ಹೆಚ್.ಡಿ.ಕೋಟೆಯಲ್ಲಿ ಸರ್ವ ಸಮುದಾಯದಿಂದ ಶ್ರದ್ಧಾಂಜಲಿ

ಹೆಚ್.ಡಿ.ಕೋಟೆ: ಪಟ್ಟಣದ ಬಾಪೂಜಿ ವೃತ್ತದಲ್ಲಿ ಸರ್ವ ಸಮುದಾಯದಿಂದ ಸಿದ್ಧಗಂಗಾ ಶ್ರೀಗಳಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಸಭೆಯಲ್ಲಿ ಮಾತನಾಡಿದ ವಿರಕ್ತ ಮಠದ ಶ್ರೀ ಮಹದೇಶ್ವರ ಸ್ವಾಮೀಜಿ, ಸಾರ್ವಜನಿಕರ ಸೇವೆಗಾಗಿ ದುಡಿದವರಲ್ಲಿ ಸಿದ್ಧಗಂಗಾ ಶ್ರೀಗಳು ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅದರಲ್ಲೂ ಗ್ರಾಮೀಣಾ ಪ್ರದೇಶದ ಮಕ್ಕಳಿಗೆ ಶಿಕ್ಷಣ ಮತ್ತು ಏಳಿಗೆಗಾಗಿ ಅಪಾರವಾಗಿ ಶ್ರಮಿಸಿದರು. ದಾಸೋಹದ ನಿಟ್ಟಿನಲ್ಲಿ ಕ್ರಾಂತಿಯನ್ನೇ ಉಂಟು ಮಾಡಿದರು ಎಂದು ಸ್ಮರಿಸಿದರು.

ಹಂಚೀಪುರ ಮಠದ ಚೆನ್ನಬಸವಸ್ವಾಮೀಜಿ ಮಾತನಾಡಿ, ಶ್ರೀಗಳು ನಡೆದ ದಾರಿಯಲ್ಲಿ ಪ್ರತಿಯೊಬ್ಬರೂ ಸಾಗಬೇಕು. ಹಾಗಾದಲ್ಲಿ ಸಮಾಜ ಬೆಳವಣಿಗೆ ಸಾಧ್ಯ ಎಂದರು.
ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ಸಿದ್ಧಗಂಗಾ ಶ್ರೀಗಳ ಅಗಲಿಕೆಯಿಂದ ದೇಶವೇ ದುಃಖದಲ್ಲಿ ಮುಳುಗಿದೆ. ಸಮಾಜಕ್ಕೆ ಸಿದ್ದಗಂಗ ಮಠದ ಶ್ರೀಗಳ ಕೊಡುಗೆ ಶ್ಲಾಘನೀಯ ಎಂದರು.

ಕಾವೇರಿ ಗ್ರಾಮೀಣಾ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ಶಿವಕುಮಾರ್, ಕಸಾಪ ತಾಲೂಕು ಘಟಕದ ಅಧ್ಯಕ್ಷ ಕನ್ನಡ ಪ್ರಮೋದ್, ಜಿಪಂ ಸದಸ್ಯ ವೆಂಕಟಸ್ವಾಮಿ, ಮಾಜಿ ಸದಸ್ಯರಾದ ಎಚ್.ಸಿ.ಶಿವಣ್ಣ, ರುದ್ರಪ್ಪ, ಚಿಕ್ಕವೀರನಾಯಕ, ಪುರಸಭೆ ಸದಸ್ಯರಾದ ಎಚ್.ಸಿ.ನರಸಿಂಹಮೂರ್ತಿ, ಮಧುಕುಮಾರ್, ಮಿಲ್ ನಾಗರಾಜು, ನಂಜಪ್ಪ, ವೀರಶೈವ ಸಮಾಜದ ಅಧ್ಯಕ್ಷ ಬಿ.ವಿ.ಬಸವರಾಜಪ್ಪ, ವಕೀಲರಾದ ಸಂಗಮೇಶ್ವರ್, ತಿಮ್ಮೇಗೌಡ, ಯೋಗೇಶ್, ಜಯಂತ್, ವಿನಯ್ ಇತರರಿದ್ದರು.