೆಯಲ್ಲಿ ಮಾರ್ಚ್ 13ರಂದು ನನಗೆ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡಲಾಯಿತು. ಮಾರನೇ ದಿನವಾದ ಮಾರ್ಚ್ 14ರಂದು ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದುಕೊಂಡೆ. ಈ ಬಾರಿಯೂ ನನಗೆ ಟಿಕೆಟ್ ನೀಡುವಲ್ಲಿ ಯಾವುದೇ ಸಂದೇಹವಿಲ್ಲ ಎಂದು ನುಡಿದರು.

ಅಂಬೇಡ್ಕರ್ ಬಗ್ಗೆ ಅಪಾರ ಗೌರವವಿದೆ: ನವದೆಹಲಿಯ ಜಂತರ್-ಮಂತರ್ ಮೈದಾನದಲ್ಲಿ ಕಿಡಿಗೇಡಿಗಳು ಸಂವಿಧಾನದ ಪ್ರತಿ ಸುಟ್ಟು ಹಾಕಿರುವ ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿದ ಸಂಸದ ಪ್ರತಾಪ್ ಸಿಂಹ, ದುಷ್ಕರ್ಮಿಗಳು ಈ ಕೃತ್ಯ ಖಂಡನಾರ್ಹ ಎಂದರಲ್ಲದೆ, ಪ್ರಧಾನಿ ಮೋದಿಯವರಿಗೆ ಅಂಬೇಡ್ಕರ್ ಅವರ ಬಗ್ಗೆ ಅಪಾರ ಗೌರವವಿದೆ.