ಮೈತ್ರಿ ಸರ್ಕಾರ ಉರುಳಿಸಲು ಜಾರಕಿಹೊಳಿ ಸಹೋದರರ ಸಿದ್ಧತೆ

ಬೆಂಗಳೂರು: ಗೌರಿ-ಗಣೇಶ ಹಬ್ಬದ ನಂತರ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಳ್ಳುವ ಸ್ಪಷ್ಟ ಸೂಚನೆಗಳು ರಾಜ್ಯ ರಾಜಕೀಯ ವಲಯದಲ್ಲಿ ಕಂಡುಬರುತ್ತಿವೆ. ಜಾರಕಿಹೊಳಿ ಸಹೋದರರು ಸುಮಾರು 16 ಶಾಸಕರೊಂದಿಗೆ ಬಿಜೆಪಿ ಸೇರ್ಪಡೆಗೊಳ್ಳುವ ಮೂಲಕ ಮೈತ್ರಿ ಸರ್ಕಾರವನ್ನು ಉರುಳಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇದಕ್ಕೆ ಪೂರಕವೆಂಬಂತೆ ಬಿಜೆಪಿ ಶಾಸಕ ಶ್ರೀರಾಮುಲು ಅವರು ಸಚಿವ ರಮೇಶ್ ಜಾರಕಿಹೊಳಿ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್‍ನಲ್ಲಿರುವ ಕನಿಷ್ಠ 14 ಶಾಸಕರನ್ನು ಬಿಜೆಪಿಗೆ ಕರೆತರುವ ಹೊಣೆಗಾರಿಕೆಯನ್ನು ರಮೇಶ್ ಜಾರಕಿಹೊಳಿ ಅವರಿಗೆ ನೀಡಲಾಗಿದೆ. ಹಾಗೇನಾದರೂ ಆದಲ್ಲಿ ಸತೀಶ್ ಜಾರಕಿಹೊಳಿ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ, ರಮೇಶ್ ಜಾರಕಿ ಹೊಳಿ ಅವರಿಗೆ ಜಲಸಂಪನ್ಮೂಲ ಖಾತೆ ಹಾಗೂ ಬಿಜೆಪಿ ಸೇರ್ಪಡೆಯಾಗುವ ಶಾಸಕರಿಗೆ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ನೀಡುವ ಭರವಸೆ ನೀಡಲಾಗಿದೆಯಂತೆ.

ಬೆಳಗಾವಿಯ ಪಿಎಲ್‍ಡಿ ಬ್ಯಾಂಕ್ ಚುನಾವಣೆಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮೇಲುಗೈ ಸಾಧಿಸಿದ್ದರಿಂದ ಅವಮಾನಿತ ರಾದ ಜಾರಕಿಹೊಳಿ ಸಹೋದರರು ಕಾಂಗ್ರೆಸ್‍ಗೆ ಸೆಡ್ಡು ಹೊಡೆದು ಸರ್ಕಾರವನ್ನೇ ಉರುಳಿಸುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗಿದೆ. ಪಿಎಲ್‍ಡಿ ಬ್ಯಾಂಕ್ ಚುನಾವಣೆ ನಂತರ ಕಾಂಗ್ರೆಸ್ ನಾಯಕರ ಸಂಪರ್ಕಕ್ಕೆ ಸಿಗದ ರಮೇಶ್ ಜಾರಕಿ ಹೊಳಿ, ಶ್ರೀರಾಮುಲು ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಂಪರ್ಕದಲ್ಲಿದ್ದು, ರಾಜಕೀಯ ದಾಳ ಉರುಳಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಶ್ರೀರಾಮುಲು ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗುತ್ತದೆ ಎಂಬ ಮಾತು ಗಳು ಬಹಿರಂಗವಾಗಿಯೇ ಕೇಳಿಬರುತ್ತಿದ್ದವು. ಆದರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದರಿಂದ ಶ್ರೀರಾಮುಲು ಉಪ ಮುಖ್ಯಮಂತ್ರಿ ಸ್ಥಾನದಿಂದ ವಂಚಿತರಾಗಬೇಕಾಯಿತು. ಆದರೆ ಈಗ ಅವರು ಬಿಜೆಪಿ ಸರ್ಕಾರವನ್ನು ಅಸ್ತಿತ್ವಕ್ಕೆ ತರುವ ನಿಟ್ಟಿನಲ್ಲಿ ತಮ್ಮ ಉಪ ಮುಖ್ಯಮಂತ್ರಿ ಸ್ಥಾನದ ಕನಸನ್ನು ಬದಿಗೊತ್ತಿ ದ್ದಾರೆ. ತಮ್ಮ ಬದಲಾಗಿ ಸತೀಶ್ ಜಾರಕಿ ಹೊಳಿ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ಧಾರೆಯೆರೆಯಲು ಒಪ್ಪಿದ್ದಾರೆ. ಈ ನಿಟ್ಟಿನಲ್ಲಿ ಅವರೇ ಜಾರಕಿ ಹೊಳಿ ಸಹೋದರರ ಜೊತೆ ವ್ಯವಹರಿ ಸುತ್ತಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಸತೀಶ್ ಜಾರಕಿಹೊಳಿ ಅವರಿಗೆ ಸ್ಥಾನಮಾನ ನೀಡದೇ ಇರುವುದು ಜೊತೆಗೆ ಬೆಳಗಾವಿಯಲ್ಲಿ ಜಾರಕಿ ಹೊಳಿ ಸಹೋದರರಿಗೆ ಪರ್ಯಾಯವಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಬೆಳೆಸಿ ಈ ಸಹೋದರರ ಬಲವನ್ನು ಕುಂದಿಸುವ ಕೆಲಸ ನಡೆಯುತ್ತಿದೆ ಎಂಬ ವಿಚಾರದ ಬಗ್ಗೆ ಚರ್ಚೆ ನಡೆಸಿರುವ ಶ್ರೀರಾಮುಲು, ಈವರೆವಿಗೂ ವಾಲ್ಮೀಕಿ ಸಮಾಜದವರು ರಾಜಕೀಯವಾಗಿ ಉನ್ನತ ಸ್ಥಾನವನ್ನು ಪಡೆದಿಲ್ಲ. ಈಗ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಉಪ ಮುಖ್ಯಮಂತ್ರಿ ಸ್ಥಾನವನ್ನು ಪಡೆಯಬಹುದು. ಆ ಸ್ಥಾನವನ್ನು ತಾನು ತ್ಯಾಗ ಮಾಡುತ್ತಿದ್ದು, ಸತೀಶ್ ಜಾರಕಿ ಹೊಳಿ ಅವರಿಗೆ ನೀಡಲು ಸಿದ್ಧವಿರುವುದಾಗಿಯೂ ರಮೇಶ್ ಜಾರಕಿ ಹೊಳಿ ಜೊತೆ ತಿಳಿಸಿದ್ದಾರೆ ಎನ್ನಲಾಗಿದೆ.

