ಕೆಪಿಎಸ್‍ಸಿ ನೇರ ನೇಮಕಾತಿಗೂ ಮೀಸಲಾತಿಗೆ ಆಗ್ರಹಿಸಿ ದಸಂಸ ಪ್ರತಿಭಟನೆ

ಮೈಸೂರು:  ಕೆಪಿಎಸ್‍ಸಿ ನೇರ ನೇಮಕಾತಿಯಲ್ಲೂ ಮೀಸಲಾತಿ ನಿಯಮ ಅನುಸರಿಸಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.

ಶನಿವಾರ ಕಾಡಾ ಕಚೇರಿ ಆವರಣ ದಿಂದ ಪುರಭವನದ ಡಾ.ಬಿ.ಆರ್.ಅಂಬೇ ಡ್ಕರ್ ಪ್ರತಿಮೆವರೆಗೆ ಪಂಜಿನ ಮೆರವಣಿಗೆ ನಡೆಸಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಂವಿಧಾನದಲ್ಲಿ ಉಲ್ಲೇ ಖಿಸಿರುವಂತೆ ಶಿಕ್ಷಣ, ಉದ್ಯೋಗ, ರಾಜ ಕೀಯದಲ್ಲಿ ಮೀಸಲಾತಿ ನೀಡಲೇಬೇಕು. ಎಸ್ಸಿಗಳಿಗೆ ಶೇ.15, ಎಸ್ಟಿ 3, ಪ್ರವರ್ಗ 1ಕ್ಕೆ 4, ಪ್ರವರ್ಗ 2ಎಗೆ ಶೇ.15, ಪ್ರವರ್ಗ 2ಬಿ ಗೆ ಶೇ.4, ಪ್ರವರ್ಗ 3ಎಗೆ ಶೇ.4, ಪ್ರವರ್ಗ 3ಬಿ ಗೆ ಶೇ.5 ಸೇರಿದಂತೆ ಒಟ್ಟು ಶೇ 50ರಷ್ಟು ಮೀಸಲಾತಿಯನ್ನು ನೀಡಬೇಕು. ಉಳಿದ ಶೇ.50 ಅನ್ನು ಸಾಮಾನ್ಯ ವರ್ಗವೆಂದು ಪರಿಗಣಿಸಲಾಗಿದೆ. ಆದರೆ, ಇದು ಪಾಲನೆ ಯಾಗುತ್ತಿಲ್ಲ ಎಂದು ಆರೋಪಿಸಿದರು.

ಉದ್ಯೋಗದಲ್ಲಿ ನೇರ ನೇಮಕಕ್ಕೆ ಅರ್ಹತೆ ಇರುವ ಪ್ರತಿಭಾನ್ವಿತ ಎಲ್ಲ ಮೀಸಲು ವರ್ಗದ (ಎಸ್‍ಸಿ, ಎಸ್‍ಟಿ, ಹಿಂದುಳಿದ, ಅಲ್ಪಸಂಖ್ಯಾತ) ಅಭ್ಯರ್ಥಿಗಳು ಸಾಮಾನ್ಯ ವರ್ಗದಲ್ಲೂ ಆಯ್ಕೆಯಾಗಬಹುದು. ಈ ಹಿಂದೆ ಇ.ವಿ.ದೀಪ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸಾಮಾನ್ಯ ವರ್ಗವನ್ನು ‘ಓಪನ್ ಕೆಟಗರಿ’, ‘ಅನ್-ರಿಸರ್ವ್ ಕೆಟಗರಿ’ ಎಂದು ತೀರ್ಪು ನೀಡಿ ಸ್ಪಷ್ಟೀಕರಿ ಸಿದೆ. ವಾಸ್ತವ ಹೀಗಿದ್ದರೂ ಕರ್ನಾಟಕ ಹೈಕೋರ್ಟ್, ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಅವೈಜ್ಞಾನಿಕವಾಗಿ ಆದೇಶ ನೀಡಿದೆ ಎಂದು ಆರೋಪಿಸಿದರು.

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‍ಸಿ), ನ್ಯಾಯಾಲಯ ಆದೇಶದ ನೆಪದಲ್ಲಿ ನೇರ ನೇಮಕಕ್ಕೆ ಅರ್ಹತೆ ಇರುವ ಪ್ರತಿಭಾವಂತ ಮೀಸಲು ವರ್ಗದ ಅಭ್ಯರ್ಥಿಗಳನ್ನು ಅವಕಾಶ ವಂಚಿತರ ನ್ನಾಗಿ ಮಾಡುತ್ತಿದೆ. ಇದನ್ನು ದಸಂಸ ಖಂಡಿಸುತ್ತದೆ ಎಂದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಮಾತನಾಡಿ, ಕೆಪಿ ಎಸ್‍ಸಿ ನೇರ ನೇಮಕಾತಿಯಲ್ಲೂ ಮೀಸ ಲಾತಿ ನಿಯಮ ಅನುಸರಿಸಬೇಕು. ಇಲ್ಲೂ ಇದು ಪಾಲನೆಯಾಗದೇ ಇರುವುದು ಬೇಸರ ಮೂಡಿಸಿದೆ ಎಂದು ಟೀಕಿಸಿದರು.
ಸಮಿತಿಯ ಉಪ ವಿಭಾಗೀಯ ಸಂಚಾಲಕ ಯಡತೊರೆ ಮಹದೇವಯ್ಯ, ಜಿಲ್ಲಾ ಖಜಾಂಚಿ ಕೆ.ವಿ.ದೇವೇಂದ್ರ, ಮುಖಂಡರಾದ ಬಿಳಿಕೆರೆ ದೇವರಾಜ್, ಟಿ.ಎಂ.ಗೋವಿಂದರಾಜು, ಬೊಮ್ಮನಹಳ್ಳಿ ಮಹದೇವ, ಮುರುಡಹಳ್ಳಿ ಮಹದೇವ, ಸಣ್ಣಯ್ಯ, ಪುನೀತ, ಮುರಳಿಕೃಷ್ಣ ಮತ್ತಿತರರು ಭಾಗವಹಿಸಿದ್ದರು.