ಓಲಾ ಅಟ್ಯಾಚ್ಡ್ ವಾಹನ ಚಾಲಕರಿಂದ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ 2ನೇ ದಿನಕ್ಕೆ

ಮೈಸೂರು: ಅಟ್ಯಾಚ್ಡ್ ಮತ್ತು ಲೀಸಿಂಗ್ ವಾಹನಗಳಿಗೆ ಸರಿ ಸಮಾ ನಾಂತರವಾದ ಬುಕ್ಕಿಂಗ್ ಹಾಗೂ ಒಂದೇ ಆ್ಯಪ್ ಬಳಸಬೇಕು. ಲೀಸ್ ವಾಹನಗಳಿಗೆ ಒಬ್ಬರೇ ಚಾಲಕರನ್ನು ನಿಗದಿ ಮಾಡಬೇಕು. ಇನ್ನು ಮುಂದೆ ಹೊಸದಾಗಿ ಯಾವುದೇ ಲೀಸಿಂಗ್ ವಾಹನಗಳನ್ನು ನೀಡಬಾರದು. ಹಳೇ ಎಂಬಿಜಿ ಪ್ಲಾನ್ ನೀಡಬೇಕು ಹಾಗೂ ಇಂಧನ ದರ ಹೆಚ್ಚಾಗಿರುವುದರಿಂದ ಎಂಬಿಜಿಯಲ್ಲಿ ಹೆಚ್ಚಿನ ದರ ನೀಡಬೇಕು. ಇರುವ ವಾಹನಗಳಿಗೆ ಆಡಿಟಿಂಗ್ ಮತ್ತು ಔಟ್ ಸ್ಟೇಷನ್ ರೆಂಟಲ್ ನೀಡಬೇಕು ಎಂದು ಆಗ್ರಹಿಸಿ ಓಲಾ ಚಾಲಕರು ಮೈಸೂರಿನ ನ್ಯೂ ಕಾಂತರಾಜ ಅರಸ್ ರಸ್ತೆಯಲ್ಲಿರುವ ಓಲಾ ಕಚೇರಿ ಎದುರು ನಡೆಸುತ್ತಿರುವ ಪ್ರತಿಭಟನೆ ಭಾನುವಾರ 2ನೇ ದಿನಕ್ಕೆ ಕಾಲಿಟ್ಟಿತು.

ಓಲಾ ಕಂಪನಿಯವರು ಮಾಡುತ್ತಿರುವ ಅನ್ಯಾಯಗಳನ್ನು ವಿರೋಧಿಸಿ, ನ್ಯಾಯಕ್ಕಾಗಿ ಆಗ್ರಹಿಸಿ ನೂರಕ್ಕೂ ಹೆಚ್ಚು ಓಲಾ ವಾಹನ ಚಾಲಕರು, ತೋಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಅನಿರ್ದಿಷ್ಟ ಅವಧಿಯ ಶಾಂತಿಯುತ ಪ್ರತಿಭಟನೆ ನಡೆಸುತಿದ್ದಾರೆ. ಅರಮನೆ ನಗರಿ ಸಾರಥಿ ಸೇನೆ ಕಾರ್ಮಿಕರ ಸಂಘದ ಆಶ್ರಯದಲ್ಲಿ ಪ್ರತಿಭಟನೆ 2ನೇ ದಿನಕ್ಕೆ ಕಾಲಿಟ್ಟಿದ್ದರೂ ಓಲಾ ಕಂಪನಿಯ ಯಾರೊಬ್ಬ ಅಧಿಕಾರಿಯೂ ಚಾಲಕರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.

ಮೈಸೂರಿನಿಂದ 10-12 ಕಿ.ಮೀ ವ್ಯಾಪ್ತಿಯಲ್ಲಿ ಅಟ್ಯಾಚ್ಡ್ ವಾಹನಗಳಿಗೆ ಗ್ರಾಹಕರು ಬುಕ್ ಮಾಡಿದರೂ ಕಂಪನಿಯವರು ನಮಗೆ ಬುಕಿಂಗ್ ನೀಡುತ್ತಿಲ್ಲ. ಕೆಲಸ ಇಲ್ಲದೇ ಚಾಲಕರು ಕಂಗಾಲಾಗಿದ್ದೇವೆ. ಹೀಗಿದ್ದರೂ ಲೀಸ್ ಗಾಡಿಗಳನ್ನು ತಂದಿದ್ದಾರೆ. ಇದರಿಂದ ನಮ್ಮಂತಹ ಬಡವರಿಗೆ ಅನ್ಯಾಯವಾಗುತ್ತಿದೆ. ಗಾಡಿ ಖರೀದಿಸಲಾಗದ ಚಾಲಕರಿಗೆ ಕಂಪನಿಯೇ ಗಾಡಿ ಕೊಡುವುದಾಗಿ ಸರ್ಕಾರಕ್ಕೆ ನೀಡಿದ ಮಾತಿನಂತೆ ನಡೆದುಕೊಳ್ಳುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಕಂಪನಿ ಅಧಿಕಾರಿಗಳು ನಾಳೆ ನಮ್ಮ ಪ್ರತಿಭಟನೆಗೆ ಸ್ಪಂದಿಸದಿದ್ದರೆ ಪ್ರತಿಭಟನೆ ತೀವ್ರಗೊಳಿಸುವುದಾಗಿ ನೇತೃತ್ವ ವಹಿಸಿರುವ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಎಂ.ರೋಹಿತ್‍ರಾಜ್ ತಿಳಿಸಿದ್ದಾರೆ.