ಪಿಎಲ್‍ಡಿ ಬ್ಯಾಂಕ್ ವಿಷಯದಲ್ಲಿ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಹರಿಹಾಯ್ದಿದ್ದ ರಮೇಶ್ ಜಾರಕಿ ಹೊಳಿ ತಮ್ಮ ಸಹೋದರ ಸತೀಶ್‍ಗೆ ಅವಮಾನವಾದರೆ ಕಠಿಣ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಬಹಿರಂಗವಾಗಿ ಎಚ್ಚರಿಕೆ ನೀಡಿದ್ದರು. ಇಂದೂ ಕೂಡ ಸತೀಶ್ ಜಾರಕಿ ಹೊಳಿ ಅವರು ಡಿ.ಕೆ.ಶಿವಕುಮಾರ್ ವಿರುದ್ಧ ಹರಿಹಾಯ್ದಿದ್ದಾರೆ. ಈಗಾಗಲೇ ರಮೇಶ್ ಜಾರಕಿ ಹೊಳಿ ತಮ್ಮ ಬೆಂಬಲಿತ 14 ಶಾಸಕರೊಂದಿಗೆ ಮಾತುಕತೆ ನಡೆಸಿ ಸೂಕ್ತ ರಾಜಕೀಯ ನಿರ್ಧಾರ ಕೈಗೊಳ್ಳಲು ಪೂರಕ ವಾತಾವರಣವನ್ನು ನಿರ್ಮಿಸಿದ್ದಾರೆ ಎಂದು ಹೇಳಲಾಗಿದೆ. ಅವರು ಬಳ್ಳಾರಿಗೆ ತೆರಳಿ ಶಾಸಕ ನಾಗೇಂದ್ರ ಅವರ ಜೊತೆಯೂ ಚರ್ಚೆ ನಡೆಸಿದ್ದಾರೆ. ಇದೇ 16ರಂದು ಜಾರಕಿ ಹೊಳಿ ಸಹೋದರರು ಸೂಕ್ತ ರಾಜಕೀಯ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗಿದ್ದು, ಅವರು 14 ಶಾಸಕರೊಂದಿಗೆ ಬಿಜೆಪಿ ಸೇರುವುದೇ ಆ ನಿರ್ಧಾರವಾಗಲಿದೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ.

ಜಾರಕಿ ಹೊಳಿ ಸಹೋದರರ ಈ ರಾಜಕೀಯ ಹೆಜ್ಜೆಯನ್ನು ಕಾಂಗ್ರೆಸ್ ನಾಯಕರು ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪಷ್ಟವಾಗಿ ನಿರಾಕರಿಸುತ್ತಿದ್ದಾರೆ. ಆದರೆ ಬಿಜೆಪಿಯ 5 ಶಾಸಕರನ್ನು ಸೆಳೆಯುತ್ತೇವೆ ಎಂದು ಮಂಡ್ಯದಲ್ಲಿ ಸಿ.ಎಂ.ಕುಮಾರಸ್ವಾಮಿ ಹೇಳಿರುವುದು ಹಾಗೂ ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೀಡಿರುವ ಹೇಳಿಕೆಗಳು ಮೈತ್ರಿ ಸರ್ಕಾರ ಇಕ್ಕಟ್ಟಿನಲ್ಲಿದೆ. ಸರ್ಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಮತ್ತು ಜೆಡಿಎಸ್ ಕೂಡ ಪ್ರತಿತಂತ್ರ ಹೂಡುತ್ತಿದೆ ಎಂಬುದನ್ನು ಎತ್ತಿ ತೋರಿಸುತ್ತಿದೆ.