ಆಸ್ತಿ ವಿವಾದ: ವ್ಯಕ್ತಿ ಆತ್ಮಹತ್ಯೆ

ಮೈಸೂರು: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲವಾಲ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ. ಗ್ರಾಮದ ಶಿವೇ ಗೌಡರ ಪುತ್ರ ವೈ.ಎಸ್.ವಿಷಕಂಠ (53) ಆತ್ಮಹತ್ಮೆ ಮಾಡಿಕೊಂಡವರು. ಮೂಲತಃ ಇಲವಾಲದವರಾದ ವಿಷಕಂಠ, ಹಾಲಿ ಮೈಸೂರಿನ ವಾಣಿ ವಿಲಾಸ ಬಡಾವಣೆಯ ನಿವಾಸಿ. ದಾಯಾದಿಗಳೊಂದಿಗೆ ಆಸ್ತಿಗೆ ಸಂಬಂಧಿಸಿದಂತೆ ವ್ಯಾಜ್ಯ ಏರ್ಪಟ್ಟಿದ್ದ ಹಿನ್ನೆಲೆಯಲ್ಲಿ ಸ್ವಗ್ರಾಮಕ್ಕೆ ತೆರಳಿದ್ದ ವಿಷಕಂಠ, ಶನಿವಾರ ರಾತ್ರಿ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಭಾನುವಾರ ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ. ಆಸ್ತಿಗೆ ಸಂಬಂಧಿಸಿದಂತೆ ತಮ್ಮ ಚಿಕ್ಕಪ್ಪ ಮತ್ತು ಅವರ ಮಕ್ಕಳೊಂದಿಗೆ ವಿಷಕಂಠ ಮನಸ್ತಾಪ ಹೊಂದಿದ್ದರು. ಚಿಕ್ಕಪ್ಪ ಮತ್ತವರ ಮಕ್ಕಳು ತಮ್ಮ ಆಸ್ತಿಯೊಂದಿಗೆ ವಿಷಕಂಠರಿಗೆ ಸೇರಿದ ಆಸ್ತಿಯನ್ನೂ ಮಾರಾಟ ಮಾಡಲು ಯತ್ನಿಸಿದ್ದರು ಎನ್ನಲಾಗಿದೆ. ತಮ್ಮ ಸಾವಿಗೆ ಚಿಕ್ಕಪ್ಪ ಹಾಗೂ ಅವರ ಮಕ್ಕಳೇ ಕಾರಣ ಎಂದು ಡೆತ್ ನೋಟ್ ಬರೆದು ವಿಷಕಂಠ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸ್ಥಳಕ್ಕೆ ಧಾವಿಸಿದ ಇಲವಾಲ ಪೊಲೀಸರು ಮಹಜರು ನಡೆಸಿ, ಮೈಸೂರು ವೈದ್ಯ ಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಂತರ ಶವವನ್ನು ವಾರಸುದಾರರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಇಲವಾಲ ಪೊಲೀಸರು, ವಿಚಾರಣೆ ಮುಂದುವರೆಸಿದ್ದಾರೆ. ಮೃತ ವಿಷಕಂಠ ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ.