ಪಾರಂಪರಿಕ ಅಂಚೆ ಬಸಪ್ಪ, ಅಶ್ವದಳದ ಅಧಿಕಾರಿ ಭುಜಂಗರಾವ್ ಪ್ರತಿಮೆಗಳ ಸ್ಥಳಾಂತರಕ್ಕೆ ಸಿದ್ಧತೆ

ಮೈಸೂರು: ಶತ ಮಾನದಷ್ಟು ಹಳೆಯದಾದ ಮೈಸೂರು ಸಂಸ್ಥಾನದ ಅಂದಿನ ಅಂಚೆ ವಿತರಕ ಬಸಪ್ಪ ಹಾಗೂ ಅಶ್ವದಳದ ಅಧಿಕಾರಿ ಭುಜಂಗರಾವ್ ಪ್ರತಿಮೆಗಳ ಸ್ಥಳಾಂತರ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಪರಂ ಪರೆ ಸಮಿತಿಯ ಸದಸ್ಯ ಪ್ರೊ.ರಂಗರಾಜು ನೇತೃತ್ವದ ತಂಡ ಸೋಮವಾರ ಸಂಜೆ ಸ್ಥಳ ಪರಿಶೀಲಿಸಿತು.

ಮೈಸೂರು ರೇಸ್‍ಕೋರ್ಸ್ ರಸ್ತೆಯ ಕರ್ನಾಟಕ ಸಶಸ್ತ್ರ ಮೀಸಲು ಪೊಲೀಸ್‍ನ (ಕೆಎಸ್‍ಆರ್‍ಪಿ) ಅಶ್ವಾರೋಹಿ ದಳದ ಪ್ರವೇಶ ದ್ವಾರದ ಮುಂಭಾಗದಲ್ಲಿ ಬಲ ಭಾಗದಲ್ಲಿ ಬಸಪ್ಪರ ಪ್ರತಿಮೆ ಹಾಗೂ ಎಡಭಾಗದಲ್ಲಿ ಭುಜರಂಗರಾವ್ ಪ್ರತಿಮೆ ಗಳಿದ್ದು, ಇವೆರಡು ಪ್ರತಿಮೆಗಳನ್ನು ಸುಮಾರು ಐದು ಅಡಿ ಹಿಂದಕ್ಕೆ ಸ್ಥಳಾಂತರ ಮಾಡಲು ಪ್ರಾಚ್ಯವಸ್ತು, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಕೈಗೆತ್ತಿಕೊಂಡಿ ರುವ ಕಾಮಗಾರಿ ಪೂರ್ಣಗೊಂಡಿದ್ದು, ಜಿಲ್ಲಾ ಪರಂಪರೆ ಸಮಿತಿ ಸದಸ್ಯರ ಸಲಹೆ ಮೇರೆಗೆ ಪ್ರತಿಮೆಗಳ ಸ್ಥಳಾಂತರ ಕಾರ್ಯ ಆರಂಭಿಸುವ ಮೊದಲು, ಪ್ರತಿಮೆಗಳ ಪ್ಯಾಕಿಂಗ್ ಕಾರ್ಯ ನಾಳೆ(ಏ.23)ಯಿಂದ ಆರಂಭವಾಗಲಿದೆ ಎಂದು ಪ್ರೊ.ರಂಗರಾಜು `ಮೈಸೂರು ಮಿತ್ರ’ನಿಗೆ ತಿಳಿಸಿದರು.

ಅಶ್ವಾರೋಹಿ ದಳದ ಒಳಾವರಣದಲ್ಲಿ ನಿರ್ಮಿಸಿರುವ ಪ್ಲಾಟ್ ಫಾರಂಗೆ ಸ್ಥಳಾಂ ತರವಾಗುವ ಶತಮಾನದಷ್ಟು ಹಳೆಯ ದಾದ ಪ್ರತಿಮೆಗಳನ್ನು ಸುರಕ್ಷಿತವಾಗಿ ಸಾಗಿಸಲು ಹುಲ್ಲು, ಥರ್ಮ್‍ಕೋಲ್, ಗೋಣಿಚೀಲ ಸೇರಿದಂತೆ ಇತರೆ ಸಾಮಾಗ್ರಿ ಗಳನ್ನು ಬಳಸಿ, ತಜ್ಞರ ಸಮ್ಮುಖದಲ್ಲೇ ಪ್ಯಾಕಿಂಗ್ ಮಾಡಲಾಗುವುದು. ನಂತರ ಮಾನವಸಂಪನ್ಮೂಲ ಬಳಸಿ ಪ್ರತಿಮೆ ಗಳನ್ನು ಸಾಗಿಸಲಾಗುತ್ತದೆ. ಇವೆರಡು ಪ್ರತಿಮೆಗಳನ್ನು ಸುಣ್ಣ, ಮರಳು ಹಾಗೂ ನೀರು ಮಿಶ್ರಣದೊಂದಿಗೆ `ಲೈಮ್ ಪ್ಲಾಸ್ಟರ್’ ವಿಧಾನದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪರಂಪರೆ ಸಮಿತಿಯ ಸದಸ್ಯ ರಾದ ನಾಗೇಶ್, ಅಶೋಕ್, ಚಂಪಾ ಅರಸ್, ಎ.ವಿ.ದೇಶಪಾಂಡೆ, ಸುದೀಂದ್ರ ಒಂಭತ್ಕೆರೆ ಇವರ ಸಮ್ಮುಖದಲ್ಲಿ ಪ್ಯಾಕಿಂಗ್ ಕಾರ್ಯ ನಡೆಯಲಿದ್ದು, ಈ ಕಾರ್ಯ ಪೂರ್ಣಗೊಂಡ ನಂತರ ಇನ್ನೂ 15 ದಿನದೊಳಗೆ ಸ್ಥಳಾಂತರಿಸಲಾಗುವುದು ಎಂದು ಮಾಹಿತಿ ನೀಡಿದರು. ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಪರಂಪರೆ ಇಲಾಖೆಯ ಎಸಿಎ ಕೆ.ಎಂ.ಕುಬೇರಪ್ಪ ಸೇರಿದಂತೆ ಇತರರಿದ್ದರು.

