ಖಾಸಗಿ ಬಸ್-ಪಿಕಪ್ ವಾಹನ ಮುಖಾಮುಖಿ ಡಿಕ್ಕಿ: 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

ಚಾಮರಾಜನಗರ: ಖಾಸಗಿ ಬಸ್ ಮತ್ತು ಪಿಕಪ್ ವಾಹನ ಮುಖಾ ಮುಖಿ ಡಿಕ್ಕಿ ಹೊಡೆದ ಪರಿಣಾಮ 15ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡ ಘಟನೆ ತಾಲೂಕಿನ ಹೊಂಗನೂರು ಗ್ರಾಮ ಸಮೀಪ ಇಂದು ಮಧ್ಯಾಹ್ನ ಸಂಭವಿಸಿದೆ.

ಚಾಮರಾಜನಗರದಿಂದ ಕಾಗಲವಾಡಿ, ಹೊಂಗನೂರು, ಇರಸವಾಡಿ ಮಾರ್ಗವಾಗಿ ಯಳಂದೂರಿಗೆ ತೆರಳುತ್ತಿದ್ದ ಖಾಸಗಿ ಬಸ್, ವಿರುದ್ಧ ದಿಕ್ಕಿನಲ್ಲಿ ಬಾಳೆಕಾಯಿ ತುಂಬಿಕೊಂಡು ಬರುತ್ತಿದ್ದ ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದಿದೆ.

ಈ ಅಪಘಾತದಲ್ಲಿ ಎರಡೂ ವಾಹನಗಳೂ ಚಾಲಕರ ನಿಯಂತ್ರಣ ತಪ್ಪಿ ರಸ್ತೆ ಬದಿ ಜಮೀನಿಗೆ ನುಗ್ಗಿ ನಿಂತಿದ್ದವು. ಅಪಘಾತದಲ್ಲಿ ಬಸ್‍ನಲ್ಲಿದ್ದ 15ಕ್ಕೂ ಹೆಚ್ಚು ಪ್ರಯಾ ಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ವಿಷಯ ತಿಳಿಯುತ್ತಿದ್ದಂತೆಯೇ ಡಿವೈಎಸ್ಪಿ ಜಯ ಕುಮಾರ್, ಸರ್ಕಲ್ ಇನ್ಸ್‍ಪೆಕ್ಟರ್ ರಾಜೇಂದ್ರ, ಚಾಮರಾಜನಗರ ಪೂರ್ವ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಪುಟ್ಟಸ್ವಾಮಿ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ಗ್ರಾಮಸ್ಥರ ಸಹಕಾರದೊಂದಿಗೆ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಿದರು. ಈ ಸಂಬಂಧ ಚಾಮ ರಾಜನಗರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.