ಹೊಂಡ ಬಿದ್ದ ರಸ್ತೆಯಲ್ಲಿ ಅಣಕು ಪ್ರದರ್ಶನದ ಮೂಲಕ ಪ್ರತಿಭಟನೆ

ಮೈಸೂರು: ಸ್ಥಳೀಯ ನಾಗರಿಕರಿಂದ ನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಅಗ್ರಹಾರ ವೃತ್ತದ ಮಾರ್ಗದಿಂದ ಜೆಎಸ್‍ಎಸ್ ಆಸ್ಪತ್ರೆ ಕಡೆ ಹೋಗುವ ದಾರಿಯ ಮಧ್ಯದಲ್ಲಿರುವ ಎಂಜಿ ರಸ್ತೆಯಲ್ಲಿ ಬಿದ್ದಿರುವ ದೊಡ್ಡ ಗುಂಡಿಯಲ್ಲಿ ಕಲ್ಲು ಮಣ್ಣು ಸುರಿದು, ಗಿಡ ನೆಟ್ಟು ಅಣಕು ಪ್ರದರ್ಶನ ಮಾಡಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಸ್ಥಳೀಯ ನಿವಾಸಿ ಲಕ್ಷ್ಮಣ್, ಮಹಾನಗರ ಪಾಲಿಕೆಯ ವತಿಯಿಂದ ಕುಡಿಯುವ ನೀರಿನ ಪೈಪ್ ಕಾಮಗಾರಿ ನಡೆಸಿ ನಂತರ ಗುಂಡಿಯನ್ನು ಸರಿಯಾಗಿ ಮುಚ್ಚದೇ ಇರುವುದರಿಂದ ವಾಹನ ಸವಾರರಿಗೆ ಬಹಳ ತೊಂದರೆಯಾಗುತ್ತಿದ್ದು, ಈಗಾಗಲೇ ಒಂದು ತಿಂಗಳ ಹಿಂದಿನ ನಗರ ಪಾಲಿಕೆಗೆ ಹಲವು ಬಾರಿ ದೂರನ್ನು ಕೊಟ್ಟರೂ ನಗರಪಾಲಿಕೆ ಅಧಿಕಾರಿಗಳು ಕಿವಿ ಕೊಡದೆ ನಿರ್ಲಕ್ಷಿಸುತ್ತಿರುವುದು ಖಂಡನೀಯ. ಹಲವು ಅಪಘಾತಗಳಾಗಿದ್ದು, ಜೆಎಸ್‍ಎಸ್ ತುರ್ತು ಅಪ ಘಾತ ಘಟಕಕ್ಕೆ ಆಗಾಗ ಬರುವ ಆಂಬುಲೆನ್ಸ್ ಹಾಗೂ ರೋಗಿಗಳಿಗೆ ಮತ್ತು ಹಿರಿಯ ನಾಗರಿಕರಿಗೆ ಬಹಳ ತೊಂದರೆಯಾಗುತ್ತಿದ್ದು, ಮಹಾನಗರಪಾಲಿಕೆಯವರು ಈ ಕೂಡಲೇ ತ್ವರಿತಗತಿಯಲ್ಲಿ ಕಾಮಗಾರಿ ನಡೆಸಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ನಿವಾರಣೆ ಮಾಡಿಕೊಡಬೇಕೆಂದು ಆಗ್ರಹಿಸಿದರು.

ಇದೇ ವೇಳೆ ಮಾತನಾಡಿದ ನಗರ ಪಾಲಿಕೆ ಮಾಜಿ ಸದಸ್ಯ ಎಂ.ಡಿ.ಪಾರ್ಥಸಾರಥಿ, ಗುತ್ತಿಗೆದಾರರು ಹಣದ ಆಸೆಗಾಗಿ ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಿ ರಸ್ತೆ ನಿರ್ಮಿಸುತ್ತಾರೆ. ಮಳೆಗಾಲದಲ್ಲಿ ಕೆಲವೆಡೆ ಅತಿ ಹೆಚ್ಚು ಮಳೆ ಬೀಳುವ ಕಾರಣ ವಾಹನ ದಟ್ಟಣೆಯಿಂದ ರಸ್ತೆಗಳು ಬೇಗನೆ ಹಾಳಾಗಿ ಅಪಘಾತಕ್ಕೆ ಎಡೆ ಮಾಡಿ ಕೊಡುತ್ತದೆ. ಆದ್ದರಿಂದ ಸಂಬಂಧಿಸಿದ ಇಲಾಖೆ ಇದನ್ನು ತಪ್ಪಿಸಲು ಕಳಪೆ ಕಾಮಗಾರಿಯ ರಸ್ತೆಗಳನ್ನು ಪರಿಶೀಲಿಸಿ, ಅಂತಹ ಕಾಮಗಾರಿಗಳನ್ನು ಕೂಡಲೇ ನಿಲ್ಲಿಸಿ ಉತ್ತಮ ರಸ್ತೆಯ ಕಾಮಗಾರಿಯನ್ನು ಮಾಡಲು ಮುಂದಾಗಬೇಕು. ಇದರಿಂದ ರಸ್ತೆ ಅಪಘಾತಗಳನ್ನು ತಪ್ಪಿಸುವುದಲ್ಲದೆ ಸುಗಮ ಸಂಚಾರವೂ ಸಾಧ್ಯವಾಗುತ್ತದೆ ಎಂದರು.
ಪ್ರತಿಭಟನೆ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳಾದ ಡಿ.ಕೆ.ನಾಗಭೂಷಣ್, ಪೇಪರ್ ಮಂಜು, ನಾಗೇಶ್, ಯೋಗೇಶ್, ನಾಗರಾಜು, ಸಂತೋಷ್, ಶ್ರೀನಿವಾಸ್ ಹಾಗೂ ಇನ್ನಿತರರು ಹಾಜರಿದ್ದರು.