ಬೀದಿಬದಿ ವ್ಯಾಪಾರಕ್ಕೆ ಅವಕಾಶ ನೀಡಲು ಆಗ್ರಹಿಸಿ ಪ್ರತಿಭಟನೆ

ಹಾಸನ: ಬೀದಿಬದಿ ವ್ಯಾಪಾರಕ್ಕೆ ಅವಕಾಶ ನೀಡುವಂತೆ ಆಗ್ರಹಿಸಿ ಡಿವೈ ಎಫ್‍ಐ ನೇತೃತ್ವದಲ್ಲಿ ವ್ಯಾಪಾರಸ್ಥರು ಡಿಸಿ ಕಚೇರಿ ಎದುರು ಪ್ರತಿಭಟಿಸಿದರು.

ಹಾಸನ ನಗರದ ಎನ್.ಆರ್ ವೃತ್ತ ಮತ್ತು ಪ್ರವಾಸಿ ಮಂದಿರದ ರಸ್ತೆ ಬದಿ ಯಲ್ಲಿ ಹತ್ತಾರು ವರ್ಷಗಳಿಂದಲೂ ಆರ್ಥಿಕವಾಗಿ ಹಿಂದುಳಿದ ಬಡವರು ಟೀ-ಕಾಫಿ, ಕ್ಯಾಂಟೀನ್, ಪಾನಿಪುರಿ ಗಾಡಿ, ಚಪ್ಪಲಿ ರಿಪೇರಿ, ತಂಪು ಪಾನಿಯ ಮಾರಾಟ, ಸಣ್ಣ-ಪುಟ್ಟ ಬಟ್ಟೆ ಅಂಗಡಿ ಸೇರಿದಂತೆ ಇನ್ನಿತರೆ ವ್ಯಾಪಾರ ಕಾಯಕ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇಂತಹ ಸಣ್ಣ-ಪುಟ್ಟ ವ್ಯಾಪಾರವೇ ಈ ಜನರ ಜೀವನಾಧಾರವಾಗಿದೆ. ಆದರೆ ಇಂತಹ ಬೀದಿಬದಿ ವ್ಯಾಪಾರಸ್ಥರಿಗೆ ಯಾವುದೇ ಮುಂಗಡ ನೋಟೀಸ್ ನೀಡದೆ, ಶುಕ್ರವಾರ ಬೆಳಿಗ್ಗೆ ಜಿಲ್ಲಾಡಳಿತ ಮತ್ತು ನಗರಸಭೆಯು ಏಕಾಏಕಿ ವ್ಯಾಪಾರವನ್ನು ತೆರವುಗೊಳಿಸಿದೆ. ಇದು ಅತ್ಯಂತ ಅಮಾನವೀಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ತೆರವು ಕಾರ್ಯಾಚರಣೆ ವೇಳೆ ವ್ಯಾಪಾರ ಗಾಡಿಗಳು, ಸಲಕರಣೆಗಳು, ಪೆಟ್ಟಿಗೆ ಅಂಗಡಿಗಳು ಜಖಂಗೊಳಿಸಲಾಗಿದೆ ಎಂದು ವ್ಯಾಪಾರಸ್ಥರು ತಮ್ಮ ಅಳಲು ತೋಡಿಕೊಂಡರು.

ಬೀದಿಬದಿ ವ್ಯಾಪಾರ ಮಾಡುವವರ ರಕ್ಷಣೆಗಾಗಿ ಇರುವ ಕಾಯ್ದೆ ಪ್ರಕಾರ ಸರ್ಕಾರವೇ ಅವರಿಗೆ ಹಲವು ಸವಲತ್ತು ಮತ್ತು ರಕ್ಷಣೆ ಒದಗಿಸುವ ಬದಲು ಏಕಾಏಕಿ ಎತ್ತಂಗಡಿ ಮಾಡಿಸಿ ಬಡ ವ್ಯಾಪಾರಸ್ಥರ ಹೊಟ್ಟೆಯ ಮೇಲೆ ಹೊಡೆಯುತ್ತಿದೆ ಎಂದು ಸಮಾಧಾನ ವ್ಯಕ್ತಪಡಿಸಿದರಲ್ಲದೆ, ಜಿಲ್ಲಾ, ಸ್ಥಳೀಯ ಆಡಳಿತದ ನಡೆಯನ್ನು ಇದೇ ವೇಳೆ ಖಂಡಿಸಿದರು.

ಎನ್.ಆರ್ ವೃತ್ತ ಮತ್ತು ಪ್ರವಾಸಿ ಮಂದಿರದ ಆಸುಪಾಸು ಸೇರಿದಂತೆ ಇತರೆಡೆ ವ್ಯಾಪಾರ ನಡೆಸಿ ಜೀವನ ಸಾಗಿಸುತ್ತಿರುವ ಬಡ ವ್ಯಾಪಾರಿಗಳಿಂದ ತೊಂದರೆಯಾಗಲಿ, ಆಶುಚಿತ್ವವಾಗಲಿ ಆಗಿಲ್ಲ. ಸಾರ್ವಜನಿಕರಿಗೆ ತೊಂದರೆಯಾಗದಂತೆ ರಸ್ತೆಬದಿ ವ್ಯಾಪಾರ ಮಾಡಲಾಗುತ್ತಿದೆ. ಕೂಡಲೇ ಮೊದಲು ಇದ್ದ ಜಾಗದಲ್ಲಿಯೇ ಬಡ ವ್ಯಾಪಾರಸ್ಥರಿಗೆ ವ್ಯಾಪಾರಕ್ಕೆ ಅವಕಾಶ ಮಾಡಿ ಕೊಟ್ಟು ಸೂಕ್ತ ರಕ್ಷಣೆ ಹಾಗೂ ಸೌಕರ್ಯ ಒದಗಿಸಬೇಕು. ಅಲ್ಲದೆ ಜಖಂಗೊಂಡಿರುವ ವ್ಯಾಪಾರದ ಗಾಡಿಗಳು ಹಾಗೂ ಸಲಕರಣೆಗಳ ನಷ್ಟ ಭರಿಸಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಡಿವೈಎಫ್‍ಐ ಜಿಲ್ಲಾ ಕಾರ್ಯದರ್ಶಿ ಎಂ.ಜಿ.ಪೃಥ್ವಿ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಅರವಿಂದ್ ಹಾಗೂ ಬೀದಿಬದಿ ವ್ಯಾಪಾರಸ್ಥರಾದ ಪ್ರಕಾಶ್, ಪರಮೇಶ್, ವಾಜೀದ್, ತೀರ್ಥ ಕುಮಾರ್, ಜ್ಞಾನೇಶ್ವರಿ, ಮಂಜುಳಾ ಶರತ್, ಗಿರೀಶ್ ಇತರರಿದ್ದರು.