ಶ್ರೀಲಂಕಾ ಸ್ಫೋಟದಲ್ಲಿ ಬಲಿಯಾದವರಿಗೆ ಶ್ರದ್ಧಾಂಜಲಿ
ಮೈಸೂರು: ಶ್ರೀಲಂಕಾದ ಕೊಲಂಬೋ ದಲ್ಲಿ ಉಗ್ರರ ಬಾಂಬ್ ದಾಳಿಗೆ 290ಕ್ಕೂ ಹೆಚ್ಚು ಮಂದಿಯ ಆತ್ಮಕ್ಕೆ ಶಾಂತಿ ಕೋರಿ, ಜೆಡಿಎಸ್ ಕಾರ್ಯಕರ್ತರು ಮೈಸೂರು ಜಿಲ್ಲಾ ನ್ಯಾಯಾಲಯದ ಎದುರಿನ ಮಹಾತ್ಮಗಾಂಧೀಜಿ ಪ್ರತಿಮೆ ಬಳಿ ಸೋಮವಾರ ಸಂಜೆ ಮೊಂಬತ್ತಿ ಹಚ್ಚಿ ಪ್ರಾರ್ಥಿಸಿದರು.

ಜೆಡಿಎಸ್ ಮುಖಂಡ ಅಜಯ್‍ಶಾಸ್ತ್ರಿ ನೇತೃತ್ವದಲ್ಲಿ ಗಾಂಧಿ ಪ್ರತಿಮೆ ಬಳಿ ಕಾರ್ಯಕರ್ತರು, ಶ್ರೀಲಂಕಾದಲ್ಲಿ ಉಗ್ರರ ಬಾಂಬ್ ದಾಳಿಗೆ ರಾಜ್ಯದ 8 ಮಂದಿ ಸೇರಿದಂತೆ 290ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡವರ ಆತ್ಮಕ್ಕೆ ಶಾಂತಿ ಕೋರಿದರು. ನಂತರ ಉಗ್ರರ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿ, ಘಟನೆಯನ್ನು ತೀವ್ರವಾಗಿ ಖಂಡಿಸಿದರು.

ನಂತರ ಮಾತಾಡಿದ ಅವರು, ಪ್ರಪಂಚದಲ್ಲಿ ಭಯೋತ್ಪಾದನೆ ಹೆಚ್ಚಾಗುತ್ತಿದ್ದು, ಇದನ್ನು ಬೇರು ಸಮೇತ ಕಿತ್ತು ಹಾಕಲು ವಿಶ್ವಸಂಸ್ಥೆ ಉಗ್ರರ ವಿರುದ್ಧ ಕಠಿಣ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರಲ್ಲದೆ, ಶ್ರೀಲಂಕಾದಲ್ಲಿ ಉಗ್ರರ ದಾಳಿಗೆ ತುತ್ತಾದವರಲ್ಲಿ ಜೆಡಿಎಸ್ ಮುಖಂಡರು ಸೇರಿದಂತೆ ರಾಜ್ಯದ 8 ಮಂದಿ ಮಂದಿ ಸಾರ್ವಜನಿಕರು ಸೇರಿದ್ದಾರೆ. ಇವರ ನೆರವಿಗೆ ಭಾರತ ಸರ್ಕಾರ ಸಂಪೂರ್ಣ ನೆರವು ನೀಡುವಂತೆ ಒತ್ತಾಯಿಸಿದರು. ಕೃಷ್ಣ ರಾಜ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಯುವ ಘಟಕ ಮುಖಂಡ ರಾದ ಗಿರೀಶ್‍ಗೌಡ, ಪ್ರಕಾಶ್ ಪ್ರಿಯ ದರ್ಶನ್, ಬೋರೇಗೌಡ, ಸತೀಶ್ ಗೌಡ, ರಮೇಶ್, ರಾಧಕೃಷ್ಣ, ಯದುನಂದನ್, ಶ್ರೀಕಾಂತ್ ಕಶ್ಯಪ್, ಶಿವಕುಮಾರ್, ದೀಪಕ್, ವಿಘ್ನೇಶ್, ರಮೇಶ್ ಮುಂತಾದವರಿದ್ದರು.